ಮಡಿಕೇರಿ, ಜು. ೩: ಮಡಿಕೇರಿ ನಗರದ ಮಿಲಿಟರಿ ಕ್ಯಾಂಟೀನ್ ಬಳಿಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿಗೆ ಹೋಗುವ ರಸ್ತೆ ಬದಿಯ ಮೋರಿ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಎನ್ಎಸ್ಯುಐ ಘಟಕದ ಜಿಲ್ಲಾಧ್ಯಕ್ಷ ರೋಷನ್ ಗಣಪತಿ ಆತಂಕ ವ್ಯಕ್ತಪಡಿಸಿದ್ದಾರೆ.
ನಗರಸಭಾ ಪೌರಾಯುಕ್ತರು ಹಾಗೂ ಲೋಕೋಪಯೋಗಿ ಇಲಾಖೆ ಅಭಿಯಂತರರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದ ಅವರು ಕಾಲೇಜು ರಸ್ತೆಯಲ್ಲಿ ಪಾದಚಾರಿಗಳು, ವಿದ್ಯಾರ್ಥಿಗಳು ಹಾಗೂ ವಾಹನ ಚಾಲಕರು ಆತಂಕದಲ್ಲೇ ತೆರಳಬೇಕಾದ ಪರಿಸ್ಥಿತಿ ಉದ್ಭವಿಸಿದೆ ಎಂದು ತಿಳಿಸಿದರು.
ಕೇಲಪಂಡ ಮುದ್ದಪ್ಪ ಅವರ ಮನೆಯ ಎದುರು ಭಾಗದಲ್ಲಿ ರಸ್ತೆಗೆ ಹೊಂದಿಕೊAಡAತೆ ದೊಡ್ಡದಾದ ಪ್ರಪಾತವಿದೆ. ಇಲ್ಲಿಯವರೆಗೆ ಯಾವುದೇ ತಡೆಗೋಡೆ ನಿರ್ಮಾಣ ಅಥವಾ ರಕ್ಷಣಾ ವ್ಯವಸ್ಥೆಯನ್ನು ಮಾಡಿರುವುದಿಲ್ಲ.
ಇದೇ ಭಾಗದಲ್ಲಿರುವ ರಸ್ತೆ ಗುಂಡಿಯನ್ನು ಮುಚ್ಚುವ ಕಾರ್ಯವನ್ನು ಕೂಡ ಕೈಗೊಂಡಿಲ್ಲ. ನಗರದಲ್ಲಿ ಭಾರೀ ಗಾಳಿ ಮಳೆಯಾಗುತ್ತಿರುವುದರಿಂದ ವಾಹನಗಳ ಸಂಚಾರದ ಸಂದರ್ಭ ವಿದ್ಯಾರ್ಥಿಗಳು ಆತಂಕದಲ್ಲೇ ಈ ರಸ್ತೆಯಲ್ಲಿ ತೆರಳಬೇಕಾಗಿದೆ. ಪೊಲೀಸ್ ಬ್ಯಾರಿಕೇಡ್ನ್ನು ಮಾತ್ರ ಅಡ್ಡಲಾಗಿ ಇಡಲಾಗಿದೆ.
ಗ್ರಾಮಾಂತರ ಪೊಲೀಸ್ ಠಾಣೆಯ ಎದುರು ಎಡ ಮತ್ತು ಬಲಭಾಗ ಸೇರುವ ರಸ್ತೆ ಮತ್ತು ಮೋರಿ ತೀರಾ ಶಿಥಿಲಾವಸ್ಥೆಯಲ್ಲಿದೆ. ಯಾವುದೇ ಸುರಕ್ಷತೆ ಇಲ್ಲದೆ ಅಪಾಯವನ್ನು ಆಹ್ವಾನಿಸುತ್ತಿದೆ. ಪ್ರವಾಸಿಗರು ಹಾಗೂ ಸಾರ್ವಜನಿಕರ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿವೆ.
ಮುಂದೆ ಎದುರಾಗಬಹುದಾದ ಅನಾಹುತವನ್ನು ತಪ್ಪಿಸಲು ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆ ತಕ್ಷಣ ಕಾರ್ಯೋನ್ಮುಖವಾಗಬೇಕು. ತಪ್ಪಿದಲ್ಲಿ ಕಾಲೇಜು ವಿದ್ಯಾರ್ಥಿಗಳ ಬೆಂಬಲದೊAದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ರೋಷನ್ ಗಣಪತಿ ತಿಳಿಸಿದರು.