ಚೆಯ್ಯಂಡಾಣೆ, ಜು ೩. ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊವ್ವೇರಿಯಂಡ, ಬಟ್ಟಿಯಂಡ, ಕೋಲಿರ, ಮಕ್ಕಿಮನೆ ಕುಟುಂಬಸ್ಥರ ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಭಗವತಿ ದೇವಸ್ಥಾನಕ್ಕೆ ತೆರಳುವ ಪ್ರಮುಖ ರಸ್ತೆ ತೀರ ಹದಗೆಟ್ಟಿದೆ.
ವಾಹನ ಸವಾರರು ಈ ರಸ್ತೆಯ ಮೂಲಕ ತೆರಳಲು ಹಿಂದೇಟು ಹಾಕುತ್ತಿದ್ದು, ರಸ್ತೆಯಲ್ಲಿ ಸಂಚರಿಸಿದ ವಾಹನಗಳು ಕೆಸರಿನಲ್ಲಿ ಹೂತು ಹೋಗುವುದು ಸರ್ವೇಸಾಮಾನ್ಯವಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಪಾದಚಾರಿಗಳಿಗೆ ಈ ರಸ್ತೆಯಲ್ಲಿ ಸಂಚರಿಸಲು ತೊಡಕಾಗುತ್ತಿದೆ. ಕೂಡಲೇ ಸಂಬAಧಪಟ್ಟ ಅಧಿಕಾರಿಗಳು ಹಾಗೂ ಶಾಸಕರುಗಳು ಸ್ವಂದಿಸಿ ರಸ್ತೆ ದುರಸ್ತಿಪಡಿಸಲು ಸ್ಥಳೀಯರು ಅಗ್ರಹಿಸಿದ್ದಾರೆ.
ಈ ರಸ್ತೆಗೆ ಮಳೆ ಪರಿಹಾರ ನಿಧಿಯಿಂದ ಹತ್ತು ಲಕ್ಷ ಅನುದಾನ ಮಂಜೂರಾಗಿದ್ದು, ಈ ತನಕ ಯಾವುದೇ ಕಾಮಗಾರಿ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಹಾಗೂ ಭಗವತಿ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಕೂಡಲೇ ಕಾಮಗಾರಿ ಆರಂಭಿಸಿ ಈ ಭಾಗದ ಗ್ರಾಮಸ್ಥರ, ಭಕ್ತಾದಿಗಳ ತೊಂದರೆಯನ್ನು ನೀಗಿಸಬೇಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ. -ವರದಿ: ಅಶ್ರಫ್