ಪೆರಾಜೆ, ಜೂ. ೨೯: ಇಲ್ಲಿಯ ಶ್ರೀ ಶಾಸ್ತಾವು ದೇವಸ್ಥಾನದ ಆಡಳಿತ ಮಂಡಳಿಯ ನೂತನ ಮೊಕ್ತೇಸರರಾಗಿ ಜಿತೇಂದ್ರ ನಿಡ್ಯಮಲೆ ಹಾಗೂ ನೂತನ ಕಾರ್ಯದರ್ಶಿಯಾಗಿ ತೇಜಪ್ರಸಾದ್ ಅಮೆಚೂರು ಆಯ್ಕೆಯಾದರು.
ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಸಭಾಂಗಣದಲ್ಲಿ ಮೊಕ್ತೇಸರ ವಿಶ್ವನಾಥ ಕುಂಬಳಚೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ದೇವಸ್ಥಾನದ ವಾರ್ಷಿಕ ಮಹಾಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಹೊನ್ನಪ್ಪ ಕೊಳಂಗಾಯ ಮಹಾಸಭೆಯ ವರದಿಯನ್ನು ವಾಚಿಸಿ, ಖರ್ಚು ವೆಚ್ಚಗಳ ಬಗ್ಗೆ ಸಭೆಗೆ ತಿಳಿಸಿದರು.
ಹೆಚ್ಚಿನ ಜನರು ಜಿತೇಂದ್ರರವರ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆ ಆಡಳಿತ ಮಂಡಳಿಯ ಮುಂದಿನ ಸಾಲಿಗೆ ಜಿತೇಂದ್ರ ನಿಡ್ಯಮಲೆ ಮೊಕ್ತೇಸರರಾಗಿ ಆಯ್ಕೆಯಾದರು. ಕಾರ್ಯದರ್ಶಿಯಾಗಿ ತೇಜಪ್ರಸಾದ್ ಅಮೆಚೂರು ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭ ತಕ್ಕಮುಖ್ಯಸ್ಥರುಗಳಾದ ಕೋಡಿ ಬಾಸ್ಕರ, ಕುಂಬಳಚೇರಿ ಗಣಪತಿ, ಮೂಲೆಮಜಲು ವಿಶ್ವನಾಥ, ನಿಡ್ಯಮಲೆ ಪುರುಷೋತ್ತಮ, ದೇವತಕ್ಕ ರಾಮಕಜೆ ರಾಜುಗೋಪಾಲ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಮಾಜಿ ಮೊಕ್ತೇಸರುಗಳು, ಗ್ರಾಮಸ್ಥರು ಇದ್ದರು.
ಕಾರ್ಯಕ್ರಮವನ್ನು ಕಾರ್ಯದರ್ಶಿ ಹೊನ್ನಪ್ಪ ಕೊಳಂಗಾಯ ಸ್ವಾಗತಿಸಿ, ಸಹ ಕಾರ್ಯದರ್ಶಿ ಜೋಯಪ್ಪ ನಿಡ್ಯಮಲೆ ವಂದಿಸಿದರು.