ವೀರಾಜಪೇಟೆ, ಜು. 2: ವೀರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿರುವ ಹಿನ್ನೆಲೆಯಲ್ಲಿ, ಅಕ್ರಮವಾಗಿ ಪ್ಲಾಸ್ಟಿಕ್ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಮುಂಗಟ್ಟುಗಳಿಗೆ ದಾಳಿ ನಡೆಸಿದ ಪುರಸಭೆ ಅಧಿಕಾರಿಗಳು ಸುಮಾರು 5 ಕೆಜಿ ಪ್ಲಾಸ್ಟಿಕ್ ಬ್ಯಾಗ್ ಹಾಗೂ ಪ್ಲಾಸ್ಟಿಕ್ ಕವರ್ಗಳನ್ನು ವಶಪಡಿಸಿಕೊಂಡು ನಾಶಪಡಿಸಿದರು.
ಮುಖ್ಯಾಧಿಕಾರಿ ಚಂದ್ರಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು ದಂಡ ವಿಧಿಸಲಾಯಿತು. ಹಲವು ಬಾರಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ ಮೂಡಿಸಿ, ನೋಟಿಸ್ ನೀಡಿದ್ದರೂ ಪ್ಲಾಸಿಕ್ ಮಾರಾಟ ನಿಲ್ಲದಿರುವುದರಿಂದ ಅಧಿಕಾರಿಗಳು ಅಂಗಡಿಗಳಿಗೆ ದಾಳಿ ನಡೆಸಿ, ದಂಡ ವಿಧಿಸಿದರು. ಆರೋಗ್ಯಾಧಿಕಾರಿ ಕೋಮಲ, ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.