ಮಡಿಕೇರಿ, ಜು. 2: ಅತಿ ಕಡಿಮೆ ಖರ್ಚಿನಲ್ಲಿ, ಅಂದರೆ ಎಕರೆಗೆ ಕೇವಲ 600 ರೂಪಾಯಿಗಳಲ್ಲಿ ನೆರ ಭತ್ತ ಬಿತ್ತನೆ ಮಾಡುವ ಸಾಧನ ಡ್ರಂ ಸೀಡರ್ ಬಳಸಿ ಭತ್ತ ಬಿತ್ತನೆ ಪ್ರಾತ್ಯಕ್ಷಿಕೆಯನ್ನು ಪಂದಿಕಂಡ ಜಯ ಬೋಪಣ್ಣ ಅವರ 1 ಹೆಕ್ಟೇರ್ ಪ್ರದೇಶದಲ್ಲಿ ಕೈಗೊಳ್ಳಲಾಯಿತು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ಚವಿದ್ಯಾಲಯ-ಶಿವಮೊಗ್ಗದ ಅಂಗ ಸಂಸ್ಥೆಯಾದ ಮಡಿಕೇರಿಯ ವಿಸ್ತರಣಾ ಶಿಕ್ಷಣಾ ಘಟಕದ ಕೃಷಿ ವಿಜ್ಞಾನಿ ಡಾ. ಬಸವಲಿಂಗಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಅಭಾವದಿಂದ ಮತ್ತು ಖರ್ಚಿನ ಹೆಚ್ಚಳದಿಂದ ಗದ್ದೆಗಳು ಕೊಡಗಿನಲ್ಲಿ ಪಾಳು ಬಿದ್ದಿವೆ, ಹಾಗಾಗಿ ಡ್ರಂ ಸೀಡರ್ ಭತ್ತ ಬಿತ್ತನೆಯಿಂದ ಎಕರೆಗೆ ಸುಮಾರು 4 ರಿಂದ 5 ಸಾವಿರ ರೂಪಾಯಿಗಳ ಉಳಿತಾಯದ ಜೊತೆಗೆ ಕೇವಲ 10 ರಿಂದ 12 ಕೆ.ಜಿ. ಬಿತ್ತನೆ ಭತ್ತ ಉಪಯೊಗಿಸಿ ಉತ್ತಮ ಇಳುವರಿ ಪಡೆಯಬಹುದು ಎಂದು ತಿಳಿಸಿದರು. ಭತ್ತವನ್ನು 24 ಗಂಟೆ ನೀರಿನಲ್ಲಿ ನೆನೆಸಿ ಹೊರತೆಗೆದು, ಶಿಲೀಂಧ್ರ ನಾಶಕವಾದ ಕಾರ್ವನ್ ಡೈಜಿಂನಲ್ಲಿ ಪ್ರತಿ ಕೆ.ಜಿ.ಗೆ 4 ಗ್ರಾಂ.ನಂತೆ ಮಿಶ್ರಣಮಾಡಿ, 24- 36 ಗಂಟೆಗಳ ಕಾಲ ಗೋಣಿಚೀಲದಲ್ಲಿ ಕಟ್ಟಿ ನಂತರ ಬಿತ್ತನೆಗೆ ಉಪಯೋಗಿಸಬೇಕು ಎಂದು ಸಲಹೆ ನೀಡಿದರು.
ಬಿತ್ತನೆಯಾದ 40-60ನೇ ದಿನದಲ್ಲಿ ಕೋನೊ ವೀಡರ್ ಹಾಯಿಸುವುದರಿಂದ ಕಳೆ ನಿಯಂತ್ರಣದ ಜೊತೆಗೆ ಬೇರುಗಳಿಗೆ ಗಾಳಿ ದೊರೆಯುವಂತಾಗುತ್ತದೆ. ಜೊತೆಗೆ ಬೆಳೆಯ ಬುಡಕ್ಕೆ ಮಣ್ಣು ಸೇರುವುದರಿಂದ ಗಿಡ ಬೀಳದೆ ಸದೃಢವಾಗಿ ಬೆಳೆಯುತ್ತದೆ. ನಂತರದಲ್ಲಿ ಕಳೆನಾಶಕಗಳಾದ ನಾಮಿನಿ ಗೋಲ್ಡ್ ಮತ್ತು ಪಿಮಿಕ್ಸ್ ಬಳಸಿ ಕಳೆ ನಿಯಂತ್ರಿಸಬಹುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಕೃಷಿಕರು ಭಾಗವಹಿಸಿ ಪ್ರಾತ್ಯಕ್ಷಿಕೆಯ ಪ್ರಯೋಜನ ಪಡೆದುಕೊಂಡರು.