ವೀರಾಜಪೇಟೆ, ಜೂ. ೨೯: ಗುಣಮಟ್ಟದ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಬಹುಮುಖ ಪ್ರತಿಭೆ ವಿಕಾಸಕ್ಕೆ ಹೆಚ್ಚು ಆದ್ಯತೆ ನೀಡುತ್ತಾ ಬಂದಿರುವ ವೀರಾಜಪೇಟೆಯ ಚಿಕ್ಕಪೇಟೆ ಬಳಿಯಿರುವ ಜಯಪ್ರಕಾಶ್ ನಾರಾಯಣ ಸ್ಮಾರಕ ಪ್ರೌಢಶಾಲೆಗೆ ಪ್ರತಿಷ್ಠಿತ ಜಿಲ್ಲಾಮಟ್ಟದ ಸ್ವಚ್ಛ ವಿದ್ಯಾಲಯ ಪುರಸ್ಕಾರ ಲಭಿಸಿದೆ.
ಮಡಿಕೇರಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಶಾಲೆಯ ಮುಖ್ಯೋಪಾಧ್ಯಾಯ ಲಾಲ್ ಕುಮಾರ್ ಅವರಿಗೆ ಪ್ರಶಸ್ತಿ ನೀಡಿ, ಸನ್ಮಾನಿಸಿದರು.
ಕೇಂದ್ರ ಸರಕಾರದ ಶಾಲಾ ಶಿಕ್ಷಣ, ಸಾಕ್ಷರತಾ ಇಲಾಖೆ ಸ್ಥಾಪಿಸಿರುವ ಈ ಪ್ರಶಸ್ತಿಗೆ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಶಾಲೆಗಳು ಅರ್ಜಿ ಸಲ್ಲಿಸಿದ್ದವು. ಈ ಪೈಕಿ ಜಯಪ್ರಕಾಶ್ ನಾರಾಯಣ ಸ್ಮಾರಕ ಪ್ರೌಢಶಾಲೆ ಸಹ ಒಂದಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ಲಾಲ್ ಕುಮಾರ್ ತಿಳಿಸಿದರು.
ಕೋವಿಡ್ ಅವಧಿ ಮತ್ತು ಕೋವಿಡ್ ಸೋಂಕಿನ ಆತಂಕ ಇನ್ನೂ ಸಕ್ರಿಯವಾಗಿರುವ ನಂತರದ ಪ್ರಸಕ್ತ ಅವಧಿಯಲ್ಲಿ ಶಾಲೆ ಹಾಗೂ ತರಗತಿಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದರ ಜೊತೆಗೆ, ಮಕ್ಕಳಲ್ಲಿ ವೈಯಕ್ತಿಕ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಅಂಶಗಳನ್ನು ಪ್ರಶಸ್ತಿಯ ಪ್ರಮುಖ ಮಾನದಂಡವಾಗಿ ಪರಿಗಣಿಸಲಾಗಿದೆ.