ಸಿದ್ದಾಪುರ, ಜೂ. ೨೯: ಅವರೆಗುಂದ ಭಾಗದಲ್ಲಿ ಒಂಟಿ ಸಲಗವೊಂದು ಜನವಸತಿ ಪ್ರದೇಶದಲ್ಲಿ ದಾಂಧಲೆ ನಡೆಸುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ಅವರೆಗುಂದ ಹಾಡಿಯಲ್ಲಿ ಒಂಟಿ ಸಲಗವೊಂದು ಬೀಡುಬಿಟ್ಟಿದೆ. ರಾತ್ರಿ ಸಮಯದಲ್ಲಿ ಅಲ್ಲಿನ ನಿವಾಸಿಗಳ ಅಂಗಳದಲ್ಲಿ ಓಡಾಡುತ್ತಾ ಕೊಟ್ಟಿಗೆ ಇತ್ಯಾದಿಗಳ ಕಂಬಗಳನ್ನು ಎಳೆದು ಹಾಕುತ್ತಿದೆ. ಚಂದ್ರ ಎಂಬವರಿಗೆ ಸೇರಿದ ಕೊಟ್ಟಿಗೆಯ ಕಂಬಗಳನ್ನು ಎಳೆದು ಹಾಕಿದಲ್ಲದೇ ಮನೆಗಳ ಬಳಿ ಇರುವ ಹಲಸಿನ ಕಾಯಿಗಳನ್ನು ತಿಂದು ರಾತ್ರಿ ಸಮಯದಲ್ಲಿ ಉಪಟಳ ನೀಡುತ್ತಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.