ಭಾಗಮಂಡಲ, ಜು. 2: ಭಾಗಮಂಡಲ ವ್ಯಾಪ್ತಿಯಲ್ಲಿ ಅಧಿಕ ಮಳೆಯಾಗುತ್ತಿರುವ ಹಿನ್ನೆಲೆ ವಿವಿಧ ಇಲಾಖೆಗಳಿಂದ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಭೆ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಮಿತಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 0-5 ವರ್ಷದ ಒಳಗಿನ ಮಕ್ಕಳು, ಬಾಣಂತಿಯರು, ವಿಶೇಷಚೇತನರು ಹಾಗೂ ವಯಸ್ಕರನ್ನು ಮಳೆಗಾಲದಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಯಿತು. ಮಳೆಗಾಲದಲ್ಲಿ ತುರ್ತು ಸೇವೆಗೆ ಅಗತ್ಯವಿರುವ ಸ್ವಯಂಸೇವಕರನ್ನು, ನುರಿತ ಈಜುಗಾರರನ್ನು ನಿಯೋಜಿಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು. ವೈದ್ಯರು ಹಾಗೂ ತುರ್ತು ಸೇವೆ ಒದಗಿಸಲು ಆಂಬ್ಯುಲೆನ್ಸ್ ಬೇಡಿಕೆಗೆ ಜಿಲ್ಲಾ ಆರೋಗ್ಯ ಅಧಿಕಾರಿಗೆ ಪತ್ರ ಬರೆಯುವಂತೆ ತೀರ್ಮಾನಿಸಲಾಯಿತು. ಚೆಸ್ಕಾಂ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು. ಬಿಎಸ್‍ಎನ್‍ಎಲ್ ನೆಟ್ವರ್ಕ್ ಸಂಪರ್ಕ ಕಡಿತಗೊಳ್ಳದಂತೆ ಸಂಬಂಧಿಸಿದವರಿಗೆ ಪತ್ರ ಬರೆಯಲು ನಿರ್ಧರಿಸಲಾಯಿತು. ರಸ್ತೆ ಬದಿಯ ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಸೂಚಿಸಲಾಯಿತು. ಎನ್‍ಡಿಆರ್‍ಎಫ್ ತಂಡದ ಮಂದಿ ತರಬೇತಿಯಲ್ಲಿದ್ದು ಶೀಘ್ರ ಭಾಗಮಂಡಲಕ್ಕೆ ಆಗಮಿಸಲಿದ್ದಾರೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್ ಮಾತನಾಡಿ ಮೇಲ್ಸೇತುವೆ ಕಾಮಗಾರಿಗಾಗಿ ಬಳಸಲಾದ ಬೀಮುಗಳಿಂದ ಸ್ಥಳೀಯರಿಗೆ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇದ್ದು ಸ್ಥಳೀಯರು ಎಚ್ಚರದಿಂದಿರಬೇಕು ಎಂದರು.

ಬೋಟ್ ಮತ್ತು ರ್ಯಾಫ್ಟರ್ ಚಲಿಸಲು ಮಣ್ಣಿನ ರಾಶಿ ಅಡ್ಡಿಯಾಗುತ್ತಿದ್ದು, ಮಣ್ಣು ತೆಗೆದು ಸಂಚಾರಕ್ಕೆ ಅನುವು ಮಾಡಿಕೊಡಲು ತೀರ್ಮಾನಿಸಲಾಯಿತು.

ಕಂದಾಯ ಇಲಾಖೆಯಿಂದ ಅಪಾಯದಂಚಿನಲ್ಲಿರುವ ನೂರಕ್ಕೂ ಅಧಿಕ ಮನೆಗಳಿಗೆ ನೋಟೀಸ್ ನೀಡಿ ಭಾಗಮಂಡಲದ ಕಾಳಜಿ ಕೇಂದ್ರಗಳಾದ ಕಾಶಿಮಠ ಹಾಗೂ ಕೆ.ವಿ.ಜಿ. ಐ.ಟಿ.ಐ ಸ್ಥಳಕ್ಕೆ ತೆರಳಲು ಸಭೆಯಲ್ಲಿ ಮಾಹಿತಿ ನೀಡಲಾಯಿತು. ಅಗತ್ಯವಿದ್ದರೆ ವಾಜಪೇಯಿ ವಸತಿ ಶಾಲೆಯನ್ನು ಸಹ ಕಾಳಜಿ ಕೇಂದ್ರವಾಗಿ ಬಳಸಿಕೊಳ್ಳುವಂತೆ ನಿರ್ಧರಿಸಲಾಯಿತು.

ಸಭೆಯಲ್ಲಿ ವೈದ್ಯಾಧಿಕಾರಿ ಡಾ.ಪೆÇನ್ನಮ್ಮ, ಕಂದಾಯ ಪರಿವೀಕ್ಷಕ ಸದಾಶಿವ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದ, ಪಂಚಾಯಿತಿ ಸದಸ್ಯರು ಆಶಾ ಕಾರ್ಯಕರ್ತೆಯರು ಪೆÇಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.