ಸೋಮವಾರಪೇಟೆ, ಜು. ೧: ವಿದ್ಯಾರ್ಥಿಗಳು ಮಾದಕ ವ್ಯಸನಗಳಿಂದ ದೂರವಿರಬೇಕು. ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಮಾದಕ ವ್ಯಸನಿಗಳಾಗಿ ಆತ್ಮಹತ್ಯೆ ದಾರಿ ಹಿಡಿಯುತ್ತಿರುವುದು ದುರಂತ ಎಂದು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆಪ್ತ ಸಮಾಲೋಚಕಿ ಮಮತಾ ವಿಷಾದ ವ್ಯಕ್ತಪಡಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಿಲ್ಲಾ ಜನಜಾಗೃತಿ ವೇದಿಕೆ ವತಿಯಿಂದ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಮಾದಕ ವಸ್ತು ವಿರೋಧಿ ಜಾಗೃತಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ೧೭ ವರ್ಷದೊಳಗಿನ ಯುವಜನಾಂಗ ಮಾದಕ ವ್ಯಸನಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ.
ಇದರೊಂದಿಗೆ ಇತರ ಗೀಳಿಗೆ ಬಿದ್ದು ಅಡ್ಡದಾರಿ ಹಿಡಿಯುವ ಮೂಲಕ ಅಪರಾಧ ಪ್ರಕರಣಗಳಲ್ಲೂ ಭಾಗಿಯಾಗುತ್ತಿರುವುದು ಆತಂಕಕಾರಿ ವಿಚಾರವೆಂದರು.
ಮನೆಯಲ್ಲಿ ಪೋಷಕರು ವಯಸ್ಸಿಗೆ ಬಂದ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ಪೋಷಕರು ಮಾದಕ ವ್ಯಸನ, ಕ್ರಿಮಿನಲ್ ಚಟುವಟಿಕೆಗಳಿಂದ ದೂರವಿರುವ ಬಗ್ಗೆ ಮಕ್ಕಳೊಂದಿಗೆ ಮುಕ್ತವಾಗಿ ಚರ್ಚೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎಸ್.ಆರ್.ಸೋಮೇಶ್, ಯೋಜನೆಯ ತಾಲೂಕು ಯೋಜನಾಧಿಕಾರಿ ರೋಹಿತ್, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಎಸ್.ಮಹೇಶ್, ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್, ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ನಾಗರಾಜ್, ಉಪನ್ಯಾಸಕಿ ತಿಲೋತ್ತಮೆ ಮತ್ತಿತರರು ಇದ್ದರು.