ಕುಶಾಲನಗರ, ಜೂ. ೨೯: ಕುಶಾಲನಗರದ ಲಯನ್ಸ್ ಕ್ಲಬ್‌ನ ೨೦೨೨-೨೩ನೇ ಸಾಲಿನ ಅಧ್ಯಕ್ಷರಾಗಿ ನಿವೃತ್ತ ಅರಣ್ಯ ಅಧಿಕಾರಿ ಎಂ.ಎಸ್. ಚಿಣ್ಣಪ್ಪ ಅಧಿಕಾರ ಸ್ವೀಕರಿಸಿದರು.

ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಲಯನ್ಸ್ ಕ್ಲಬ್ ಜಿಲ್ಲಾ ಮಾಜಿ ರಾಜ್ಯಪಾಲ ಹೆಚ್.ಆರ್. ಹರೀಶ್ ಪದಗ್ರಹಣ ನೆರವೇರಿಸಿದರು.

ನಂತರ ಮಾತನಾಡಿದ ಅವರು, ನಿಸ್ವಾರ್ಥ ಸೇವೆಯ ಮೂಲಕ ಆತ್ಮತೃಪ್ತಿ ಹೊಂದಲು ಸಾಧ್ಯವಿದೆ. ಸೇವಾ ಸಂಘಟನೆಗಳ ಪೈಕಿ ಮುಂಚೂಣಿಯಲ್ಲಿರುವ ಲಯನ್ಸ್ ಕ್ಲಬ್ ಸದಸ್ಯರಾಗುವ ಮೂಲಕ ಸೇವಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸಮಾಜಮುಖಿಯಾಗುವ ಅವಕಾಶ ಲಭ್ಯವಿದೆ. ಲಯನ್ಸ್ ಸದಸ್ಯರು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ನೊಂದವರ, ಅಶಕ್ತರಿಗೆ ಸಹಕಾರ, ನೆರವಿನ ಹಸ್ತ ಚಾಚಬೇಕಿದೆ. ಪ್ರತಿಯೊಬ್ಬ ಮನುಜ ಕೂಡ ಸೇವಾ ಮನೋಭಾವ ಬೆಳೆಸಿಕೊಂಡಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದರು.

ನೂತನ ಸಾಲಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಎಂ.ಎಸ್. ಚಿಣ್ಣಪ್ಪ ಮಾತನಾಡಿ, ಲಯನ್ಸ್ ಕ್ಲಬ್ ಧ್ಯೇಯೋದ್ದೇಶಗಳಿಗೆ ಪೂರಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರಾಮಾಣಿಕ ಸೇವೆ ಸಲ್ಲಿಸುವುದಾಗಿ ಹೇಳಿದರು. ಈ ಸಂದರ್ಭ ನೂತನ ಸದಸ್ಯರನ್ನು ಸಂಘಕ್ಕೆ ಬರಮಾಡಿಕೊಳ್ಳಲಾಯಿತು.

ಲಯನ್ಸ್ ಪ್ರಾಂತೀಯ ಅಧ್ಯಕ್ಷ ಧನು ಉತ್ತಯ್ಯ, ಪ್ರಾಂತೀಯ ಸಹಾಯಕ ರಾಜ್ಯಪಾಲ ನವೀನ್ ಅಂಬೇಕಲ್, ವಲಯ ಅಧ್ಯಕ್ಷರಾದ ಗ್ಲೆನ್ ನಿಶಾಂತ್ ಮೆನೆಜಸ್, ಪಂಚಮ್ ತಮ್ಮಯ್ಯ, ಸಂಘದ ನಿರ್ಗಮಿತ ಅಧ್ಯಕ್ಷ ಟಿ.ಕೆ. ರಾಜಶೇಖರ್, ನೂತನ ಕಾರ್ಯದರ್ಶಿ ವಿ.ಎಸ್. ಸುಮನ್ ಬಾಲಚಂದ್ರ, ಖಜಾಂಚಿ ಕೆ.ಕೆ. ಹೇಮಂತ್, ಮಾಜಿ ಅಧ್ಯಕ್ಷರುಗಳಾದ ಪಿ.ಎಂ. ಮೋಹನ್, ಕೊಡಗನ ಹರ್ಷ, ಜಿಲ್ಲೆಯ ವಿವಿಧ ಲಯನ್ಸ್ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.