ಮೂರ್ನಾಡು, ಜೂ. ೩೦: ಮೂರ್ನಾಡು ವಿದ್ಯಾಸಂಸ್ಥೆಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ಸಂಸ್ಥೆಯ ಕಾವೇರಿ ಸಭಾಂಗಣದಲ್ಲಿ ನೆರವೇರಿತು.
ಮುಖ್ಯ ಅತಿಥಿಗಳಾಗಿ ಭಾಗಮಂಡಲ ಕಾವೇರಿ ಕಾಲೇಜಿನ ಪ್ರಾಂಶುಪಾಲರಾದ ಕೆ.ಜೆ. ದಿವಾಕರ ಆಗಮಿಸಿದ್ದರು. ಅವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ ಮಕ್ಕಳು ತಮ್ಮ ಚಿಕ್ಕ ವಯಸ್ಸಿನಿಂದಲೇ ಈ ರೀತಿಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಲಾಯಿತು. ಶಾಲಾ ನಾಯಕನಾಗಿ ಗುರುಪ್ರಸಾದ್, ಉಪನಾಯಕಿಯಾಗಿ ನಮ್ರತಾ, ಕ್ರೀಡಾ ನಾಯಕಿಯಾಗಿ ಅಶ್ವಿನಿ ಬಿ.ಆರ್., ಉಪನಾಯಕನಾಗಿ ಚರಣ್ ಹೆಚ್.ಜಿ., ಸಾಂಸ್ಕೃತಿಕ ಸಂಘದ ನಾಯಕನಾಗಿ ಅದ್ವಿತ್ ಟಿ.ಎಸ್., ಉಪನಾಯಕಿಯಾಗಿ ಚರಿಷ್ಮ ಸಿ.ಪಿ. ಆಯ್ಕೆಯಾದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ವಹಿಸಿದ್ದರು. ಕಾರ್ಯದರ್ಶಿ ಪೆಮ್ಮಡಿಯಂಡ ವೇಣು ಅಪ್ಪಣ್ಣ, ಪ್ರಾಥಮಿಕ ಶಾಲೆಯ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ದೇವಕಿ ಹಾಗೂ ಶಿಕ್ಷಕ ವೃಂದದವರು ಹಾಜರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಲೀನಾ ಮುತ್ತಣ ಮಾಡಿದರೆ, ಶಿಕ್ಷಕಿ ರೇಷ್ಮ ಸುಬ್ಬಯ್ಯ ಸ್ವಾಗತಿಸಿ, ಶಿಕ್ಷಕಿ ಉಷಾ ಅಯ್ಯಪ್ಪ ವಂದಿಸಿದರು.