ಚೆಟ್ಟಳ್ಳಿ, ಜು. ೩: ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಕೇಂದ್ರದಲ್ಲಿ ವಿವಿಧ ಬಗೆಯ ಬೆಣ್ಣೆಹಣ್ಣು, ಮಾಡ ಹಾಗಲಕಾಯಿ ಕಾರ್ಯಾಗಾರ ಹಾಗೂ ಕ್ಷೇತ್ರೋತ್ಸವ ಕೃಷಿಕರ ಗಮನ ಸೆಳೆಯಿತು. ವೈಜ್ಞಾನಿಕ ಕೃಷಿಯ ಬಗ್ಗೆ ರೈತರ ಜ್ಞಾನವನ್ನು ಉತ್ಕೃಷ್ಟಗೊಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಕೇಂದ್ರದ ಸಂಶೋಧಿತ ತಳಿಯಾದ ಅರ್ಕಾ ಸುಪ್ರೀಮ್, ದೇಶ ವಿದೇಶಗಳಲ್ಲಿ ಹೆಸರುಗಳಿಸಿರುವ ಹ್ಯಾಸ್ ಅವಕಾಡೋ ಸೇರಿದಂತೆ ೮೦ಕ್ಕೂ ಅಧಿಕ ಹಾಗೂ ೭ ವಿದೇಶಿ ಬೆಣ್ಣೆಹಣ್ಣಿನ ತಳಿಗಳು ಹಾಗೂ ಕೇಂದ್ರದ ಅರ್ಕಾ ಭಾರತ್ ಸೇರಿ ೩೦ಕ್ಕೂ ಹೆಚ್ಚು ಮಾಡಹಾಗಲಗಳನ್ನು ಪ್ರದರ್ಶನಕ್ಕಿಡಲಾಗಿತ್ತು.
ಚೆಟ್ಟಳ್ಳಿಯ ತೋಟಗಾರಿಕಾ ಕೇಂದ್ರದಲ್ಲಿ ಬೆಳೆದ ಮ್ಯಾಂಗೊಸ್ಟೀನ್, ಗಜನಿಂಬೆ, ಸ್ಟಾರ್ಆಪಲ್, ಸ್ಟಾರ್ ಫ್ರೂಟ್, ಕಿತ್ತಳೆ, ಸೀತಾಫಲ, ಚಕೋತಾ ಹಾಗೂ ವಿವಿಧ ಬಗೆಯ ಹಣ್ಣುಹಂಪಲುಗಳ ಜೊತೆ ಟೈಕ್ರೋಡರ್ಮ, ಅಣಬೆ ಬೀಜ, ಹಣ್ಣನ್ನು ಬಾಧಿಸುವ ವಿವಿಧ ಬಗೆಯ ಕೀಟಗಳು ಪ್ರದರ್ಶನಗೊಂಡವು.
ಜಿಲ್ಲೆಯ ಆಸಕ್ತ ರೈತರ ಜೊತೆ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಹಾಸನ, ವೈನಾಡ್, ಮೈಸೂರು, ಕೇರಳ, ತಮಿಳುನಾಡಿನಿಂದ ಆಗಮಿಸಿದ್ದ ರೈತರು ಮಾಹಿತಿ ಪಡೆದರು.
ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕಿ ಡಾ. ಡೆಬಿಶರ್ಮಾ ಬೆಣ್ಣೆಹಣ್ಣು ಹಾಗೂ ಮಾಡಹಾಗಲ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಕಾಫಿ ಬೆಳೆಯ ಜೊತೆ ತೋಟಗಾರಿಕಾ ಬೆಳೆಯನ್ನು ಬೆಳೆಸುವಂತಾಗಬೇಕು. ಕೇಂದ್ರೀಯ ತೋಟಗಾರಿಕಾ ಸಂಸ್ಥೆ ವಿವಿಧ ತಳಿ ಅಭಿವೃದ್ಧಿಗೆ ಸಹಕರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕಾಫಿ ಮಂಡಳಿ ಸಹಯೋಗದಲ್ಲಿ ಕೇಂದ್ರೀಯ ತೋಟಗಾರಿಕಾ ಇಲಾಖೆ ಕೈಜೊಡಿಸುವುದರ ಮೂಲಕ ಬೆಳೆಗಾರರಿಗೆ ಸಹಕಾರ ನೀಡಲಿದೆ ಎಂದರು.
ಕಾಫಿ ಬೆಳೆಗಾರರು ಹಾಗೂ ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷರೂ ಆದ ಬೋಸ್ ಮಂದಣ್ಣ ಮಾತನಾಡಿ, ಕೊಡಗಿನ ವಾತಾವರಣಕ್ಕೆ ಸೂಕ್ತವಾದ ಬೆಣ್ಣೆಹಣ್ಣು ಹಾಗೂ ಮಾಡಹಾಗಲ ಬೆಳೆಯನ್ನು ಹಿಂದಿನ ಕಾಲದಿಂದಲೂ ಬೆಳೆಸಲಾಗುತ್ತಿದ್ದರೂ, ಚೆಟ್ಟಳ್ಳಿಯ ತೋಟಗಾರಿಕಾ ಕೇಂದ್ರದಲ್ಲಿ ಹಲವು ತಳಿಗಳ ಅಭಿವೃದ್ಧಿ ಕಾರ್ಯನಡೆಯುತ್ತಿದೆ ಎಂದರು.
ಚಿಕ್ಕಮಗಳೂರು ಬಾಳೆ ಹೊನ್ನೂರಿನ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದ ಸಂಶೋಧನಾ ವಿಭಾಗದ ನಿರ್ದೇಶಕ ಡಾ. ಸೆಂಥಿಲ್ಕುಮಾರ್ ಮಾತನಾಡಿ ಪಾರಂಪರಿಕ ಬೆಳೆಯಾದ ಕಾಫಿಯ ಜೊತೆಗೆ ಮಣ್ಣಿನ ಸಂವರ್ಧನೆ ಹಾಗೂ ಪರಿಸರದ ಕಾಳಜಿಯೊಂದಿಗೆ ತೋಟಗಾರಿಕಾ ಬೆಳೆಯನ್ನು ಬೆಳೆಯುವ ಮೂಲಕ ಕಾಫಿ ಬೆಳೆಯಲ್ಲಿ ವ್ಯತ್ಯಾಸವಾದಾಗ ಆದಾಯ ಸರಿದೂಗಲು ಸಾಧ್ಯವಾಗುತ್ತದೆ ಎಂದರು.
ರೈತರಿಗೆ ಪ್ರಯೋಜನಕಾರಿಯಾದ ತಾಂತ್ರಿಕ ಕೈಪಿಡಿ ಹಾಗೂ ಬೆಣ್ಣಿಹಣ್ಣು ಹಾಗೂ ಮಾಡಹಾಗಲ ಬೆಳೆಯ ಬೇಸಾಯ ಕ್ರಮದ ವಿಸ್ತರಣಾ ಪತ್ರಿಕೆಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು.
ಭಾರತದಲ್ಲಿ ಬೆಣ್ಣೆಹಣ್ಣು, ಮಾಡಹಾಗಲ ಬೆಳೆ, ಮಾರುಕಟ್ಟೆ, ಕೀಟಬಾಧೆ ಹಾಗೂ ನಿರ್ವಹಣೆಯ ಕ್ರಮದ ಬಗ್ಗೆ ಬೆಂಗಳೂರು ಹಾಗೂ ಕೇಂದ್ರದ ನುರಿತ ವಿಜ್ಞಾನಿಗಳು ತಾಂತ್ರಿಕ ಸಮಾವೇಶದ ಕಾರ್ಯಾಗಾರದಲ್ಲಿ ಬೆಳೆಗಾರರಿಗೆ ತಿಳಿಸಿದರು. ಕಾರ್ಯಾಗಾರದಲ್ಲಿ ವಿವಿಧ ಜಿಲ್ಲೆಗಳ ತೋಟಗಾರಿಕಾ ಇಲಾಖಾಧಿಕಾರಿಗಳು ಕಾಪಿ üಮಂಡಳಿ, ಸಂಬಾರ ಮಂಡಳಿ, ಟಾಟಾ ಸಂಸ್ಥೆ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.
ಕೇಂದ್ರದ ತೋಟದಲ್ಲಿ ಬೆಳೆದ ವಿವಿಧ ತಳಿಯ ಗಿಡಗಳ ಬಗ್ಗೆ ಪ್ರಾತ್ಯಕ್ಷಿಕೆ ನೆರವೇರಿತು.
ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಪ್ರಧಾನ ಸಂಶೋಧಕರು ಹಾಗೂ ಹಣ್ಣಿನ ಬೆಳೆಯ ಮೇಲ್ವಿಚಾರಕರಾದ ಡಾ. ರೀಜು ಎಂ. ಕುರಿಯನ್ ಸ್ವಾಗತಿಸಿ, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಹಾಗೂ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಕೇಂದ್ರದ ಮೇಲ್ವಿಚಾರಕ ಡಾ. ಸಜುಜಾರ್ಜ್ ವಂದಿಸಿದರು.