ದಿನನಿತ್ಯ ಜೀವನದಲ್ಲಿ ಸಾಮಾನು ತರುವುದಕ್ಕೆ ನಾವು ಪ್ಲಾಸ್ಟಿಕ್ ಬ್ಯಾಗನ್ನು ಬಳಸುತ್ತೇವೆ. ಪ್ಲಾಸ್ಟಿಕ್ಗಳನ್ನು ಮರುಬಳಕೆ ಮಾಡದೆ ಎಸೆಯುತ್ತೇವೆ. ಪ್ಲಾಸ್ಟಿಕ್ ಬ್ಯಾಗ್ಗಳನ್ನು ಎಸೆಯುವುದರಿಂದ ಹಾಗೂ ಬಳಸುವುದರಿಂದ ನಮ್ಮ ಮೇಲೆ ಮತ್ತು ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ನಾವು ಬಳಸುವ ಪ್ಲಾಸ್ಟಿಕ್ ಬ್ಯಾಗ್ಗಳು ಭೂಮಿಯಲ್ಲಿ ಕರಗಿ ಹೋಗುತ್ತದೆ ಎಂದು ಭಾವಿಸಿದರೆ ಅದು ನಮ್ಮ ತಪ್ಪು ಕಲ್ಪನೆ. ಏಕೆಂದರೆ ಪ್ಲಾಸ್ಟಿಕ್ ಬ್ಯಾಗ್ ಸಂಪೂರ್ಣವಾಗಿ ಕರಗಿ ಹೋಗಲು 100 ರಿಂದ 500 ವರ್ಷಗಳೇ ಬೇಕಾಗುತ್ತದೆ. ಇದರಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಇಂತಹ ಬ್ಯಾಗ್ಗಳು ನೀರಿನಲ್ಲಿ ತೇಲಿಹೋಗಿ ಸಮುದ್ರದಲ್ಲಿ ಸೇರಿಕೊಳ್ಳುತ್ತದೆ. ಅಲ್ಲಿ ಇವು ದೊಡ್ಡ ಬಂಡೆಗಳಂತಾಗಿ ಪರಿಸರ ಮಾಲಿನ್ಯ ಉಂಟುಮಾಡುತ್ತದೆ. ಸಮುದ್ರದಲ್ಲಿ ವಾಸಿಸುವ ಜೀವಿಗಳಿಗೂ ಇವು ಮಾರಕವಾಗುತ್ತವೆ. ಆಹಾರಕ್ಕಾಗಿ ತ್ಯಾಜ್ಯಗಳಲ್ಲಿರುವ ಪದಾರ್ಥಗಳನ್ನು ತಿನ್ನುವ ನಾಯಿ, ಹಸುವಿನಂತಹ ಪ್ರಾಣಿಗಳು ತ್ಯಾಜ್ಯದ ಜೊತೆ ಪ್ಲಾಸ್ಟಿಕ್ ಕೂಡ ಸೇವಿಸುತ್ತದೆ. ಇದರಿಂದ ಅವುಗಳಿಗೆ ಕಾಯಿಲೆ, ಜೀವ ಹಾನಿ ಆಗುವ ಸಂಭವವಿರುತ್ತದೆ. ಆದಷ್ಟು ಪ್ಲಾಸ್ಟಿಕ್ ಬ್ಯಾಗ್ ಬಳಕೆ ಕಡಿಮೆ ಮಾಡಬೇಕೆಂಬುದು ಈ ದಿನದ ಪ್ರಮುಖ ಉದ್ದೇಶವಾಗಿದೆ.
ಮಾನವ ಮೊದಲು ತಯಾರಿಸಿದ ಪ್ಲಾಸ್ಟಿಕ್ ಎಂದರೆ ಸೆಲ್ಯೂಲಾಯಿಡ್. ಈ ಶತಮಾನದ ಪ್ರಾರಂಭದಿಂದಲೂ ಉಪಯೋಗದಲ್ಲಿರುವ ಮತ್ತೊಂದು ಪ್ಲಾಸ್ಟಿಕ್ ಎಂದರೆ ಬೇಕಲೈಟ್. ಮಾನವ ಬುದ್ಧಿಜೀವಿಯಾದ್ದರಿಂದ ಈಗ ಹಲವಾರು ಪ್ಲಾಸ್ಟಿಕ್ಗಳು ರಾಸಾಯನಿಕವಾಗಿ, ಯಾಂತ್ರಿಕವಾಗಿ ಮರುಬಳಕೆ ಮಾಡಬಹುದು. ಪ್ಲಾಸ್ಟಿಕ್ ತ್ಯಾಜ್ಯವು ನಮ್ಮ ಪರಿಸರವನ್ನು ಎಲ್ಲೆಡೆ ಹಾಳು ಮಡುತ್ತಿವೆ. ಜನರು ಅನುಕೂಲಕ್ಕಾಗಿ ದಶಕಗಳ ಹಿಂದೆ ಕಂಡುಹಿಡಿದ ಪ್ಲಾಸ್ಟಿಕ್ ಇಂದು ನಿಧಾನವಾಗಿ ಪರಿಸರದ ಪಿಡುಗಾಗಿ ಮಾರ್ಪಟ್ಟಿದೆ ಎಂದರೆ ನಂಬಲು ಸಾಧ್ಯವಿಲ್ಲ.
ಆದ್ದರಿಂದ ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಅದರ ಬಳಕೆಯನ್ನು ಕಡಿಮೆ ಮಾಡುವುದು ಅನಿವಾರ್ಯವಾಗಿದೆ. ನಾವು ಪ್ಲಾಸ್ಟಿಕ್ ತ್ಯಾಜ್ಯವನ್ನು ನಿರ್ವಹಿಸಬೇಕಾದರೆ ಪ್ಲಾಸ್ಟಿಕ್ ಮರುಬಳಕೆಗೆ ಒತ್ತು ನೀಡಬೇಕು. ಇಂದು ನಾವು ಪ್ಲಾಸ್ಟಿಕ್ ಅನ್ನು ಎಸೆಯುವ ಬದಲು ಸೃಜನಶೀಲ ರೀತಿಯಲ್ಲಿ ಬದಲಾಯಿಸಲು, ಮರುಬಳಕೆ ಮಾಡಬೇಕು. ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡುವುದರಿಂದ ಹೊಸ ಪ್ಲಾಸ್ಟಿಕ್ ಅನ್ನು ತಯಾರಿಸುವ ಬೇಡಿಕೆಯನ್ನು ಕಡಿಮೆ ಮಾಡಬಹುದು.
ಪ್ರಸ್ತುತ ಪ್ಲಾಸ್ಟಿಕ್ ಮರುಬಳಕೆ ಆಧುನಿಕ ಜೀವನದಲ್ಲಿ ಅವಶ್ಯಕವಾಗಿದೆ. ಆದರೆ ಇದು ಮಾಲಿನ್ಯದ ಪ್ರಮುಖ ಕಾರಣವಾಗಿದೆ. ಮರುಬಳಕೆಯ ಮೂಲಕ ನಾವು ಪ್ಲಾಸ್ಟಿಕ್ ಮಾಲಿನ್ಯವನ್ನು ನಿರ್ವಹಿಸಬಹುದು. ಪ್ಲಾಸ್ಟಿಕ್ ತ್ಯಾಜ್ಯವನ್ನು ತೊಡೆದುಹಾಕುವ ಮೂಲಕ ನಮ್ಮ ಭೂಮಿಯನ್ನು ಸ್ವಚ್ಛ ಮತ್ತು ಆರೋಗ್ಯಕರವಾಗಿಸಲು ನಾವು ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ. ಪ್ಲಾಸ್ಟಿಕ್ ಮಾಲಿನ್ಯವು ಜಾಗತಿಕ ಸಮಸ್ಯೆಯಾಗುತ್ತಿದೆ.
ಪ್ಲಾಸ್ಟಿಕ್ ಮಾಲಿನ್ಯವು ನಮ್ಮ ಹವಾಮಾನದ ಮೇಲೆ ಹಲವಾರು ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಅವುಗಳೆಂದರೆ ಸಾಗರ ಮಾಲಿನ್ಯ, ಭೂಮಾಲಿನ್ಯ ಹಾಗೂ ಆಹಾರ ಮಾಲಿನ್ಯ. ಪ್ಲಾಸ್ಟಿಕ್ ಅನ್ನು ಉತ್ಪಾದಿಸಿದಾಗ ಇದು ಬೆಂಜೀನ್ ಮತ್ತು ವಿನೈಲ್ ಹೈಡ್ರೋಕ್ಲೋರೈಡ್ನಂತಹ ವಿಷಕಾರಿ ವಸ್ತುಗಳಿಂದ ತಯಾರಿಸಲ್ಪಟ್ಟಿದೆ. ಈ ರಾಸಾಯನಿಕವು ಕ್ಯಾನ್ಸರ್ಅನ್ನು ಉಂಟುಮಾಡುತ್ತದೆ ಮತ್ತು ತಯಾರಿಕೆಯ ಉಪ ಉತ್ಪನ್ನಗಳು ನಮ್ಮ ಗಾಳಿ ಮತ್ತು ಮಣ್ಣನ್ನು ಕಲುಷಿತಗೊಳಿಸುತ್ತವೆ.
ಮಾಲಿನ್ಯ ಮುಕ್ತ ವಾತಾವರಣವು ಸಮಾಜದ ಯೋಗಕ್ಷೇಮಕ್ಕೆ ಕೊಡುಗೆ ನೀಡಲು ಜನರಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುತ್ತದೆ.
- ಮುಕ್ಕಾಟಿ ಹರಿಣಿ ಗಿರೀಶ್, ಮರಗೋಡು.