ಸೋಮವಾರಪೇಟೆ, ಜೂ. ೨೯: ಕಳೆದ ಐದಾರು ದಶಕದ ಹಿಂದೆ ಅಳವಡಿಸಿರುವ ಓಬೀರಾಯನ ಕಾಲದ ವಿದ್ಯುತ್ ವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಸೋಮವಾರಪೇಟೆ ಸೆಸ್ಕ್ ಇಲಾಖಾ ಕಚೇರಿಗೆ ಮುತ್ತಿಗೆ ಹಾಕಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ತಾಕೇರಿ ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಗ್ರಾಮದಲ್ಲಿ ನಡೆದ ಗ್ರಾಮಾಭಿವೃದ್ಧಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದ ಗ್ರಾಮಸ್ಥರು, ಸೆಸ್ಕ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ತಾಕೇರಿ ಗ್ರಾಮದಲ್ಲಿರುವ ವಿದ್ಯುತ್ ಮಾರ್ಗವನ್ನು ಬದಲಾಯಿಸುವಂತೆ ೨೦೧೯ರಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ ಪತ್ರ ಬರೆಯಲಾಗಿತ್ತು. ಅಂದಿನ ಎಂ.ಡಿ. ಎಂ.ಪಿ. ಗೋಪಾಲಕೃಷ್ಣ ಅವರು ಸೋಮವಾರಪೇಟೆ ಉಪವಿಭಾಗದ ಎ.ಇ.ಇ. ಅವರಿಗೆ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ಆದರೆ ಇದುವರೆಗೆ ಇಲಾಖಾಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಶಾಸಕರ ಗಮನಕ್ಕೂ ತರಲಾಗಿದೆ ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಸೆಸ್ಕ್ನವರ ನಿರ್ಲಕ್ಷö್ಯದಿಂದ ತಾಕೇರಿ ಗ್ರಾಮದ ಕೃಷಿಕರು ಸಂಕಷ್ಟ ಅನುಭವಿಸಬೇಕಾಗಿದೆ. ಮುಂದಿನ ೧೫ ದಿನಗಳ ಒಳಗೆ ಕಾಫಿ ತೋಟದೊಳಗೆ ಹಾದು ಹೋಗಿರುವ ಓಬೀರಾಯನ ಕಾಲದ ವಿದ್ಯುತ್ ಮಾರ್ಗವನ್ನು ಬದಲಾಯಿಸಲು ಕ್ರಮಕೈಗೊಳ್ಳದಿದ್ದರೆ ಸೋಮವಾರಪೇಟೆ ಸೆಸ್ಕ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಗ್ರಾಮಸ್ಥರು ನಿರ್ಧರಿಸಿದರು.

ಮಳೆಗಾಲ ಬಂತೆAದರೆ ವಿದ್ಯುತ್ ಸಮಸ್ಯೆ ಕಾಡುತ್ತದೆ. ೨೫ ಕಿ.ಮೀ. ದೂರದಲ್ಲಿ ವಿದ್ಯುತ್ ಮಾರ್ಗದ ತಂತಿ ಮೇಲೆ ಮರ ಬಿದ್ದರೆ, ತಾಕೇರಿ ಗ್ರಾಮಕ್ಕೂ ವಾರಗಟ್ಟಲೆ ವಿದ್ಯುತ್ ಇರುವುದಿಲ್ಲ. ೬೦ ವರ್ಷಗಳ ಹಿಂದಿನ ವಿದ್ಯುತ್ ಮಾರ್ಗವಿದೆ. ಕಾಫಿ ತೋಟದೊಳಗೆ ಹಾದು ಹೋಗಿದೆ. ತಂತಿಗಳು ಕೈಗೆಟಕುತ್ತವೆ. ಮಳೆಗಾಲದಲ್ಲಿ ತೋಟದೊಳಗೆ ತಿರುಗಾಡಲು ಭಯವಾಗುತ್ತದೆ ಎಂದು ಗ್ರಾಮ ನಿವಾಸಿ ಕೆ.ಈ. ಕುಟ್ಟಪ್ಪ ಹೇಳಿದರು.

ಪೋಸ್ಟ್ ಆಫೀಸ್ ಜಂಕ್ಷನ್‌ನಿAದ ಶಿರದಗೌಡ್ನಮನೆ, ಕೊಂಬಗೋಡಿ ಮನೆ, ಅರಸಗಳ್ಳಿ ಮನೆ, ದೊಡ್ಡೆಗೌಡ್ನ ಮನೆ, ಹಳ್ಳಿಬೆಟ್ಟ ಮಾರ್ಗದ ವಿದ್ಯುತ್ ಮಾರ್ಗ ಸಂಪೂರ್ಣ ಹಾಳಾಗಿದೆ. ೬೦ ವರ್ಷ ಹಿಂದಿನ ಕಬ್ಬಿಣದ ಕಂಬಗಳು ತುಕ್ಕುಹಿಡಿದಿವೆ. ಕೆಲವು ಕಡೆ ಮರದ ರೆಂಬೆಗಳಿಗೆ ತಾಕಿಕೊಂಡ ತಂತಿಗಳಿವೆ. ಕೇವಲ ೩೦ ಕಂಬಗಳನ್ನು ಹಾಕಿದರೆ ಮಾರ್ಗ ಬದಲಾಯಿಸಬಹುದು ಎಂದು ಕುಟ್ಟಪ್ಪ ಹೇಳಿದರು.

ತಾಕೇರಿ ಗ್ರಾಮದಲ್ಲಿ ೪೫೦ ಕುಟುಂಬಗಳಿವೆ. ನಿಗದಿತವಾಗಿ ಇಲಾಖೆಗೆ ವಿದ್ಯುತ್ ಬಿಲ್ ಪಾವತಿಸುತ್ತೇವೆ. ಎಲ್ಲಾ ತೆರಿಗೆಯನ್ನು ಕಟ್ಟುತ್ತಿದ್ದೇವೆ. ಆದರೆ ಸೆಸ್ಕ್ ಇಲಾಖೆಯಿಂದ ಗುಣಮಟ್ಟದ ವಿದ್ಯುತ್ ಸಿಗುತ್ತಿಲ್ಲ. ಸುಸಜ್ಜಿತ ವಿದ್ಯುತ್ ಮಾರ್ಗವನ್ನು ಕಲ್ಪಿಸಬೇಕು. ತಪ್ಪಿದಲ್ಲಿ ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದು ತಾಕೇರಿ ಬೀರೆದೇವರ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎ.ಪಿ.ತಿಮ್ಮಯ್ಯ ತಿಳಿಸಿದರು.

ಯಡೂರು-ತಲ್ತಾರೆಶೆಟ್ಟಳ್ಳಿ ಗ್ರಾಮಗಳ ಮೂಲಕ ಬಳಸಿಕೊಂಡು ತಾಕೇರಿಗೆ ವಿದ್ಯುತ್ ಮಾರ್ಗ ಬಂದಿದೆ. ಯಡೂರು ಗ್ರಾಮದಲ್ಲಿ ಮಾರ್ಗಕ್ಕೆ ಸಮಸ್ಯೆಯಾದರೆ ತಾಕೇರಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಾರೆ. ದುದ್ದಗಲ್ಲು, ಬಾಗಿಲುಕಂಡಿ ಮೂಲಕ ಹಾದು ಹೋಗಿರುವ ೧೧ ಕೆ.ವಿ. ವಿದ್ಯುತ್ ಮಾರ್ಗದಿಂದ ತಾಕೇರಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದರೆ, ಎಲ್ಲಾ ಸಮಸ್ಯೆ ಬಗೆ ಹರಿಯುತ್ತದೆ. ಸಂಪೂರ್ಣ ಮುಖ್ಯ ರಸ್ತೆಯ ಬದಿಯಲ್ಲೇ ವಿದ್ಯುತ್ ತಂತಿಯನ್ನು ಎಳೆಯಬಹುದು ಎಂದು ಗ್ರಾಮಸ್ಥರಾದ ಜಿ.ಪಿ. ಲಿಂಗರಾಜು, ಎಂ.ಬಿ. ಕಿಶೋರ್, ಡಿ.ಪಿ. ಧರ್ಮಪ್ಪ, ಬಿ.ಈ. ರವಿ, ಬಿ.ಪಿ. ಮಂಜುನಾಥ್ ಮತ್ತಿತರರು ಅಭಿಪ್ರಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಸೆಸ್ಕ್ ಜೆ.ಇ. ವಿಜಯಕುಮಾರ್ ಅವರಿಗೆ ಶಿಥಿಲಾವಸ್ಥೆಯಲ್ಲಿರುವ ವಿದ್ಯುತ್ ಮಾರ್ಗವನ್ನು ಗ್ರಾಮಸ್ಥರು ತೋರಿಸಿದರು. ಈಗಾಗಲೇ ೧೩ ಕಂಬಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಗತ್ಯವಿರುವ ಹೆಚ್ಚಿನ ಕಂಬಗಳಿಗೆ ಬೇಡಿಕೆ ಸಲ್ಲಿಸಲಾಗುವುದು. ಸಮಸ್ಯೆಯ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿ, ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವಿಜಯಕುಮಾರ್ ಭರವಸೆ ನೀಡಿದರು.