ಕೂಡಿಗೆ, ಜು. ೧: ಕೂಡಿಗೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಸಭೆಯ ಆರಂಭದಲ್ಲಿ ಕೂಡಿಗೆ ಸರ್ಕಲ್‌ನಲ್ಲಿ ವ್ಯವಸ್ಥಿತವಾದ ಶೌಚಾಲಯದ ವ್ಯವಸ್ಥೆ ಮತ್ತು ಕುಡಿಯುವ ನೀರಿನ ಸೌಲಭ್ಯಗಳ ಕೊರತೆ ಇರುವುದರಿಂದ ಪ್ರಮುಖವಾಗಿ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕ್ರಿಯಾ ಯೋಜನೆ ತಯಾರಿಸಿ ಕಾಮಗಾರಿಯನ್ನು ಆರಂಭ ಮಾಡಬೇಕೆಂದು ಸದಸ್ಯರಾದ ಟಿ.ಪಿ. ಹಮೀದ್, ಗಿರೀಶ್, ಅರುಣ್ ರಾವ್ ಸೇರಿದಂತೆ ಸರ್ವ ಸದಸ್ಯರು ಒತ್ತಾಯಿಸಿದರು. ಅದರಂತೆ ಹಾಜರಿದ್ದ ಸದಸ್ಯರು ಒಕ್ಕೊರಲಿನಿಂದ ತೀರ್ಮಾನ ಕೈಗೊಂಡರು.

ಹಕ್ಕುಪತ್ರಗಳ ವಿತರಣೆಯನ್ನು ಶೀಘ್ರವಾಗಿ ವಿತರಣೆ ಮಾಡುವಂತೆ ತಾಲೂಕು ಮಟ್ಟದ ಅಧಿಕಾರಿ ಗಮನಕ್ಕೆ ತರುವ ಬಗ್ಗೆ ಚರ್ಚೆಗಳು ನಡೆದವು. ಸಭೆಯಲ್ಲಿ ವಾರ್ಡ್ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ, ಶುಚಿತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ಅಭಿವೃದ್ಧಿ ಅಧಿಕಾರಿ ಎಂ.ಕೆ. ಅಯಿಷಾ ಸರಕಾರದ ಹೊಸ ಯೋಜನೆಗಳ ಬಗ್ಗೆ ಮತ್ತು ರಾಷ್ಟಿçÃಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೈಗೊಳ್ಳಬಹುದಾದ ಸಂಪೂರ್ಣವಾದ ಮಾಹಿತಿಯನ್ನು ಸಭೆಗೆ ತಿಳಿಸಿದರು. ಸಾರ್ವಜನಿಕರಿಂದ ಸಭೆಗೆ ಬಂದ ಅರ್ಜಿಗಳ ವಿಲೇವಾರಿ ಮಾಹಿತಿಯನ್ನು ತಿಳಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮೋಹಿನಿ ತಮ್ಮಣೆಗೌಡ, ಸೇರಿದಂತೆ ಸರ್ವ ಸದಸ್ಯರು, ಕಾರ್ಯದರ್ಶಿ ಪುನೀತ್ ಹಾಜರಿದ್ದರು.