*ಗೋಣಿಕೊಪ್ಪ, ಜೂ. ೨೭: ೨ ಕೋಟಿ ೪೫ ಲಕ್ಷಗಳಲ್ಲಿ ಗೋಣಿಕೊಪ್ಪ ಬಸ್ ನಿಲ್ದಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲು ಸೂಕ್ತ ಅನುದಾನವನ್ನು ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದ್ದಾರೆ.
ಗೋಣಿಕೊಪ್ಪದ ವಾಹನ ನಿಲ್ದಾಣದಿಂದ ಮಾಂಸ ಮಾರುಕಟ್ಟೆ ವರೆಗೆ ರೂ. ೨೦ ಲಕ್ಷ ಅನುದಾನದಲ್ಲಿ ನಿರ್ಮಾಣವಾದ ಕಾಂಕ್ರಿಟ್ ರಸ್ತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಂಚಾಯಿತಿ ವ್ಯಾಪ್ತಿಯ ೮ ವಾರ್ಡ್ಗಳ ಅಭಿವೃದ್ಧಿಗೆ ಸುಮಾರು ೨.೫೦ ಕೋಟಿ ಅನುದಾನವನ್ನು ಒದಗಿಸಲಾಗಿದೆ. ಈ ಅನುದಾನದಲ್ಲಿ ಬೈಪಾಸ್ ರಸ್ತೆ ಮತ್ತು ರಸ್ತೆ ಕಾಮಗಾರಿ ಗಳು ನಡೆಯಲಿವೆ. ಕಾಂಕ್ರಿಟ್ ರಸ್ತೆಗೆ ಪಿ.ಡಬ್ಲ್ಯೂಡಿ ಇಲಾಖೆಯಿಂದ ರೂ. ೧೦ ಲಕ್ಷ ಹಾಗೂ ಪರಿಶಿಷÀ್ಟ ಜಾತಿ, ಕಾಲೋನಿ ರಸ್ತೆ ಅಭಿವೃದ್ದಿ ಅನುದಾನ ದಲ್ಲಿ ರೂ. ೫ ಲಕ್ಷ ಮತ್ತು ಶಾಸಕರ ಅನುದಾನದಲ್ಲಿ ರೂ. ೫ ಲಕ್ಷ ಸೇರಿ ದಂತೆ ಒಟ್ಟು ರೂ. ೨೦ ಲಕ್ಷ ವೆಚ್ಚದಲ್ಲಿ ಮಾರುಕಟ್ಟೆ ರಸ್ತೆ ಕಾಂಕ್ರಿಟಿಕರಣ ಗೊಂಡಿದೆ ಎಂದು ತಿಳಿಸಿದ ಅವರು ಮತ್ತಷ್ಟು ಅನುದಾನ ಒದಗಿಸುವ ಮೂಲಕ ಪಂಚಾಯಿತಿ ಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯ ಲಾಗುವುದು. ಆಡಳಿತ ಮಂಡಳಿ ಇದಕ್ಕೆ ಪೂರಕವಾದ ವ್ಯವಸ್ಥೆಯನ್ನು ರೂಪಿಸಿ ಜನಪರ ಕಾರ್ಯಗಳನ್ನು ಅನುಷ್ಠಾನ ಗೊಳಿಸಬೇಕು ಎಂದು ಹೇಳಿದರು.
ಜಿ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ಗ್ರಾ.ಪಂ. ಅಧ್ಯಕ್ಷೆ ಚೈತ್ರಾ ಬಿ. ಚೇತನ್, ಸದಸ್ಯರು ಗಳಾದ ಬಿ.ಎನ್. ಪ್ರಕಾಶ್, ರಾಜೇಶ್ ಕೆ, ನೂರೇರ ರತಿ ಅಚ್ಚಪ್ಪ, ಹಕೀಮ್, ಗೀತಾ ಜಿ.ಕೆ., ಪುಷ್ಪಾ ಮನೋಜ್, ವಿವೇಕ್ ರಾಯ್ಕರ್, ರಾಮ್ದಾಸ್, ಸೌಮ್ಯ ಬಾಲು, ಶಕ್ತಿ ಕೇಂದ್ರದ ಪ್ರಮುಖ್ ಮಂಜು ರೈ, ಮಾಜಿ ಗ್ರಾ.ಪಂ. ಸದಸ್ಯ ಸುರೇಶ್, ಕಾರ್ಯಕರ್ತ ಜಲೀಲ್ ಹಾಗೂ ವಾಹನ ಚಾಲಕರ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.