ಸಿದ್ದಾಪುರ, ಜು. 2: ಇತ್ತೀಚೆಗೆ ಜಾನುವಾರುಗಳ ಮೇಲೆ ದಾಳಿ ನಡೆಸಿ ಬಲಿತೆಗೆದುಕೊಳ್ಳುತ್ತಿರುವ ಹುಲಿಯನ್ನು ಸೆರೆ ಹಿಡಿಯಲು ಇಲಾಖೆ ಕಾರ್ಯಾಚರಣೆ ಮುಂದುವರೆಸಿದ್ದು, ಹುಲಿಯ ಸುಳಿವು ಸಿಕ್ಕಿಲ್ಲ. ಮಾಲ್ದಾರೆ ಸಮೀಪದ ಬಾಡಗಬಾಣಂಗಾಲ ಗ್ರಾಮದ ಮಾರ್ಗೊಲ್ಲಿ ಕಾಫಿ ತೋಟದಲ್ಲಿ ಹುಲಿಯೊಂದು ಜಾನುವಾರುಗಳ ಮೇಲೆ ದಾಳಿ ನಡೆಸಿದ್ದು, ಅದನ್ನು ಸೆರೆ ಹಿಡಿಯಲು ಅರಣ್ಯ ಇಲಾಖಾಧಿಕಾರಿಗಳು ಕಳೆದ ಕೆಲವು ದಿನಗಳಿಂದ ಮಳೆಯ ನಡುವೆ ಹಗಲು ರಾತ್ರಿ ಶ್ರಮಪಡುತ್ತಿದ್ದರೂ, ಹುಲಿಯ ಚಲನವಲನ ಪತ್ತೆಯಾಗುತ್ತಿಲ್ಲ. ಹುಲಿಯನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಕಾಫಿ ತೋಟಗಳಲ್ಲಿ 3 ಬೋನ್ಗಳನ್ನು ಇರಿಸಿ ಅದರೊಳಗೆ ಹಂದಿಗಳನ್ನು ಇಡಲಾಗಿದೆ. ಆದರೆ ಹುಲಿ ಮಾತ್ರ ಪತ್ತೆಯಾಗುತ್ತಿಲ್ಲ.
ಕಾರ್ಯಾಚರಣೆ ತಂಡವು ಮಾಲ್ದಾರೆ, ಮಾರ್ಗೊಲ್ಲಿ, ಮೈಲಾದ್ಪುರ ಹಾಗೂ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಸುತ್ತಾಡುತ್ತಿದೆÉ. ಮೈಸೂರಿನಿಂದ ವನ್ಯಜೀವಿ ವೈದ್ಯಾಧಿಕಾರಿಗಳು ಬಂದಿದ್ದು, ಅರವಳಿಕೆ ಔಷಧಿಗಳನ್ನು ತರಿಸಲಾಗಿದೆ. ಹುಲಿ ಪತ್ತೆಯಾಗದ ಕಾರಣ ಗ್ರಾಮಸ್ಥರು ಹಾಗೂ ಕಾರ್ಮಿಕರು ಭಯಭೀತರಾಗಿದ್ದಾರೆ.