ಕಣಿವೆ, ಜು. 2: ಮೈಸೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಯಂಚಿನಲ್ಲಿ ಇರುವ ಕೊಡಗು ಜಿಲ್ಲೆಯ ಶೈಕ್ಷಣಿಕ ರಾಜಧಾನಿ ಕುಶಾಲನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಇದೀಗ ಬರೋಬ್ಬರಿ 188 ವಸಂತಗಳಾಗಿವೆ. ಅಂದರೆ ಇನ್ನು 12 ವರ್ಷ ಕಳೆದರೆ 200 ವರ್ಷಗಳು ಪೂರೈಸಲಿದೆ. 1834 ರಲ್ಲಿ ಬ್ರಿಟಿಷ್ ಸರ್ಕಾರ ಸ್ಥಾಪಿಸಿದ ಕೊಡಗು ಜಿಲ್ಲೆಯ ಏಕೈಕ ಕನ್ನಡ ಮಾಧ್ಯಮ ಶಾಲೆ ಇದಾಗಿತ್ತು ಎಂಬುದು ಇಲ್ಲಿ ಹೆಮ್ಮೆಯ ವಿಷಯ.
ಕಳೆದ 188 ವರ್ಷಗಳಿಂದಲೂ ಸಹಸ್ರಾರು ಮಂದಿಗೆ ವಿದ್ಯಾದಾನ ಮಾಡುತ್ತಾ ಬಂದಿರುವ ಈ ಶಾಲೆ ಇದೀಗ ಅವನತಿಯ ಅಂಚಿನಲ್ಲಿ ಇದ್ದರೂ ಕೂಡ ಜಿಲ್ಲಾಡಳಿತವಾಗಲಿ, ರಾಜಕಾರಣಿಗಳಾಗಲಿ, ಚುನಾಯಿತ ಜನಪ್ರತಿನಿಧಿಗಳಾಗಲಿ ಅಥವಾ ಶಿಕ್ಷಣ ಪ್ರೇಮಿಗಳಾಗಲಿ ಈ ಶಾಲೆಯ ಪ್ರಗತಿಗೆ ಮುಂದಾಗದಿರುವುದು ಮಾತ್ರ ವಿಷಾದನೀಯ.
ಇತಿಹಾಸದ ಶಾಲೆ
ಮೈಸೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಂಚಿನಲ್ಲಿ ಇರುವ ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಬಹು ದೊಡ್ಡ ಇತಿಹಾಸವಿದೆ. ವ್ಯಾಪಾರ ನಿಮಿತ್ತ ಭಾರತಕ್ಕೆ ಬಂದ ಬ್ರಿಟಿಷರು ಭಾರತವನ್ನು ತಮ್ಮ ಅಧೀನಕ್ಕೆ ತೆಗೆದುಕೊಂಡು 300 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದು ಚರಿತ್ರೆ.
ಅಂದು ಕೊಡಗು ಪ್ರಾಂತ್ಯವನ್ನು ಆಳುತ್ತಿದ್ದ ಚಿಕ್ಕವೀರರಾಜೇಂದ್ರರನ್ನು ಸೋಲಿಸಿ ತಮ್ಮ ವಶ ಮಾಡಿಕೊಳ್ಳುವ ತಂತ್ರ ರೂಪಿಸಿದ ಬ್ರಿಟಿಷರು ಕರ್ನಲ್ ಫ್ರೇಜರ್ ಎಂಬಾತನನ್ನು ಕಳುಹಿಸಿದ್ದರು. ಕುಶಾಲನಗರದ ತಾವರೆಕೆರೆ ಬಳಿ ಚಿಕ್ಕವೀರರಾಜೇಂದ್ರನ ಸೈನ್ಯವನ್ನು ಮಣಿಸಿ ಕೊಡಗು ಪ್ರಾಂತ್ಯವನ್ನು ತಮ್ಮ ಅಧೀನಕ್ಕೆ ಪಡೆದುಕೊಂಡ ಸಂತಸಕ್ಕೆ ಬ್ರಿಟಿಷ್ ಸರ್ಕಾರ ಫ್ರೇಜರ್ನಿಗೆ 300 ರೂಗಳ ನಗದು ಬಹುಮಾನ ನೀಡಿತು. ಈ ಕಾರಣಕ್ಕೆ ಇಂದಿನ ಕುಶಾಲನಗರಕ್ಕೆ ಅಂದು ಫ್ರೇಜರ್ಪೇಟೆ ಎಂದು ಹೆಸರು ಬಂತು.
ರೂ. 300 ಕೊಟ್ಟು ಶಾಲೆ ತೆರೆದ ಫ್ರೇಜರ್
ಕೊಡಗು ಪ್ರಾಂತ್ಯದ ಫ್ರೇಜರ್ ಪೇಟೆಯಲ್ಲಿ (ಇಂದಿನ ಕುಶಾಲನಗರ) ಮೊದಲ ಕನ್ನಡ ಶಾಲೆ ತೆರೆಯಲು ಫ್ರೇಜರ್, ತನಗೆ ಬ್ರಿಟಿಷ್ ಸರ್ಕಾರ ನೀಡಿದ್ದ 300 ರೂ.ಗಳ ಇಡುಗಂಟನ್ನು ಕುಶಾಲನಗರದ ದಿ. ನಂಜುಂಡ ಶೆಟ್ಟಿ ಎಂಬವರಲ್ಲಿಟ್ಟು ಕುಶಾಲನಗರದ ಈಗಿನ ಸರ್ಕಾರಿ ಆಸ್ಪತ್ರೆ ಜಾಗದ ಒಂದು ಮೂಲೆಯಲ್ಲಿ ಶಾಲೆಯನ್ನು ತೆರೆಯಲಾಗಿತ್ತು.
ಇದೇ ಸಂದರ್ಭ ಬ್ರಿಟಿಷ್ ಸರ್ಕಾರ ಪ್ರಜೆಗಳ ವೈದ್ಯಕೀಯ ಅನುಕೂಲಕ್ಕೆ ಕುಶಾಲನಗರದಲ್ಲಿ ಶಾಲೆ ನಡೆಯುತ್ತಿದ್ದ ಜಾಗದಲ್ಲಿಯೇ ಆಸ್ಪತ್ರೆಯನ್ನು ಮಂಜೂರು ಮಾಡಿತ್ತು. ಬಳಿಕ ಶಾಲೆಯನ್ನು ರಥಬೀದಿಯ ದಿ. ಪಿ.ಆರ್. ಕೃಷ್ಣ ಶೆಟ್ಟಿ ಎಂಬವರ ಜಾಗದಲ್ಲಿ ತೆರೆಯಲಾಯಿತು. ನಂತರ ಕುಶಾಲನಗರದ ಸರ್ಕಾರಿ ಬಸ್ ನಿಲ್ದಾಣದ ಮುಂಬದಿಯ ಹೂ ಅಂಗಡಿಗಳ ಬಳಿ ತೆರೆದಿದ್ದ ಧರ್ಮಛತ್ರ ಒಂದಕ್ಕೆ ಶಾಲೆಯನ್ನು ಸ್ಥಳಾಂತರಿಸಲಾಯಿತು.
ಬಳಿಕ ಧರ್ಮಛತ್ರಕ್ಕೆ ಬಂದು ಹೋಗುವವರ ಸಂಖ್ಯೆಯ ಹೆಚ್ಚಳದಿಂದಾಗಿ ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದ್ದ ಕಾರಣ ಮತ್ತೆ ಅಲ್ಲಿಂದ ಈಗಿರುವ ಜಾಗಕ್ಕೆ ಸ್ಥಳಾಂತರ ಮಾಡಲಾಯಿತು.
1949 ರಲ್ಲಿ ನಾಲ್ಕು ಕೊಠಡಿಗಳಿಗೆ ಶಂಕುಸ್ಥಾಪನೆ
ಕೊಡಗು ಸರ್ಕಾರದ ಚೀಫ್ ಕಮೀಷನರ್ ಆಗಿದ್ದ ದಿವಾನ್ ಬಹದ್ದೂರ್ ಸಿ.ಟಿ. ಮೂದಲಿಯಾರ್ 29-08-1949 ರಲ್ಲಿ ಶಾಲೆಯ ನಾಲ್ಕು ಕೊಠಡಿಗಳಿಗಾಗಿ ಶಂಕುಸ್ಥಾಪನೆ ನೆರವೇರಿಸಲಾಯಿತು.
5ನೇ ತರಗತಿ ವಾರ್ಷಿಕ ಪರೀಕ್ಷೆ
1 ರಿಂದ 5ನೇ ತರಗತಿವರೆಗೆ ಆರಂಭಿಸಿದ ಶಾಲೆಯ 5ನೇ ತರಗತಿಗೆ ವಾರ್ಷಿಕ ಪರೀಕ್ಷೆ ನಡೆದು 6ನೇ ತರಗತಿಗೆ ಅರ್ಹತೆ ಪಡೆಯುವವರು ದೂರದ ಮಡಿಕೇರಿಗೆ ತೆರಳಬೇಕಿತ್ತು. ಹಾಗಾಗಿ 6 ರಿಂದ 8ನೇ ತರಗತಿ ವರೆಗೆ ಹಿರಿಯ ಮೂಲ ಶಿಕ್ಷಣ ಶಾಲೆ ಎಂದು ತೆರೆಯಲಾಯಿತು. ನಂತರ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 5 ಮಂದಿ ಶಿಕ್ಷಕರಿಗೆ ಸರ್ಕಾರದಿಂದ ಸಂಬಳ ಕೊಟ್ಟರೆ, 3 ಮಂದಿ ಶಿಕ್ಷಕರಿಗೆ ಸ್ಥಳೀಯರಿಂದ ಸಂಗ್ರಹಿಸಿದ ಹಣದಲ್ಲಿ ಸಂಬಳ ನೀಡಲಾಗುತ್ತಿತ್ತು. ಸ್ಥಳೀಯರಿಂದ 3 ರೂ ಗಳನ್ನು ರಥಬೀದಿಯ ಮೈಲಾರ ಶೆಟ್ಟರು ಹಣ ಸಂಗ್ರಹಿಸುತ್ತಿದ್ದರು ಎಂದು ಕುಶಾಲನಗರದ ಹಿರಿಯ ನಾಗರೀಕರು ಹಾಗೂ ಶಿಕ್ಷಣ ಪ್ರೇಮಿ ಎಂ.ಹೆಚ್.ನಜೀರ್ ಅಹಮದ್ ವಿವರಿಸಿದ್ದಾರೆ.
ಮಹನೀಯರು ಓದಿದ ಶಾಲೆ
ಕುಶಾಲನಗರದ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರಾಜ್ಯವನ್ನಾಳಿದ ಮಾಜಿ ಮುಖ್ಯಮಂತ್ರಿ ದಿ. ಆರ್. ಗುಂಡೂರಾವ್, ವಿಶ್ವ ಕಂಡ ವೀರ ಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜಿಲ್ಲಾ ಪರಿಷತ್ ಅಧ್ಯಕ್ಷರಾಗಿದ್ದ ಜೆ.ಎ. ಕರುಂಬಯ್ಯ, ವಿಶ್ವ ಹಾಕಿಯಲ್ಲಿ ದೇಶಕ್ಕೆ ಕೀರ್ತಿ ತಂದ ಎ.ಬಿ. ಸುಬ್ಬಯ್ಯ ಹೀಗೆ ಅತಿರಥ ಮಹಾರಥರು ಈ ಶಾಲೆಯಲ್ಲಿ ವ್ಯಾಸಾಂಗ ಮಾಡಿದ್ದಾರೆ ಎಂದು ಅವರು ವಿವರಿಸಿದರು.
ಶತಮಾನೋತ್ಸವಕ್ಕೆ ಸಮಿತಿ ರಚನೆ?
ಶಾಲೆಯ ಶತಮಾನೋತ್ಸವ ಆಚರಿಸಲು ಕಳೆದ ಹತ್ತು ವರ್ಷಗಳ ಹಿಂದೆ ಶಾಲೆಯಲ್ಲಿ ಅಕ್ಷರ ಕಲಿತ ಹಳೆಯ ವಿದ್ಯಾರ್ಥಿಗಳು ಸೇರಿ ಶಾಲಾ ಶತಮಾನೋತ್ಸವ ಸಮಿತಿಯನ್ನು ರಚಿಸಿದ್ದರು. ಕಾಂಗ್ರೆಸ್ ಪ್ರಮುಖ ವಿ.ಪಿ. ಶಶಿಧರ್ ಸಮಿತಿಯ ಅಧ್ಯಕ್ಷರಾಗಿದ್ದರು. ಹಿರಿಯ ನಾಗರಿಕ ಎಂ.ಹೆಚ್. ನಜೀರ್ ಅಹಮದ್ ಗೌರವಾಧ್ಯಕ್ಷರು, ವಕೀಲ ಆರ್.ಕೆ. ನಾಗೇಂದ್ರ ಬಾಬು ಪ್ರಧಾನ ಕಾರ್ಯದರ್ಶಿಯಾಗಿ, ಎಸ್.ಕೆ. ಸತೀಶ್ ಕೋಶಾಧಿಕಾರಿಯಾಗಿದ್ದರು. ಈ ಮಧ್ಯೆ ಶಾಲೆಯ ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ ಹೊಸ ಕಟ್ಟಡದ ಸಮುಚ್ಛಯ ನಿರ್ಮಿಸಲು ಯೋಜನೆಯ ಯೋಚನೆಯಲ್ಲಿ ಸಮಿತಿ ಕಾರ್ಯಗತವಾಗಿತ್ತು.
ಒಳನುಸುಳಿದ ರಾಜಕೀಯ
ದ್ವಿಶತಮಾನೋತ್ಸವ ಕಾಣುತ್ತಿರುವ ಶಾಲೆಯನ್ನು ಜಿಲ್ಲೆಯಷ್ಟೇ ಅಲ್ಲ ರಾಜ್ಯದಲ್ಲೇ ಮಾದರಿ ಶಾಲೆಯಾಗಿ ರೂಪಿಸಲು ಯೋಜನೆ ರೂಪಿಸಿದ್ದ ಶತಮಾನೋತ್ಸವ ಸಮಿತಿಯೊಳಗೆ ದಶಕಗಳ ಹಿಂದೆ ಒಣ ರಾಜಕೀಯ ನುಸುಳಿತು. ಶತಮಾನೋತ್ಸವ ಆಚರಿಸಬೇಕಾದ ಸಮಿತಿ ದಶಮಾನೋತ್ಸವ ಕಳೆದರೂ ಕೂಡ ಒಂದೇ ಒಂದು ಸಭೆ ಕರೆದಿಲ್ಲ ಎಂದು ಕಾರ್ಯದರ್ಶಿ ನಾಗೇಂದ್ರ ಬಾಬು ಹೇಳುತ್ತಾರೆ.
ಈ ಮಧ್ಯೆ ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿರುವ ಶಾಲೆಯ ಹೆದ್ದಾರಿ ಬದಿ ಉದ್ದಕ್ಕೂ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿದರೆ ಶಾಲೆಗೆ ಗರಿಷ್ಠ ಆದಾಯ ಬರುತ್ತದೆ ಎಂಬುದು ಅಂದಿನ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹೆಚ್.ಎಸ್. ಅಶೋಕ್ ಅವರ ವಾದವಾಗಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿ ಒಂದು ವೇಳೆ ವಿಸ್ತರಣೆಯಾದಲ್ಲಿ ವಾಣಿಜ್ಯ ಕಟ್ಟಡಗಳಿರಲಿ ಶಾಲೆಯ ಕಟ್ಟಡಗಳೇ ಉಳಿಯಲ್ಲ ಎಂಬ ಭೀತಿಯೂ ಸಮಿತಿಯ ಗಮನಕ್ಕಿತ್ತು.
ಸಮಿತಿ ಸಕ್ರಿಯವಾಗಬೇಕಿದೆ
ಶಾಲಾ ಶತಮಾನೋತ್ಸವ ಸಮಿತಿ ಇನ್ನಾದರೂ ಸಕ್ರಿಯವಾಗುವ ಮೂಲಕ ತನ್ನ ಮೂಲ ಉದ್ದೇಶವನ್ನು ಸಾರ್ಥಕ ಪಡಿಸಲು ಯೋಜನೆ ರೂಪಿಸಬೇಕಿದೆ. ಏಕೆಂದರೆ 188 ವಸಂತಗಳನ್ನು ಪೂರೈಸಿರುವ ಕುಶಾಲನಗರದ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕಲಿತು ಬದುಕು ಕಟ್ಟಿರುವ ಸಹಸ್ರ ಸಹಸ್ರ ಮಂದಿ ಕನಿಷ್ಟ ಹಣವನ್ನು ಶಾಲೆಯ ಅಭಿವೃದ್ಧಿಗೆ ನೀಡಿದಲ್ಲಿ ಸರ್ಕಾರದಿಂದ ಬಿಡಿಗಾಸು ಹಣ ಪಡೆಯದೇ ನೂತನ ಶಾಲಾ ಕಟ್ಟಡ ಕಟ್ಟಬಹುದೇನೋ....!
ಇದೀಗ ಶಾಲೆಯಲ್ಲಿ ನರ್ಸರಿ, ಎಲ್ಕೆಜಿ, ಯುಕೆಜಿ ಆಂಗ್ಲ ಮಾಧ್ಯಮ ಶಾಲೆಯು ತೆರೆದುಕೊಂಡಿದೆ. 1 ರಿಂದ 7 ರವರೆಗೆ 280 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 330 ಮಕ್ಕಳು ದಾಖಲು ಪಡೆದಿದ್ದಾರೆ. ಜೊತೆಗೆ 4.65 ಎಕರೆ ಒಟ್ಟು ಜಾಗದ ಪೈಕಿ ಒಂದು ಎಕರೆ ಜಾಗದಲ್ಲಿ ಬಾಲಕಿ ಯರ ಪ್ರೌಢಶಾಲೆಯು ನಡೆಯುತ್ತಿದ್ದು ಅಲ್ಲಿನ ಮಕ್ಕಳು ಒಳಗೂಡಿ 500ಕ್ಕೂ ಅಧಿಕ ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಶಾಲೆಯ ಸಭಾಂಗಣ ಸಂಪೂರ್ಣವಾಗಿ ದುರಸ್ತಿಯಾಗಿದೆ. ಕುಡಿವ ನೀರಿನ ಸಮಸ್ಯೆಯೂ ಇದ್ದು, ಮತ್ತೊಂದು ಕೊಳವೆ ಬಾವಿಯ ಅಗತ್ಯವಿದೆ.
500 ಮಕ್ಕಳಿರುವ ಶಾಲಾ ವಠಾರದಲ್ಲಿ ಮಕ್ಕಳಿಗೆ ಇರುವ ಶೌಚಾಲಯ ಸಾಕಾಗುತ್ತಿಲ್ಲ. ಶುಚಿತ್ವಕ್ಕೆ ಖಾಯಂ ಸಿಬ್ಬಂದಿಯೋರ್ವರ ನೇಮಕದ ಅನಿವಾರ್ಯವಿದೆ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕಿ.
- ಕೆ.ಎಸ್. ಮೂರ್ತಿ