ಮಡಿಕೇರಿ, ಜು. ೩: ಕೊಡಗು ಜಿಲ್ಲೆಯ ವಿವಿಧೆಡೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹಲವಾರು ಅಪರಾಧ ಕೃತ್ಯಗಳು ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿ ನಿಜಕ್ಕೂ ಆತಂಕಕಾರಿಯಾಗಿದೆ. ಮನೆ ಕಳವು, ದರೋಡೆ, ಮುಸುಕುಧಾರಿ ವ್ಯಕ್ತಿಗಳಿಂದ ನಡೆಯುತ್ತಿರುವ ಕೃತ್ಯಗಳು ಕೊಡಗಿನ ಜನತೆಗೆ ಎಚ್ಚರಿಕೆಯ ಗಂಟೆಯಾಗಿದೆ.

ಪ್ರಸ್ತುತ ನಡೆದಿರುವ ಇಂತಹ ಘಟನೆಗಳ ಹಿನ್ನೆಲೆಯಲ್ಲಿ ಜನತೆ ಎಚ್ಚೆತ್ತುಕೊಳ್ಳಲೇಬೇಕಾಗಿದೆ. ಇದರೊಂದಿಗೆ ಪೊಲೀಸ್ ಇಲಾಖೆಯೂ ಒಂದಷ್ಟು ಬಿಗಿಯಾಗುವ ಅನಿವಾರ್ಯತೆ ಕಂಡುಬರುತ್ತಿದೆ.

ಬಹುತೇಕ ಪ್ರಕರಣಗಳಲ್ಲಿ ಪರ ರಾಜ್ಯದಿಂದ ಅದರಲ್ಲೂ ಉತ್ತರ ಭಾರತದ ರಾಜ್ಯಗಳಿಂದ ಕೆಲಸಕ್ಕಾಗಿ ಆಗಮಿಸಿರುವ ಕಾರ್ಮಿಕರಿಂದ ಅಪರಾಧಕೃತ್ಯಗಳು ನಡೆದಿರುವುದು ಬೆಳಕಿಗೆ ಬಂದಿದೆ. ಕೆಲಸ ಅರಸಿ ಬರುವ ಇಂತಹ ಕಾರ್ಮಿಕರ ಬಗ್ಗೆ ಪೊಲೀಸ್ ಇಲಾಖೆಗೆ ಸೂಕ್ತ ವಿವರಗಳನ್ನು, ಭಾವಚಿತ್ರ ಸಹಿತವಾಗಿ ನೀಡುವಂತೆ ಪದೇ ಪದೇ ಎಚ್ಚರಿಸುತ್ತಿದ್ದರೂ, ಕೇವಲ ತಮ್ಮ ಕೆಲಸ ಕಾರ್ಯಗಳು ಮುಗಿದರಷ್ಟೇ ಸಾಕು ಎಂಬ ರೀತಿಯಲ್ಲಿ ಹಲವು ಮಾಲೀಕರು ನಿರ್ಲಕ್ಷö್ಯ ತೋರುತ್ತಿರುವುದರ ಪರಿಣಾಮದಿಂದಾಗಿ ಅಪರಾಧ ಕೃತ್ಯಗಳು ನಡೆಯಲು ಆಸ್ಪದವಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸ್ಥಳೀಯ ಠಾಣೆಯಲ್ಲಿ ಕಾರ್ಮಿಕರ ಮಾಹಿತಿ ಒದಗಿಸಲು ಸೂಚನೆಯನ್ನು ಪೊಲೀಸ್ ಇಲಾಖೆ ಆಗಿಂದಾಗ್ಗೆ ನೀಡುತ್ತಲೇ ಬರುತ್ತಿದೆ. ಆದರೆ ಇದಕ್ಕೆ ಸೂಕ್ತ ಮನ್ನಣೆ ದೊರೆಯದಿರುವುದು ಪೊಲೀಸ್ ಇಲಾಖೆಗೂ ಸಮಸ್ಯೆಯಾಗಿದೆ. ಪ್ರಸ್ತುತದ ಹಲವು ಆತಂಕಕಾರಿ ಘಟನೆಗಳಿಂದ ಜಿಲ್ಲೆಯ ಜನರು, ತೋಟದ ಮಾಲೀಕರು ಸೇರಿದಂತೆ ಪೊಲೀಸ್ ಇಲಾಖೆ ಕೂಡ

(ಮೊದಲ ಪುಟದಿಂದ) ಎಚ್ಚೆತ್ತುಕೊಳ್ಳಬೇಕಾಗಿದೆ. ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ಪಾಲಿಬೆಟ್ಟದಲ್ಲಿ ಇತ್ತೀಚೆಗೆ ಮನೆಯೊಂದರಲ್ಲಿ ಭಾರೀ ಕಳ್ಳತನವಾಗಿದ್ದು, ಅಪರಾಧಿಗಳು ಅಸ್ಸಾಂ ಮೂಲದವರೆಂಬ ಮಾಹಿತಿ ಲಭಿಸಿದೆ. ಕೆಲವರು ಬಂಧಿತರಾದರೂ ಇನ್ನೂ ಹಲವು ಆರೋಪಿಗಳ ಬಂಧನ ಇಲಾಖೆಗೆ ಸವಾಲಾಗಿದೆ. ಏಕೆಂದರೆ ಇಲ್ಲಿ ಕೃತ್ಯ ನಡೆಸಿದ ಬಳಿಕ ಜಿಲ್ಲೆಯಿಂದ ತಕ್ಷಣವೇ ಇವರು ಪಲಾಯನಗೈಯುತ್ತಾರೆ. ಇವರನ್ನು ಆ ರಾಜ್ಯದ ಅಡಗು ತಾಣದಿಂದ ಪತ್ತೆ ಹಚ್ಚಿ ಬಂಧಿಸುವುದು ಸ್ಥಳೀಯ ಪೊಲೀಸರಿಗೆ ಕ್ಲಿಷ್ಟಕರವಾದ ವಿಚಾರ.

ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲೇ ಗುಡ್ಲೂರು, ಮಾಲ್ದಾರೆಯಲ್ಲಿಯೂ ಇತ್ತೀಚೆಗೆ ವೃದ್ಧ ದಂಪತಿಗಳನ್ನು ಮೂವರು ಮುಸುಕುಧಾರಿಗಳು ಕೂಡಿ ಹಾಕಿ ನಗದು-ಚಿನ್ನಾಭರಣ ಅಪಹರಿಸಿರುವ ಪ್ರಕರಣವೂ ಪತ್ತೆಯಾಗಿಲ್ಲ. ಆದರೂ ಪೊಲೀಸ್ ಇಲಾಖೆ ತನ್ನ ಪ್ರಯತ್ನ ನಡೆಸುತ್ತಿದ್ದು, ಕೇವಲ ಇದರಲ್ಲಿ ಇಲಾಖೆಯನ್ನು ದೂಷಿಸಿ ಪ್ರಯೋಜನವಿಲ್ಲ ಎಂಬದು ಹಲವರ ಮಾತು.

ಬಾಳೆಲೆ ಸನಿಹದ ಸುಳುಗೋಡುವಿನಲ್ಲಿ ನಡೆದ ಮನೆಕಳವು, ಹಾತೂರು ಬಳಿ ನಡೆದ ಮಿಡ್‌ನೈಟ್ ದರೋಡೆ ಪ್ರಕರಣವನ್ನು ಇಲಾಖೆ ಪತ್ತೆ ಹಚ್ಚಿ ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿರುವುದು ಸ್ವಾಗತಾರ್ಹವಾಗಿದೆ. ಪೊರಾಡು ಗ್ರಾಮದಲ್ಲಿ ನಡೆದ ಮನೆ ಕಳವು ಪ್ರಕರಣವನ್ನೂ ಪೊಲೀಸರು ಭೇದಿಸಿದ್ದಾರೆ. ಗುಡ್ಡಗಾಡು ಪ್ರದೇಶವಾಗಿದ್ದು, ಒಂಟಿ ಮನೆಗಳು ಹೆಚ್ಚಾಗಿರುವ ಕೊಡಗಿನಲ್ಲಿ ಮತ್ತಷ್ಟು ಅಪರಾಧ ಪ್ರಕರಣಗಳು ನಡೆಯದಂತೆ ಸರ್ವರೂ ಜಾಗ್ರತೆ ವಹಿಸಬೇಕಿರುವುದು ಪ್ರಸ್ತುತದ ಅನಿವಾರ್ಯತೆಯಾಗಿದೆ.