ಮುಳ್ಳೂರು, ಜು. ೧: ಸಮೀಪದ ಬೆಸೂರು ಸರಕಾರಿ ಪ್ರೌಢಶಾಲೆಯಲ್ಲಿ ೨೦೨೨-೨೩ನೇ ಸಾಲಿನ ಶಾಲಾ ಸಂಸದ್ ಚುನಾವಣೆಯನ್ನು ನೈಜ ಚುನಾವಣೆ ಪ್ರಕ್ರಿಯೆಯನ್ನು ಹೋಲುವಂತೆ ನಡೆಸಲಾಯಿತು.
ವಿದ್ಯಾರ್ಥಿಗಳಿಗೆ ಪ್ರಜಾ ಪ್ರಭುತ್ವದಲ್ಲಿ ಚುನಾವಣೆ ಪ್ರಮುಖ ಸ್ಥಾನ ವಹಿಸುತ್ತದೆ ಎಂಬುದರ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಶಾಲಾ ಸಂಸದ್ ಚುನಾವಣೆಯನ್ನು ನಡೆಸಲಾಯಿತು.
ಶಾಲಾ ಸಂಸದ್ ಚುನಾವಣೆ ಪ್ರಕ್ರಿಯೆ ಮೊದಲು ಶಾಲಾ ವಿದ್ಯಾರ್ಥಿಗಳಿಗೆ ಉಮೇದುವಾರಿಕೆ ಸಲ್ಲಿಸುವ ಸಂದರ್ಭದಲ್ಲಿ ಸೂಚಕರು ಮತ್ತು ಅನುಮೋದಕರು ಇದ್ದು ಶಾಲಾ ಚುನಾವಣೆ ನಡೆಯುವ ೫ ದಿನಗಳ ಮೊದಲೇ ನಾಮಪತ್ರ ಸಲ್ಲಿಕೆಯ ಮೂಲಕ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಯಿತು.
ನಂತರ ನಾಮಪತ್ರ ಪರಿಶೀಲನೆ, ಹಿಂತೆಗೆತ, ಹಾಗೂ ಅಂತಿಮ ಅಭ್ಯರ್ಥಿಗಳ ಉಮೇದು ವಾರಿಕೆಯೊಂದಿಗೆ ಮತದಾನದ ಪ್ರಕ್ರಿಯೆಯನ್ನು ನಡೆಸಲಾಯಿತು.
ಚುನಾವಣೆ ಪ್ರಕ್ರಿಯೆಯ ನೋಡಲ್ ಅಧಿಕಾರಿಯಾಗಿ ಶಾಲಾ ಶಿಕ್ಷಕ ರಾಘವೇಂದ್ರ, ಮತಗಟ್ಟೆ ಅಧಿಕಾರಿಯಾಗಿ ಶಿಕ್ಷಕರುಗಳಾದ ತುಳಸಿ, ಶೋಭಾ, ಪುಟ್ಟ, ರಂಗನಾಥ್ ಕಾರ್ಯ ನಿರ್ವಹಿಸಿದರು.
ಭದ್ರತಾ ನಿರೀಕ್ಷರಾಗಿ ಶಿಕ್ಷಕ ದೇವರಾಜ್, ಶಾಲಾ ಮುಖ್ಯ ಚುನಾವಣಾಧಿಕಾರಿಯಾಗಿ ಶಾಲೆಯ ಮುಖ್ಯ ಶಿಕ್ಷಕಿ ಶಶಿಕಲಾ ಮತ್ತು ಶಿಕ್ಷಕಿ ಉಷ ನೇತೃತ್ವದಲ್ಲಿ ಮತದಾನವನ್ನು ನಡೆಸಲಾಯಿತು. ಮತದಾನ ನಡೆದ ೨ ದಿನಗಳ ಬಳಿಕ ಮತದಾನದ ಮತ ಎಣಿಕೆ ಕಾರ್ಯವನ್ನು ನಡೆಸಲಾಯಿತು.
ನೂತನ ಶಾಲಾ ಸಂಸದ್ ಸದಸ್ಯರ ಆಯ್ಕೆಯ ಬಗ್ಗೆ ಶಾಲಾ ವಿದ್ಯಾರ್ಥಿಗಳು ಮತ್ತು ಪೋಷಕರು ಕುತೂಹಲದಿಂದ ಕಾಯುತ್ತಿದ್ದರು.
ಶಾಲಾ ಸಂಸದ್ ಚುನಾವಣೆಯಲ್ಲಿ ಆಯ್ಕೆಗೊಂಡ ವಿದ್ಯಾರ್ಥಿಗಳು
ಶಾಲಾ ನಾಯಕಿಯಾಗಿ ಯುವರಾಣಿ, ಶಾಲಾ ಶಿಸ್ತು ಮತ್ತು ಸ್ವಚ್ಛತಾ ಮಂತ್ರಿಯಾಗಿ ಶಾಲಿನಿ, ಆರೋಗ್ಯ ಮಂತ್ರಿಯಾಗಿ ಕಾವ್ಯ, ತೋಟಗಾರಿಕಾ ಮಂತ್ರಿಯಾಗಿ ಕೆ.ಆರ್. ಲಕ್ಷಿö್ಮ, ಕ್ರೀಡಾ ಮಂತ್ರಿಯಾಗಿ ಹರ್ಷಿತಾ ಅವರುಗಳು ೨೦೨೨-೨೩ನೇ ಸಾಲಿನ ಶಾಲಾ ಸಂಸದ್ ಸಾಲಿಗೆ ಆಯ್ಕೆಯಾದರು.