ಮಡಿಕೇರಿ, ಜೂ. ೩೦: ಶ್ರೀ ಬೊಟ್ಲಪ್ಪ ಯುವ ಸಂಘದ ವತಿಯಿಂದ ವಾರ್ಷಿಕೋತ್ಸವದ ಅಂಗವಾಗಿ ಕಡಗದಾಳಿನಲ್ಲಿ ಸ್ಥಳೀಯರಿಗೆ ಗ್ರಾಮೀಣ ಕ್ರೀಡಾಕೂಟ ಹಾಗೂ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು

ವಾರ್ಷಿಕೋತ್ಸವ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯ ಪಡೆಯ ರಾಜ್ಯಾಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಅವರು ನಮ್ಮ ಜಲ, ಸಂಪತ್ತು, ಅರಣ್ಯ, ಪರಿಸರವನ್ನು ರಕ್ಷಿಸಿದರೆ ಮಾತ್ರ ಈ ಮನುಕುಲಕ್ಕೆ ರಕ್ಷಣೆ ಸಿಗುತ್ತದೆ. ಯಾವುದೇ ಕೆಲಸವನ್ನಾದರೂ ನಿಸ್ವಾರ್ಥದಿಂದ ಫಲಾಪೇಕ್ಷೆ ಇಲ್ಲದೆ ಮಾಡುವಂತೆ ಕರೆ ನೀಡಿದರು. ಎಲ್ಲದಕ್ಕೂ ಮಿಗಿಲಾಗಿ ದೇಶಾಭಿಮಾನ, ದೇಶಭಕ್ತಿ ನಮ್ಮಲ್ಲಿ ಮೂಡಬೇಕು ಎಂದರು. ಬಡವರ, ಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಣ್ಣ, ಸದಸ್ಯರಾದ ಶಂಭಯ್ಯ ಹಾಗೂ ಭಾರತಿ, ಗುತ್ತಿಗೆದಾರ ಬಿ.ಡಿ. ನಾರಾಯಣ ರೈ, ಯುವ ಸಂಘದ ಅಧ್ಯಕ್ಷ ಸುರೇಶ್ ಪಿ.ಎಂ. ಹಾಜರಿದ್ದರು. ಕಾರ್ಯಕ್ರಮದಲ್ಲಿ ರವಿ ಕುಶಾಲಪ್ಪ ಅವರನ್ನು ಯುವ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಗೌರವ ಸಲಹೆಗಾರ ಬಿ.ಎಸ್. ಜಯಪ್ಪ ಅವರು ನಿರ್ವಹಿಸಿದರು. ನಂತರ ಕಡಗದಾಳು ವ್ಯಾಪ್ತಿಯ ವೈದ್ಯಾಧಿಕಾರಿ ಡಾಕ್ಟರ್ ಕಲ್ಮೇಶ್ ಅವರು ಆರೋಗ್ಯ ತಪಾಸಣಾ ಶಿಬಿರ ನಡೆಸಿಕೊಟ್ಟರು. ಸ್ಥಳೀಯರಿಗೆ ವಿವಿಧ ರೀತಿಯ ಒಳಾಂಗಣ ಗ್ರಾಮೀಣ ಕ್ರೀಡಾಕೂಟಗಳನ್ನು ನಡೆಸಲಾಯಿತು. ತೆಂಗಿನಕಾಯಿಗೆ ಕಲ್ಲು ಹೊಡೆಯುವುದು, ಬಿಸ್ಕೆಟ್ ಕಚ್ಚುವುದು, ಪಿರಮಿಡ್ ನಿರ್ಮಿಸುವುದು, ಕಾಳು ಹೆಕ್ಕುವುದು, ಹಗ್ಗಜಗ್ಗಾಟ ಹೀಗೆ ವಿವಿಧ ರೀತಿಯ ಗ್ರಾಮೀಣ ಕ್ರೀಡೆಗಳನ್ನು ನಡೆಸಲಾಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬೊಟ್ಲಪ್ಪ ಯುವ ಸಂಘದ ಸ್ಥಾಪಕ ಅಧ್ಯಕ್ಷ ಬಿ.ಎಸ್. ಜಯಪ್ಪ ಅವರು ವಹಿಸಿಕೊಂಡಿದ್ದರು. ಸಮಾರೋಪ ಭಾಷಣ ಮಾಡಿದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಪಿ. ತಿಮ್ಮಯ್ಯ ಅವರು ಮಾತನಾಡಿ, ಎಲ್ಲಿ ನಾಯಕತ್ವದ ಗುಣ ಇರುತ್ತದೆಯೋ ಅಲ್ಲಿ ಸಂಘಟನೆ ಹಾಗೂ ಒಗ್ಗಟ್ಟು ಇರುತ್ತದೆ. ಅಂತಹ ಒಂದು ಒಗ್ಗಟ್ಟು ಈ ಯುವ ಸಂಘದಲ್ಲಿ ಕಾಣಬಹುದು ಎಂದರು. ಸುವರ್ಣ ಎಸ್ಟೇಟ್ ವ್ಯವಸ್ಥಾಪಕ ಪಾಸುರ ಕಾವೇರಪ್ಪ ಅವರು ಮಾತನಾಡಿ, ಈ ವ್ಯಾಪ್ತಿಯಲ್ಲಿ ಕಾರ್ಮಿಕ ವರ್ಗದವರು ಹೆಚ್ಚಾಗಿ ಇದ್ದರೂ ಅವರಲ್ಲಿಯ ಪ್ರೀತಿ-ಒಗ್ಗಟ್ಟು ಅಜರಾಮರವಾಗಿ ಉಳಿದಿದೆ. ಹಂತಹAತವಾಗಿ ಈ ವ್ಯಾಪ್ತಿ ಬೆಳವಣಿಗೆಯಾಗುತ್ತಿರುವುದು ಬಹಳ ಸಂತೋಷ ಎಂದು ನುಡಿದರು.

ಕಾರ್ಯಕ್ರಮದಲ್ಲಿ ವ್ಯಾಪಾರಿ ಸಿ. ನಾಸರ್ ಹಾಗೂ ದಲಿತ ಸಂಘರ್ಷ ಸಮಿತಿಯ ಸಂಚಾಲಕ ದಿವಾಕರ್ ಅವರು ಉಪಸ್ಥಿತರಿದ್ದರು. ಎಸ್.ಎಸ್.ಎಲ್.ಸಿ.ಯಲ್ಲಿ ಶೇ. ೯೨ ಅಂಕಗಳಿಸಿದ ವಿದ್ಯಾರ್ಥಿನಿ ಜಸ್ಮಿತಾ ಅವರನ್ನು ಸನ್ಮಾನಿಸಲಾಯಿತು. ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ. ೭೫ ಅಂಕಪಡೆದ ಪ್ರತ್ಯೀಕ್ಷ ಮತ್ತು ಪುಣ್ಯ ಅವರಿಗೆ ನೆನಪಿನ ಕಾಣಿಕೆ ಕೊಟ್ಟು ಗೌರವಿಸಲಾಯಿತು. ನಂತರ ಕ್ರೀಡಾಕೂಟದಲ್ಲಿ ಪ್ರಥಮ ಮತ್ತು ದ್ವಿತೀಯ ಬಂದ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮವನ್ನು ಅವಿನಾಶ್ ಬೊಟ್ಲಪ್ಪ ನಿರೂಪಿಸಿದರು. ರಾತ್ರಿ ಸ್ಥಳೀಯ ಕಲಾವಿದರಿಂದ, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

- ಅವಿನಾಶ್ ಬೊಟ್ಲಪ್ಪ