ಸುಂಟಿಕೊಪ್ಪ, ಜೂ.೨೭: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಪ್ರಗತಿ ಪರಿಶೀಲನಾ ಸಭೆ(ಕೆಡಿಪಿ) ಅಧ್ಯಕ್ಷÀ ಶಿವಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆಯಲ್ಲಿ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. ೫೩ ಫಲಿತಾಂಶ ಬಂದಿರುವ ಬಗ್ಗೆ ಪಂಚಾಯಿತಿ ಆಡಳಿತ ಮಂಡಳಿ ಸೇರಿದಂತೆ ಪಿಡಿಓ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಸರಕಾರಿ ಶಾಲೆಯಲ್ಲಿ ಬಡ ಕಾರ್ಮಿಕರ ಮಕ್ಕಳೇ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರುಗಳಿಗೆ ಶಿಕ್ಷಕರುಗಳು ಹೆಚ್ಚಿನ ಮುತುವರ್ಜಿ ವಹಿಸಿ ವ್ಯಾಸಂಗದಲ್ಲಿ ಮುಂದೆ ಬರಲು ವಿಶೇಷ ಶಿಕ್ಷಣ ಕೊಡಬೇಕು. ಇಲ್ಲದಿದ್ದರೆ ಗ್ರಾಮೀಣ ಬಡ ಕೂಲಿ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಇದರಿಂದ ದೇಶದಲ್ಲಿ ಬಡವರು ಕೂಲಿಕಾರ್ಮಿಕರ ಮಕ್ಕಳು ಉದ್ಯೋಗದಿಂದಲೂ ವಂಚಿತರಾಗುತ್ತಾರೆ ಎಂದು ಪಿಡಿಓ ವೇಣುಗೋಪಾಲ್ ಅವರು ಅಭಿಪ್ರಾಯಪಟ್ಟರು. ಅಂಗನವಾಡಿಗೆ ನೂತನವಾಗಿ ಸರಕಾರದಿಂದ ಕಟ್ಟಡ ನಿರ್ಮಿಸಿಕೊಡಬೇಕೆಂದು ಅಂಗನವಾಡಿ ಕಾರ್ಯಕರ್ತೆ ಜಯಂತಿ ಮನವಿ ಮಾಡಿದರು.

ಪುಂಡರ ಹಾವಳಿ: ಸುಂಟಿಕೊಪ್ಪ ಮಾದರಿ ಪ್ರಾಥಮಿಕ ಶಾಲೆ, ಗದ್ದೆಹಳ್ಳದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ರಾತ್ರಿವೇಳೆ ಪುಂಡರ ಹಾವಳಿ ಹೆಚ್ಚಾಗಿದೆ. ಮದ್ಯಪಾನ ಸೇವಿಸಿ ಬಾಟಲಿಗಳನ್ನು ಅಲ್ಲಿ ಬಿಟ್ಟು ಹೋಗುತ್ತಾರೆ. ಶಾಲೆಯ ಕಟ್ಟಡದ ಹೆಂಚಿನ ಮೇಲೆ ಕಲ್ಲು ತೂರಾಟ ಮಾಡಿ ಹಾನಿ ಮಾಡುತ್ತಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮುಖ್ಯೋಪಾಧ್ಯಾಯಿನಿ ಗೀತಾ ಹಾಗೂ ಚಂದ್ರಾವತಿ ಮನವಿ ಸಲ್ಲಿಸಿದರು.

ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಹೋಂಗಾರ್ಡ್ಗಳ ಸೇವೆ ಈಗ ಸ್ಥಗಿತಗೊಳಿಸಲಾಗಿದೆ. ಎಲ್ಲಾ ಕಡೆ ರಾತ್ರಿ ಕಾವಲು ನಿರ್ವಹಿಸಲು ಕಷ್ಟ ಸಾಧ್ಯವಾಗಿದೆ ಎಂದು ಸುಂಟಿಕೊಪ್ಪದ ಎಎಸ್‌ಐ ಶಿವಪ್ಪ ಸಭೆಗೆ ತಿಳಿಸಿದರು.

ಗೈರಾದ ಅಧಿಕಾರಿಗೆ ನೋಟೀಸ್: ಗ್ರಾಮ ಪಂಚಾಯಿತಿ ಅಭಿವೃದ್ಧಿ ಪರಿಶೀಲನಾ ಸಭೆಗೆ ೨೯ ಇಲಾಖೆ ಅಧಿಕಾರಿಗಳಲ್ಲಿ ಕೇವಲ ೧೦ ಅಧಿಕಾರಿಗಳು ಭಾಗವಹಿಸಿದರು. ಕಂದಾಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಗೈರಾಗಿದ್ದರು. ಗೈರಾದ ಅಧಿಕಾರಿಗಳ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವರದಿ ನೀಡಲಾಗುವುದೆಂದು ಪಿಡಿಓ ವೇಣುಗೋಪಾಲ್ ತಿಳಿಸಿದರು.

ಈ ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸದಸ್ಯರುಗಳಾದ ಶಬೀರ್, ರಫೀಕ್ ಖಾನ್, ಪಿ.ಎಫ್. ಸಬಾಸ್ಟೀನ್, ಪಿ.ಆರ್.ಸುಕುಮಾರ್, ಆಲಿಕುಟ್ಟಿ, ಸೋಮನಾಥ್, ಜಿನಾಸುದ್ದೀನ್, ವಸಂತಿ, ಗ್ರಾ.ಪಂ. ಲೆಕ್ಕಾಧಿಕಾರಿ ಚಂದ್ರಕಲಾ, ಕೃಷಿಇಲಾಖೆ ಅಧಿಕಾರಿ ನವ್ಯಾ ನಾಣ್ಣಯ್ಯ, ಸೆಸ್ಕ್ನ ನಾಗರಾಜು, ಸರಕಾರಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯನಿ ಗೀತಾ, ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಾಲಕೃಷ್ಣ, ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕುಶ ಹಾಜರಿದ್ದರು.