ಮಡಿಕೇರಿ, ಜು.2; ನಿರಂತರವಾಗಿ ಭೂಮಿ ಕಂಪಿಸುತ್ತಿರುವ ಕೊಡಗಿನ ಗಡಿಭಾಗವಾದ ಪೆರಾಜೆ ಹಾಗೂ ಕರಿಕೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಆರನೇ ಬಾರಿಗೆ ಭೂಕಂಪನವಾಗಿದೆ. ಇಂದು ಮಧ್ಯಾಹ್ನ 1.21ಗಂಟೆ ವೇಳೆಗೆ ಏಕ ಕಾಲದಲ್ಲಿ ಎರಡೂ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಗೂ ಸುಳ್ಯ ತಾಲೂಕಿನ ಕೆಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ.

ಗಡಿಭಾಗ ಸಂಪಾಜೆ ಹೋಬಳಿಯ ಪೆರಾಜೆ ಗ್ರಾಮದ ಚಾಮಕಜೆ, ಎಂ.ಚೆಂಬು, ಕರಿಕೆ ಹಾಗೂ ಸುಳ್ಯ ತಾಲೂಕಿನ ಕೆಲವೆಡೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 1.8ರಷ್ಟು ತೀವ್ರತೆ ದಾಖಲಾಗಿದೆ. ಸುಳ್ಯ ತಾಲೂಕಿನ ದೊಡ್ಡಕುಮೇರಿ ಗ್ರಾ.ಪಂ. ವ್ಯಾಪ್ತಿಯ ಪಶ್ಚ್ಚಿಮ ದಿಕ್ಕಿನಲ್ಲಿ 1.3 ಕಿ.ಮೀ ದೂರದವರೆಗೆ ಭೂಕಂಪನವಾಗಿದ್ದು, ಇದರ ಪರಿಣಾಮ ಗಡಿಭಾಗವಾದ ಪೆರಾಜೆ ಗ್ರಾ.ಪಂ. ವ್ಯಾಪ್ತಿಯ ಚಾಮಕಜೆ ಗ್ರಾಮದಲ್ಲಿ 2.5ಕಿ.ಮೀ. ವ್ಯಾಪ್ತಿಯಲ್ಲಿ, ಎಂ.ಚೆಂಬು ಗ್ರಾಮದ ಪಶ್ಚಿಮ ದಿಕ್ಕಿನಲ್ಲಿ 4.7 ಕಿ.ಮೀ ವ್ಯಾಪ್ತಿಯಲ್ಲಿ, ಕರಿಕೆ ಗ್ರಾಮದ ಉತ್ತರ ವಾಯುವ್ಯ ದಿಕ್ಕಿನಲ್ಲಿ 12.4 ಕಿ.ಮೀ. ವ್ಯಾಪ್ತಿಯಲ್ಲಿ ಭೂಕಂಪನವಾಗಿರು ವದಾಗಿ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕರು ಮಾಹಿತಿ ನೀಡಿದ್ದಾರೆ.(ಮೊದಲ ಪುಟದಿಂದ)

ಶಾಸಕರಿಂದ ಪರಿಶೀಲನೆ

ಕರಿಕೆ: ಸರಣಿ ಭೂಕಂಪನ ಹಾಗೂ ಬರೆ ಕುಸಿತವಾದ ಕರಿಕೆ ಗ್ರಾಮಕ್ಕೆ ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು. ಗ್ರಾಮದ ಕುಡಿಯಂಗಲ್, ಕುಂಡತಿಕಾನ, ಹದಿಮೂರನೇ ಮೈಲುವಿನ ಬರೆ ಕುಸಿತಗೊಂಡ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆದರು. ಭೂಕಂಪನ ಹಾಗೂ ಬರೆ ಕುಸಿತದ ಬಗ್ಗೆ 'ಶಕ್ತಿ'ಯೊಂದಿಗೆ ಮಾತನಾಡಿ, ಈಗಾಗಲೇ ಬರೆ ಕುಸಿತಕ್ಕೊಳಗಾದ ಸ್ಥಳ ನೋಡಿದ್ದು, ನಿಡ್ಯಮಲೆ ಜೋಯಪ್ಪ ಹಾಗೂ ಎಂ.ಎಸ್. ವಸಂತ ಹಾಗೂ ಇತರ ಹಲವು ಮನೆಗೆ ಹಾನಿಯಾಗುವ ಸಾಧÀ್ಯತೆ ಇದೆ. ಅತಿ ಹೆಚ್ಚು ಕರಿಕೆ ಗ್ರಾಮದಲ್ಲಿ ಹಾನಿಯಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದು, ಜಿಲ್ಲಾಧಿಕಾರಿಗಳು ನಾಳೆ ಗ್ರಾಮಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.

ಹೆಚ್ಚಿನ ಅನಾಹುತ ಸಂಭವಿಸುವ ಸಾಧ್ಯತೆ ಇದ್ದಲ್ಲಿ ಗುಡ್ಡಗಾಡಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ಜಿಲ್ಲಾಡಳಿತ ಅಗತ್ಯ ಕ್ರಮವಹಿಸಲಿರುವುದಾಗಿ ತಿಳಿಸಿದರು. ಶಾಸಕರ ಭೇಟಿ ಸಂದರ್ಭದಲ್ಲಿ ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ಸುಬ್ರಮಣ್ಯ ಉಪಾಧ್ಯಾಯ, ಗ್ರಾ.ಪಂ. ಸದಸ್ಯ ಕೆ.ಎ. ನಾರಾಯಣ ಹಾಗೂ ಗ್ರಾಮದ ಪ್ರಮುಖರು ಹಾಜರಿದ್ದರು.ಭೂಮಿತಾಯಿ ಯಾವುದೇ ರೀತಿಯ ಪ್ರಾಕೃತಿಕ ವಿಕೋಪ ಉಂಟುಮಾಡದಂತೆ ಪೆರಾಜೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗಿದೆ. ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿ ದೇವರಲ್ಲಿ ಪ್ರಾರ್ಥಿಸಿದರು.

ಚೆಂಬುವಿನಲ್ಲಿ ಭೂಕುಸಿತ : ಮನೆಗೆ ಹಾನಿ

ಚೆಂಬು ಗ್ರಾಮದಲ್ಲಿ ಕಳೆದ ರಾತ್ರಿ ಧಾರಾಕಾರ ಮಳೆ ನಡುವೆ ಮನೆಯೊಂದರ ಮೇಲೆ ಭೂಕುಸಿತದಿಂದಾಗಿ ಮಣ್ಣು ಜರಿದು ಹಾನಿಯಾಗಿದೆ. ಅಲ್ಲಿನ ಪೂಜಾರಿಗದ್ದೆ ಗಿರಿಧರ ಎಂಬವರ ಮನೆ ಮೇಲೆ ರಾತ್ರಿ 3 ಗಂಟೆಯ ವೇಳೆಯಲ್ಲಿ ಭಾರೀ ಶಬ್ಧದೊಂದಿಗೆ ಮಣ್ಣು ಕುಸಿದಿದೆ.

ಈ ವ್ಯಾಪ್ತಿಯಲ್ಲಿ ಸರಣಿ ಭೂಕಂಪವಾಗಿರುವ ಹಿನ್ನೆಲೆಯಲ್ಲಿ ಭೂಕುಸಿತದ ಬಗ್ಗೆ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಸ್ಥಳಕ್ಕೆ ತಹಶೀಲ್ದಾರ್ ಮಹೇಶ್, ಕಂದಾಯ ಇಲಾಖಾ ಸಿಬ್ಬಂದಿಗಳು, ಗ್ರಾ.ಪಂ. ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆದಿದೆ.

-ಸುಧೀರ್, ಕಿರಣ್