ಮುಳ್ಳೂರು, ಜೂ. ೨೯: ಸಮಿಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಸಭೆ ಗ್ರಾ.ಪಂ. ಉಪಾಧ್ಯಕ್ಷ ನಿತಿನ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.
ಕೆಡಿಪಿ ಸಭೆಯಲ್ಲಿ ಭಾಗವಹಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಮಾಹಿತಿ ನೀಡಲು ಅವಕಾಶ ನೀಡಲಾಗಿತ್ತು. ಆದರೆ ಸಭೆಗೆ ಆಹಾರ, ಅರಣ್ಯ, ಆರೋಗ್ಯ ಇಲಾಖೆ ಅಧಿಕಾರಿಗಳು ಗೈರು ಹಾಜರಾಗಿರುವುದನ್ನು ಗಮನಿಸಿದ ಗ್ರಾ.ಪಂ. ಸದಸ್ಯರಾದ ಸಿ.ಜೆ. ಗಿರೀಶ್, ಡಿ.ಬಿ. ಬೋಜಪ್ಪ ಅವರುಗಳು ಆಕ್ಷೇಪ ವ್ಯಕ್ತಪಡಿಸಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಮುಖ್ಯವಾಗಿ ಅರಣ್ಯ, ಆಹಾರ, ಆರೋಗ್ಯ ಇಲಾಖೆಗೆ ಸಂಬAಧಪಟ್ಟ ಸಮಸ್ಯೆಗಳಿವೆ. ಆದರೆ ಪ್ರಗತಿ ಸಭೆಗೆ ಮುಖ್ಯವಾಗಿ ಹಾಜರಾಗಿರಬೇಕಾದ ಇಲಾಖೆ ಅಧಿಕಾರಿಗಳೇ ಗೈರು ಹಾಜರಾಗಿರುತ್ತಾರೆ. ಗೈರು ಹಾಜರಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಅವರಿಗೆ ದೂರು ನೀಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಅರಣ್ಯ ಇಲಾಖೆಗೆ ಸಂಬAಧಪಟ್ಟ ಚರ್ಚೆ ಸಂದರ್ಭ ಹಿರಿಯ ಸದಸ್ಯ ಡಿ.ಬಿ. ಬೋಜಪ್ಪ ಅರಣ್ಯ ಇಲಾಖೆ ಕೊಡಗು ಜಿಲ್ಲೆ ಮತ್ತು ಇತರೆ ಜಿಲ್ಲೆಗಳಿಗೊಂದು ಎಂಬAತೆ ಕಾನೂನು ತಾರತಮ್ಯ ಮಾಡುತ್ತಿದೆ. ಮನೆ ಕಟ್ಟುವ ಸಂದರ್ಭ ಸ್ವಂತ ಜಮೀನಿನಲ್ಲಿರುವ ಮರ ಕುಯ್ಯಲು ಕೊಡಗಿನಲ್ಲಿ ಅರಣ್ಯ ಇಲಾಖೆಯವರು ೧೯೬೯ ರಲ್ಲಿದ್ದ ಕಾನೂನು ನಿಯಮವನ್ನು ಈಗಲೂ ಮುಂದುವರೆಸಿದೆ. ಆದರೆ ನೆರೆಯ ಜಿಲ್ಲೆಗಳಲ್ಲಿ ನಮ್ಮ ಜಿಲ್ಲೆಯಲ್ಲಿರುವಂತೆ ಕಠಿಣ ಕಾನೂನುಗಳಿಲ್ಲ ಎಂದು ಇಲಾಖೆಯ ನಿಯಮದ ಬಗ್ಗೆ ಆಕ್ಷೇಪಿಸಿದರು.
ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಶಾಸಕರ ಅನುದಾನದಿಂದ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗಾಗಿ ರೂ. ೫೦ ಲಕ್ಷ ಬಿಡುಗಡೆ ಮಾಡಿದ್ದು, ಸದ್ಯದಲ್ಲಿ ಕಾಮಗಾರಿ ಕಾರ್ಯ ಮಾಡಲಾಗುತ್ತದೆ ಎಂದು ಜಿ.ಪಂ. ಇಂಜಿನಿಯರ್ ಸಲೀಂ ಮಾಹಿತಿ ನೀಡಿದರು. ತೋಟಗಾರಿಕೆ ಇಲಾಖೆಯ ಸೇವೆಗಳ ಕುರಿತು ಸಹಾಯಕ ತೋಟಗಾರಿಕೆ ಇಲಾಖೆ ಅಧಿಕಾರಿ ಸಿಂಧು, ಕಂದಾಯ ಇಲಾಖೆಯ ಸೌಲಭ್ಯಗಳ ಕುರಿತು ಕಂದಾಯ ಇಲಾಖೆ ಅಧಿಕಾರಿ ಸಂತೋಷ್, ಶಿಕ್ಷಣ ಇಲಾಖೆ ಸೇವೆ ಕುರಿತು ಕ್ಲಸ್ಟರ್ ಸಿಆರ್ಪಿ ದಿನೇಶ್ ಸಮಗ್ರ ಮಾಹಿತಿ ನೀಡಿದರು. ಕೃಷಿ, ಸಮಾಜ ಕಲ್ಯಾಣ, ಗ್ರಂಥಾಲಯ ಇಲಾಖೆ ಸಿಬ್ಬಂದಿ ಸಭೆಯಲ್ಲಿ ಮಾಹಿತಿ ನೀಡಿದರು. ಸಭೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ದುಂಡಳ್ಳಿ ಗ್ರಾ.ಪಂ. ಪಿಡಿಓ ರಾಜೇಂದ್ರ ಕೆಡಿಪಿ ಸಭೆಯ ಉದ್ದೇಶದ ಕುರಿತು ಮಾತನಾಡಿದರು.
ಸಭೆಯಲ್ಲಿ ಗ್ರಾ.ಪಂ.ಯ ಸದಸ್ಯರು, ವಿವಿಧ ಇಲಾಖೆ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾ.ಪಂ. ಸಿಬ್ಬಂದಿ ಹಾಜರಿದ್ದರು.