ಸುಂಟಿಕೊಪ್ಪ, ಜೂ. ೩೦: ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮತದಾನ ಮಾಡುವುದರ ಮೂಲಕ ಚುನಾವಣಾ ಅರಿವು ಕಾರ್ಯಕ್ರಮ ನಡೆಸಲಾಯಿತು. ಕಾಲೇಜಿನ ಪ್ರಾಂಶುಪಾಲ ಪಿ.ಎಸ್. ಜಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಮತದಾರರ ನೋಂದಣಿ ಮತ್ತು ಕಾಲೇಜಿನಲ್ಲಿ ಕಾಲೇಜು ಸಂಸತ್ತು ರಚಣೆ ಮಾಡುವ ಸಲುವಾಗಿ ವಿದ್ಯಾರ್ಥಿಗಳಲ್ಲಿ ಚುನಾವಣಾ ಪ್ರಕ್ರಿಯೆ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಚುನಾವಣಾ ಸಾಕ್ಷರತಾ ಸಂಘದ ಸಂಚಾಲಕಿ ಕೆ.ಸಿ. ಕವಿತಾ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮತದಾನವು ಸಂವಿಧಾನ ನಿಮಗೆ ನೀಡಿರುವ ಪವಿತ್ರ ಹಕ್ಕಾಗಿದೆ. ವಿದ್ಯಾರ್ಥಿಗಳು ಕಾಲೇಜಿನ ಹಂತದಲ್ಲಿ ಪ್ರಜಾಪ್ರಭುತ್ವದ ಮಹತ್ವದ ಬಗ್ಗೆ ತಿಳಿದುಕೊಳ್ಳಬೇಕು. ಒಂದು ದೇಶ ನಿಂತಿರುವುದು ಆ ದೇಶದಲ್ಲಿರುವ ಪ್ರಜ್ಞಾವಂತ ಮತದಾರರ ಜವಾಬ್ದಾರಿಯುತ ಕರ್ತವ್ಯದಿಂದ ಎಂದರು.
ನಂತರ ನಡೆದ ಚುನಾವಣೆಯಲ್ಲಿ ಕಾಲೇಜು ನಾಯಕನಾಗಿ ಅನಿಲ್, ನಾಯಕಿಯಾಗಿ ಸ್ವಾಲಿಯೋ, ಕ್ರೀಡಾ ನಾಯಕನಾಗಿ ಮುಬಾಶೀರ್, ಸಾಂಸ್ಕೃತಿಕ ನಾಯಕಳಾಗಿ ಕಾವ್ಯ, ಸ್ವಚ್ಛತಾ ನಿರ್ವಹಣಾ ನಾಯಕಿಯಾಗಿ ಯಶ್ಮಿತಾ ಕೆ ಆಯ್ಕೆಯಾದರು. ಈ ಸಂದರ್ಭ ಉಪನ್ಯಸಕರಾದ ಎಸ್.ಹೆಚ್. ಈಶ, ಫಿಲಿಪ್ವಾಸ್, ಕೆ.ಸಿ. ಕವಿತಾ, ಪದ್ಮಾವತಿ ಕವಿತಾಭಕ್ತ್, ಜಯಶ್ರೀ, ಕೆ.ಎಸ್. ಮಂಜುಳ, ಸುಕನ್ಯಾ, ನದಿಯಾ, ದೀಕ್ಷಿತಾ ಹಾಜರಿದ್ದರು.