ವೀರಾಜಪೇಟೆ, ಜೂ. ೨೯: ರೋಟರಿಗೆ ಸೇರುವುದರಿಂದ ವ್ಯವಹಾರಕ್ಕೆ ಅನುಕೂಲ ವಾಗುವುದಲ್ಲದೇ ಸಮಾಜಕ್ಕೆ ಒಂದಾಗಿ ಸೇರಿ ಸೇವೆಯನ್ನು ಮಾಡುವುದರ ಜೊತೆಗೆ ಜನರೊಟ್ಟಿಗೆ ಸ್ನೇಹ ಮತ್ತು ಬಾಂಧವ್ಯ ವೃದ್ಧಿಸಿಕೊಕೊಳ್ಳುವಲ್ಲಿಯೂ ರೋಟರಿ ದೊಡ್ಡ ಪಾತ್ರ ವಹಿಸುತ್ತದೆ ಎಂದು ವೀರಾಜಪೇಟೆಯ ರೋಟರಿ ಕ್ಲಬ್ ಭೇಟಿಯ ವೇಳೆ ರೋಟರಿಯ ಜಿಲ್ಲಾ ಗವರ್ನರ್ ರವೀಂದ್ರ ಭಟ್ ತಿಳಿಸಿದರು. ಕೊಡಗಿನ ಅತ್ಯಂತ ಹಳೆಯ ಕ್ಲಬ್‌ಗಳಲ್ಲಿ ಒಂದಾದ ವೀರಾಜಪೇಟೆ ರೋಟರಿ ಕ್ಲಬ್‌ಗೆ ಭೇಟಿ ನೀಡಿದ ರೋಟರಿ ಜಿಲ್ಲಾ ಗವರ್ನರ್ ರವೀಂದ್ರ ಭಟ್ ವೀರಾಜಪೇಟೆಯ ವಿವಿಧೆಡೆ ರೋಟರಿ ಕ್ಲಬ್‌ನಿಂದ ಹಮ್ಮಿಕೊಂಡಿದ್ದ ವಿವಿಧ ಸಮಾಜಮಖಿ ಕಾರ್ಯಕ್ರಮ ಗಳಿಗೆ ಚಾಲನೆಕೊಟ್ಟು ವೀರಾಜಪೇಟೆ ರೋಟರಿ ಕ್ಲಬ್ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, ವೀರಾಜಪೇಟೆ ರೋಟರಿ ಕ್ಲಬ್‌ನ ಕೆಲಸಗಳು ಅಭಿನಂದನಾರ್ಹ ಎಂದರು. ವಿದ್ಯಾಸೇತು ಪುಸ್ತಕಗಳನ್ನು ಅತೀ ಕಡಿಮೆ ಬೆಲೆಗೆ ಸರ್ಕಾರಿ ಅನುದಾನಿತ ಶಾಲೆಗಳಿಗೆ ದಾನಿಗಳ ಸಹಾಯದಿಂದ ನೀಡುವ ಪ್ರಮುಖ ಯೋಜನೆಯನ್ನು ರೋಟರಿ ಹಮ್ಮಿಕೊಂಡಿದ್ದು, ಈ ಯೋಜನೆ ಆರಂಭವಾದ ಬಳಿಕ ಸರ್ಕಾರಿ ಶಾಲೆಯ ಫಲಿತಾಂಶದಲ್ಲೂ ಗಣನೀಯ ಏರಿಕೆ ಕಂಡು ಬಂದಿದೆ ಎಂದರು. ಮುಂಬರುವ ದಿನಗಳಲ್ಲಿ ಈ ಯೋಜನೆಯನ್ನು ಇನ್ನಷ್ಟು ವಿಸ್ತಾರಗೊಳಿಸಲಾಗುವುದು ಎಂದು ತಿಳಿಸಿದರು. ರೋಟರಿಯ ಉಪ ರಾಜ್ಯಪಾಲ ಅನಿಲ್ ಎಚ್.ಟಿ. ಮಾತನಾಡಿ, ರೋಟರಿ ಜಿಲ್ಲಾ ಗವರ್ನರ್ ರೋಟರಿ ಕ್ಲಬ್‌ನ ಸಾಮರಸ್ಯಕ್ಕೆ ಕಾರಣಕರ್ತ ರಾಗಿದ್ದಾರೆ. ರೋಟರಿ ಜಿಲ್ಲಾ ಸಮ್ಮೇಳನವನ್ನು ಬಹಳ ಯಶಸ್ವಿಯಾಗಿ ನಡೆಸಿದ್ದಾರೆ ಹಾಗೂ ಕೋವಿಡ್ ನಿಂದಾಗಿ ನಡೆಯದ ಬಹಳಷ್ಟು ರೋಟರಿಯ ಕಾರ್ಯಯೋಜನೆಗಳನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಜಿಲ್ಲಾ ಗವರ್ನರ್ ಅವರನ್ನು ಶ್ಲಾಘಿಸಿದರು.

ಈ ಸಂದರ್ಭ ಮೂವರು ವಿಭಿನ್ನ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ವೀರಾಜಪೇಟೆ ರೋಟರಿ ಕ್ಲಬ್‌ನಿಂದ ಸನ್ಮಾನ ಮಾಡಲಾಯಿತು. ಹಿರಿಯ ನಾಗರಿಕರಾಗಿ ಇಂದಿಗೂ ಕ್ರೀಡಾ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡುತ್ತಿರುವ ಪಾಲೇಕಂಡ ಬೋಪಯ್ಯ ಹಾಗೂ ಪಾಲೇಕಂಡ ಬೆಳ್ಳಿಯಪ್ಪ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಎಸ್.ಎಸ್. ಎಲ್.ಸಿ.ಯಲ್ಲಿ ಶೇ. ೯೮ ರಷ್ಟು ಅಂಕ ಗಳಿಸಿದ ರೋಟರಿ ಶಾಲೆಯ ವಿದ್ಯಾರ್ಥಿನಿ ಸಾನಿಯಾರನ್ನು ರೋಟರಿಯಿಂದ ಸನ್ಮಾನಿಸಲಾಯಿತು. ನೆಲ್ಲಿಹುದಿಕೇರಿಯ ಉರಗ ಪ್ರೇಮಿ ಸುರೇಶ್ ಪೂಜಾರಿ, ಹಾವು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುವುದರ ಮೂಲಕ ಉರಗ ರಕ್ಷಣೆಯಲ್ಲಿ ತೊಡಗಿಕೊಂಡಿದ್ದು, ಇದುವರೆಗೂ ಹತ್ತು ಸಾವಿರ ಹಾವುಗಳನ್ನು ಹಿಡಿದು ಪ್ರಾಣಿ ರಕ್ಷಣೆಯಲ್ಲಿ ಅಭೂತಪೂರ್ವ ಸೇವೆ ಮಾಡಿದ್ದು, ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ವೀರಾಜಪೇಟೆ ರೋಟರಿ ಕಾರ್ಯದರ್ಶಿ ಭರತ್ ರಾಮ್ ರೈ ರೋಟರಿ ಕ್ಲಬ್‌ನ ವಾರ್ಷಿಕ ವರದಿ ವಾಚಿಸಿದರು. ಪಾರ್ವತಿ ಪ್ರಾರ್ಥಿಸಿದರು, ಕಾರ್ಯಕ್ರಮದಲ್ಲಿ ರೋಟರಿ ವಲಯ ಸೇನಾನಿ ಆದಿತ್ಯ, ವಲಯ ಕಾರ್ಯದರ್ಶಿ ವಸಂತ್ ಕುಮಾರ್, ರೋಟರಿ ಅಧ್ಯಕ್ಷ ಡಾ. ಲವೀನ್ ಚೆಂಗಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವೀರಾಜಪೇಟೆ ರೋಟರಿ ಕ್ಲಬ್‌ನ ಸದಸ್ಯರು ಹಾಜರಿದ್ದರು.