ಕುಶಾಲನಗರ, ಜೂ. ೨೯: ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಮಾರೋಪ ಸಮಾರಂಭವನ್ನು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಕುಶಾಲನಗರ ಕೃಷಿ ಪತ್ತಿನ ಸಹಕಾರ ಸಂಘ ರಾಜ್ಯದ ಸಹಕಾರ ಸಂಘಗಳಿಗೆ ಮಾದರಿಯಾಗಿ ಹೊರಹೊಮ್ಮಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ ಏಳಿಗೆಗಾಗಿ ದುಡಿದ ಸಹಕಾರಿಗಳನ್ನು ಸ್ಮರಿಸಿ ಸನ್ಮಾನಿಸುವ ಕಾಯಕ ನಿಜ ವಾಗಿಯೂ ಶ್ಲಾಘನೀಯ ಎಂದರು. ಈ ಸಂದರ್ಭ ಸಂಘದ ೨೧ ಮಂದಿ ಮಾಜಿ ಅಧ್ಯಕ್ಷರುಗಳು, ೧೨ ಮಂದಿ ಉಪಾಧ್ಯಕ್ಷರುಗಳು, ವ್ಯವಸ್ಥಾಪಕ ರುಗಳನ್ನು ಸನ್ಮಾನಿಸುವುದರೊಂದಿಗೆ ಕೆಲವರ ಕುಟುಂಬ ಸದಸ್ಯರುಗಳಿಗೆ ಗೌರವ ಸಲ್ಲಿಸಲಾಯಿತು.
ಇದೇ ಸಂದರ್ಭ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ನಡೆಯಿತು. ಸಂಘದ ಸದಸ್ಯರು, ಸಾರ್ವಜನಿಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಗ್ರಾ.ಪಂ. ಅಧ್ಯಕ್ಷೆ ನಂದಿನಿ, ಬಿ.ಕೆ. ಚೆಲುವರಾಜು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ. ಶಶಿಧರ್, ಸಂಘದ ಉಪಾಧ್ಯಕ್ಷ ವಿ.ಎಸ್. ಆನಂದಕುಮಾರ್, ಸಹಕಾರ ಸಂಘಗಳ ಅಧಿಕಾರಿ ಸಂತೋಷ್ ಕುಮಾರ್ ಸೇರಿದಂತೆ ಸಂಘದ ನಿರ್ದೇಶಕರುಗಳು ಇದ್ದರು.