ಕೂಡಿಗೆ, ಜು. ೩: ಪರಿಸರದ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಹೆಚ್ಚೆಚ್ಚು ಗಿಡ ಮರಗಳನ್ನು ಬೆಳೆಸುವ ಮೂಲಕ ಅರಣ್ಯ ಪ್ರದೇಶವನ್ನು ವೃದ್ಧಿಸುವ ಮೂಲಕ ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸ ಬೇಕು ಎಂದು ಕೊಡಗು ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್. ನಿರಂಜನ ಮೂರ್ತಿ ಮನವಿ ಮಾಡಿದರು.

ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡು ಮಂಗಳೂರು ಸರ್ಕಾರಿ ಪ್ರೌಢಶಾಲೆ ಯಲ್ಲಿ ಅರಣ್ಯ ಇಲಾಖೆಯ ಕೊಡಗು ಅರಣ್ಯ ವೃತ್ತದ ಮಡಿಕೇರಿ ವಿಭಾಗದ ಕುಶಾಲನಗರ ಅರಣ್ಯ ವಲಯ ಹಾಗೂ ಸೋಮವಾರಪೇಟೆ ಸಾಮಾಜಿಕ ಅರಣ್ಯ ವಲಯ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ಘಟಕ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ, ಶಾಲೆಯ ಇಕೋ ಕ್ಲಬ್ , ಎನ್.ಎಸ್.ಎಸ್.ಘಟಕ ಹಾಗೂ ಎಸ್.ಡಿ.ಎಂ.ಸಿ.ಯ ಆಶ್ರಯದಲ್ಲಿ ಶಾಲಾವರಣದಲ್ಲಿ ಏರ್ಪಡಿಸಿದ್ದ ವನ ಮಹೋತ್ಸವ ಆಚರಣೆ : ೨೦೨೨ ಹಾಗೂ ವಿದ್ಯಾರ್ಥಿಗೊಂದು ಗಿಡ- ಶಾಲೆಗೊಂದು ವನ ಸಂವರ್ಧನಾ ಅಭಿಯಾನದಲ್ಲಿ ಅರಣ್ಯ ಗಿಡನೆಟ್ಟು ಮಾತನಾಡಿದರು.

ನೈಸರ್ಗಿಕವಾಗಿರುವ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಮಾನವನ ಪಾತ್ರ ಬಹುಮುಖ್ಯವಾದುದು ಎಂದರು

ಆಧುನಿಕತೆ ಮತ್ತು ಅಭಿವೃದ್ಧಿ ಬೆಳೆದಂತೆ ಅರಣ್ಯ ಪ್ರದೇಶ ಕ್ಷೀಣಿಸುತ್ತಿದೆ. ನಮ್ಮ ಪರಿಸರದಲ್ಲಿ ಶೇಕಡಾ ೩೩ ರಷ್ಟು ಅರಣ್ಯ ಪ್ರದೇಶ ಇರಬೇಕು ಆದರೆ, ಈ ಪ್ರದೇಶ ಕ್ಷೀಣಿಸುತ್ತಿರುವುದರಿಂದ ಪರಿಸರ ಅಸಮತೋಲನ ಉಂಟಾಗಿದೆ. ಈ ದಿಸೆಯಲ್ಲಿ ನಾವು ವಾತಾವರಣದಲ್ಲಿ ಹೆಚ್ಚೆಚ್ಚು ಹಸಿರು ಬೆಳೆಸಲು ಕಂಕಣಬದ್ಧರಾಗಬೇಕು ಎಂದು ಬಿ.ಎನ್.ಎನ್. ಮೂರ್ತಿ ಹೇಳಿದರು.

ಸಾಹಿತಿ ಭಾರದ್ವಾಜ ಕೆ. ಆನಂದತೀರ್ಥ ಮಾತನಾಡಿ, ಮಾನವನಿಂದ ಇಂದು ಅರಣ್ಯ ನಾಶ ಮತ್ತು ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ತಿಳಿಸಿದರು.

ಪ್ರಕೃತಿಯಲ್ಲಿ ಪ್ರಾಣಿ - ಪಕ್ಷಿಗಳು ಪರಿಸರಕ್ಕೆ ಹೆಚ್ಚು ಉಪಕಾರ ಮಾಡಿದರೆ, ಮನುಷ್ಯನಿಂದಲೇ ಇಂದು ಪರಿಸರಕ್ಕೆ ಹೆಚ್ಚು ಹಾನಿ ಉಂಟು ಮಾಡಿರುವುದರಿಂದ ಪರಿಸರ ಸಂರಕ್ಷಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ತಿಳಿಸಿದರು.

ಪ್ರತಿಯೊಬ್ಬರೂ ತಾವು ನೆಟ್ಟ ಗಿಡಗಳನ್ನು ಸಂರಕ್ಷಣೆ ಮಾಡಿದರೆ ಗಿಡಗಳನ್ನು ಸಂರಕ್ಷಿಸುವ ಮೂಲಕ ನಾವು ಅರಣ್ಯ ಪ್ರದೇಶವನ್ನು ವೃದ್ಧಿಸಲು ಸಾಧ್ಯ ಎಂದು ಭಾರದ್ವಾಜ ಹೇಳಿದರು.

ವನಮಹೋತ್ಸವ ಆಚರಣೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿಯೂ ಆದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮಕುಮಾರ್, ನಾವು ಪಶ್ಚಿಮಘಟ್ಟದಲ್ಲಿನ ಜೀವ ವೈವಿಧ್ಯ, ಜಲಮೂಲಗಳನ್ನು ಸಂರಕ್ಷಿಸುವ ಮೂಲಕ ಅರಣ್ಯ, ಪರಿಸರ, ಜೀವ ವೈವಿಧ್ಯ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಮಡಿಕೇರಿ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ ಮಾತನಾಡಿ, ವನ ಮಹೋತ್ಸವ ಸಪ್ತಾಹ ಸಂದರ್ಭದಲ್ಲಿ ಶಾಲಾ - ಕಾಲೇಜುಗಳಲ್ಲಿ ಗಿಡನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.

ಸಾಮಾಜಿಕ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂರ್ಣಿಮ ಮಾತನಾಡಿ, ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರು ಎಲ್ಲರೂ ಜತೆಗೂಡಿ ಗಿಡನೆಟ್ಟು ಬೆಳೆಸುವ ಮೂಲಕ ಅರಣ್ಯ ಸಂರಕ್ಷಣೆಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಗ್ರಾ.ಪಂ. ಅಧ್ಯಕ್ಷೆ ಇಂದಿರಾ ರಮೇಶ್, ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಎಸ್.ಎನ್. ಪುಟ್ಟಸ್ವಾಮಿ ಹಾಗೂ ಗ್ರಾ. ಪಂ. ಸದಸ್ಯ ಕೆ.ಕೆ. ಭೋಗಪ್ಪ ಮಕ್ಕಳಿಗೆ ಬಹುಮಾನ ವಿತರಿಸಿದರು.

ಎಸಿಎಫ್ ಎಂ.ಎಸ್.ಚAಗಪ್ಪ, ಆರ್‌ಎಫ್‌ಓಗಳಾದ ಕೆ.ವಿ. ಶಿವರಾಮ್, ಟಿ.ಎಂ. ರವೀಂದ್ರ, ತಾಲೂಕು ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಸುನಂದಕುಮಾರ್, ಡಿಆರ್‌ಎಫ್‌ಓ ಅನಿಲ್ ಡಿಸೋಜ, ಗ್ರಾ.ಪಂ. ಸದಸ್ಯರಾದ ಶಶಿಕಲಾ, ಕುಮಾರ್, ಶಿವಮಣಿ, ಪಿಡಿಓ ಎಂ.ಆರ್. ಸಂತೋಷ್, ಮಂಡಲ ಪಂಚಾಯಿತಿ ಮಾಜಿ ಸದಸ್ಯ ಕೆ.ಎಸ್. ರಾಜಾಚಾರಿ, ಎಸ್‌ಡಿಎಂಸಿ ಸದಸ್ಯರಾದ ಎಂ. ರಂಗಸ್ವಾಮಿ, ಜವರಯ್ಯ, ದಾನಿ ಕೆ.ಕೆ. ಪವನ್ ಕುಮಾರ್, ಸ್ವಯಂ ಸೇವಕ ಧರ್ಮಪ್ಪ ಇತರರು ಇದ್ದರು.

ಇಕೋ ಕ್ಲಬ್‌ನ ಉಸ್ತುವಾರಿ ಶಿಕ್ಷಕಿ ಬಿ.ಡಿ. ರಮ್ಯ, ಶಿಕ್ಷಕರಾದ ಕೆ. ಗೋಪಾಲಕೃಷ್ಣ, ಎಂ.ಟಿ. ದಯಾನಂದ, ಎಸ್.ಎಂ. ಗೀತಾ, ಅನ್ಸಿಲಾ ರೇಖಾ, ಕೂಡಿಗೆ ಸ.ಹಿ. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್.ಎ. ಯೋಗೇಶ್, ಇದ್ದರು. ವಿದ್ಯಾರ್ಥಿನಿ ಕೆ.ಎಂ. ಮಮತ, ವನ ಮಹೋತ್ಸವ ಆಚರಣೆ ಮಹತ್ವ ಕುರಿತು ವಿಚಾರ ಮಂಡಿಸಿದರು.

ಇದೇ ವೇಳೆಯಲ್ಲಿ ಶಾಲಾವರಣದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜತೆಗೂಡಿ ಹೊಂಗೆ, ನೇರಳೆ, ನೆಲ್ಲಿ ಇನ್ನಿತರ ಗಿಡಗಳನ್ನು ನೆಟ್ಟರು.

ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ಸಂಬAಧಿಸಿದAತೆ ಭಿತ್ತಿಫಲಕಗಳನ್ನು ಹಿಡಿದ ವಿದ್ಯಾರ್ಥಿಗಳು ವಿವಿಧ ಪರಿಸರ ಘೋಷಣೆಗಳನ್ನು ಪ್ರಚಾರಪಡಿಸಿದರು.

ವನಮಹೋತ್ಸವ ಕಾರ್ಯಕ್ರಮದ ಮೂಲಕ ನಮ್ಮ ಸುತ್ತಲಿನ ಪ್ರದೇಶದಲ್ಲಿ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಹಸಿರು ಪರಿಸರ ನಿರ್ಮಾಣಕ್ಕೆ ಪಣ ತೊಡಬೇಕು ಎಂದು ಅತಿಥಿಗಳು ಮನವಿ ಮಾಡಿದರು.