ಮಡಿಕೇರಿ : ಇತ್ತೀಚಿನ ಮೂರು ಬಾರಿಯ ಭೂಕಂಪನ ಘಟನೆಗಳನ್ನು ಅವಲೋಕಿಸಿದರೆ ಮತ್ತೆ ೨೦೧೮ರ ಕಹಿ ಘಟನೆಯ ನೆನಪು ಕಣ್ಣ ಮುಂದೆ ಸುಳಿಯುತ್ತದೆ. ೨೦೧೮ರ ಪೂರ್ವದಲ್ಲಿ ಇದೇ ರೀತಿಯಾಗಿ ಭೂಕಂಪನ ಸಂಭವಿಸಿತ್ತು ಎಂಬುದು ಇಲ್ಲಿ ಗಮನಾರ್ಹ. ಅದೇ ರೀತಿಯಾಗಿ ಮತ್ತೆ ಈ ಬಾರಿಯೂ ಭೂಕಂಪನ ಕಾಣಿಸಿಕೊಂಡು ಅಂದಿನ ಘಟನೆ ಮತ್ತೆ ಸಂಭವಿಸುವ ಅವಕಾಶವಿರುವುದರಿಂದ ಕೊಡಗಿನ ಜನತೆ ಎಚ್ಚೆತ್ತುಕೊಳ್ಳುವುದು ಅನಿವಾರ್ಯ ಎಂದೆನಿಸುತ್ತಿದೆ.
ಈಗಾಗಲೇ ಕೊಡಗು ಜಿಲ್ಲೆಯ ಮಡಿಕೇರಿ ನಗರದ ಕೆಲವು ಭಾಗಗಳಲ್ಲಿ, ಜಿಲ್ಲೆಯ ಗಡಿಭಾಗಗಳಾದ ಕರಿಕೆ, ಸಂಪಾಜೆ, ಭಾಗಮಂಡಲ, ಮಕ್ಕಂದೂರು, ಉದಯಗಿರಿ ಸೇರಿದಂತೆ ನೆರೆಯ ಜಿಲ್ಲೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ನಗರದ ಕುರುಂಜಿಗುಡ್ಡೆ, ಸೋಣಂಗೇರಿ ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶಗಳಾದ ಉಬರಡ್ಕ, ಮಡಪ್ಪಾಡಿ, ಕೊಲ್ಲಮೊಗ್ರು, ಕಲ್ಮಕಾರು, ದೇವಚಳ್ಳ, ಜಾಲ್ಸೂರು, ಆಲೆಟ್ಟಿ, ಐರ್ವನಾಡು, ಕಡಬ, ಸುಬ್ರಹ್ಮಣ್ಯ, ಐನೆಕಿದು ಮತ್ತು ಕಾಸರಗೋಡಿನ ಗಡಿಭಾಗವಾದ ಪಾಣತ್ತೂರು, ಕಲ್ಲಪಳ್ಳಿ ಮುಂತಾದೆಡೆಗಳಲ್ಲಿ ಜೂನ್ ೨೮ರಂದು ಭೂಕಂಪನ ಸಂಭವಿಸಿದೆ ಎನ್ನಲಾಗಿದೆ. ಹೀಗೆಯೇ ಕಳೆದ ಒಂದು ವಾರದ ಹಿಂದೆಯೂ ಭೂಕಂಪನ ಸಂಭವಿಸಿತ್ತು. ಇದರಿಂದ ಎರಡೂ ಜಿಲ್ಲೆಯ ಜನತೆ ಆತಂಕಕ್ಕೊಳಗಾಗಿದ್ದಾರೆ. ೨೦೧೮ರ ಘಟನೆ ಪುನರಾವರ್ತನೆಗೊಳ್ಳಬಹುದೇನೋ ಎಂಬ ಆಲೋಚನೆಯುಂಟಾಗಿ ಭಯ ಭೀತರಾಗಿದ್ದಾರೆ.
೨೦೧೮ರ ಘಟನೆಯಿಂದ ಮಡಿಕೇರಿ ನಗರ ಸೇರಿದಂತೆ, ಸುತ್ತಮುತ್ತಲಿನ ಗ್ರಾಮಗಳಾದ ಹಟ್ಟಿಹೊಳೆ, ಮಾದಾಪುರ, ಹಾಲೇರಿ, ಹೆಮ್ಮೆತ್ತಾಳು, ಮಕ್ಕಂದೂರು, ಉದಯಗಿರಿ, ದೇವಸ್ತೂರು, ಕಾಲೂರು, ಗಾಳಿಬೀಡು, ಮೊಣ್ಣಂಗೇರಿ, ಮದೆ, ಜೋಡುಪಾಲ, ಸಂಪಾಜೆ ಮತ್ತಿತರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊಡಗಿನ ಜನತೆ ಎಂದೂ ನೋಡದ - ಎಂದೂ ಕಾಣದ ಭಾರೀ ಬೆಟ್ಟ ಗುಡ್ಡಗಳ ಭೂಕುಸಿತ, ಪ್ರವಾಹ ಮತ್ತು ಇದರಿಂದ ಸಾವು-ನೋವು ಸಂಭವಿಸಿತ್ತು. ಈ ಘಟನೆಯಿಂದ ಮಡಿಕೇರಿ ತಾಲೂಕಿನ ಬಹುತೇಕ ಮಂದಿ ತಮ್ಮ ಆಸ್ತಿ ಪಾಸ್ತಿಗಳನ್ನಲ್ಲದೆ, ಮನೆಗಳಲ್ಲಿದ್ದ ನಗದು ಮತ್ತು ಚಿನ್ನಾಭರಣಗಳನ್ನು ಕಳೆದುಕೊಂಡು ಬೀದಿ ಪಾಲಾಗಿದ್ದನ್ನು ಸ್ಮರಿಸಬಹುದು.
ಇದೀಗ ಮತ್ತೆ ಮಡಿಕೇರಿ ತಾಲೂಕಿನ ವಿವಿಧೆಡೆಗಳಲ್ಲಿ ಮತ್ತು ಸುಳ್ಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪನ ಸಂಭವಿಸಿದೆ. ೨೦೧೮ ರಂತೆ ಮತ್ತೆ ಭೂಕುಸಿತ, ಪ್ರವಾಹ ಸಂಭವಿಸಬಹುದು ಅಥವಾ ಸಂಭವಿಸದೆ ಇರಲೂಬಹುದು. ಆದರೆ, ಭೂಕಂಪನ ಸಂಭವಿಸಿದ ಪ್ರದೇಶಗಳ ಜನರ ಮನಸ್ಸÀಲ್ಲಿ ಅನುಮಾನ ಮೂಡುತ್ತಿದೆ. ಈಗಾಗಲೇ ಎಲ್ಲೆಲ್ಲಿ ಭೂಕಂಪನ ಗೋಚರಿಸಿದೆಯೋ ಅಲ್ಲಿನ ಜನತೆ ಸ್ವಇಚ್ಚೆಯಿಂದ ಸುರಕ್ಷಿತ ಸ್ಥಳಗಳಿಗೆ ತೆರಳಿ ಆ ಭೂಕುಸಿತ, ಪ್ರವಾಹ ಎಂಬ ಬರ್ಬರತೆಯಿಂದ ರಕ್ಷಣೆ ಪಡೆದುಕೊಳ್ಳುವುದು ಸೂಕ್ತ.
೨೦೧೮ರ ಆ ಘಟನೆ, ಬರ್ಬರತೆ, ಸಾವು-ನೋವು ಮರುಕಳಿಸದಿರಲಿ ಎಂಬುದೇ ಎಲ್ಲರ ಆಶಯ ಆಗಿದೆ. ಆದರೂ ಪ್ರಕೃತಿಯ ಮುಂದೆ ಏನೂ ಹಾಗೂ ಯಾವುದೂ ನಡೆಯದು. ಜಿಲ್ಲಾಡಳಿತದ ಮೂಲಕ ಸರಕಾರ ಕೂಡಲೇ ಸ್ಪಂದಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದು ಸೂಕ್ತ ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ೨೦೧೮ರ ಆ ಕಹಿ ಘಟನೆ ಮತ್ತೆ ಸಂಭವಿಸದಿರಲಿ ಎಂಬುದು ಪ್ರತಿಯೊಬ್ಬರ ಪ್ರಾರ್ಥನೆಯಾಗಿದೆ.
-ಶ್ರೀಧರ್ ಹೂವಲ್ಲಿ