ಕುಶಾಲನಗರ, ಜೂ. ೨೭: ಸಹಕಾರ ಸಂಘಗಳಲ್ಲಿ ದುರುಪಯೋಗ ತಪ್ಪಿಸುವ ನಿಟ್ಟಿನಲ್ಲಿ ಏಕಗವಾಕ್ಷಿ ಯೋಜನೆ ರೂಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಚಿಂತನೆ ಹರಿಸಿದೆ ಎಂದು ರಾಜ್ಯ ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ. ಅವರು ಕುಶಾಲನಗರ ನಂ. ೧೨೨ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ವಾಣಿಜ್ಯ ಸಮುಚ್ಛಯ ಭವನಕ್ಕೆ ಶಂಕು ಸ್ಥಾಪನೆ ನೆರವೇರಿಸಿದ ಬಳಿಕ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು.ಕೆಲವು ಸಹಕಾರ ಸಂಘಗಳಲ್ಲಿ ವಂಚನೆ ಪ್ರಕರಣಗಳನ್ನು ತಡೆಯುವುದು ಮತ್ತು ಸಹಕಾರ ಸಂಘಗಳ ವ್ಯವಹಾರ ವಹಿವಾಟುಗಳನ್ನು ಒಂದೇ ಸೂರಿನಡಿ ಕೇಂದ್ರೀಕರಿಸುವ ನಿಟ್ಟಿನಲ್ಲಿ ಈ ಯೋಜನೆ ಸಹಕಾರಿಯಾಗಲಿದೆ ಎಂದರು. ರಾಜ್ಯದಲ್ಲಿ ೨೧ ಡಿಸಿಸಿ ಬ್ಯಾಂಕ್‌ಗಳು ಮತ್ತು ೫೪೭೭ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಲಾಭದಲ್ಲಿದ್ದು, ಕೆಲವು ಬೆರಳೆಣಿಕೆ ಸಂಘಗಳು ಮಾತ್ರ ನಷ್ಟದಲ್ಲಿವೆ ಎಂದು ಸಚಿವರು ತಿಳಿಸಿದರು. ಈಗಾಗಲೇ ರಾಜ್ಯದಲ್ಲಿ ರೂ. ೬೩೭೦ ಕೋಟಿ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ವಿತರಿಸಲಾಗಿದೆ. ಉಳಿದಂತೆ ರೈತರ ೫೦ ಸಾವಿರ ಹಾಗೂ ೧ ಲಕ್ಷ ಮೊತ್ತದ ಸಾಲಮನ್ನಾ ಬಾಕಿ ಇದ್ದು ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಮುಖ್ಯಮಂತ್ರಿಗಳ ಅಂಕಿತ ಬೀಳುವ ಭರವಸೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಸಹಕಾರ ಇಲಾಖೆ ಮೂಲಕ ೩೩ ಲಕ್ಷ ರೈತರಿಗೆ ೨೪ ಸಾವಿರ ಕೋಟಿ ರೂ.ಗಳ ಸಾಲ ನೀಡುವ ಯೋಜನೆಗೆ ಮುಖ್ಯ ಮಂತ್ರಿಗಳು ಈ ಸಾಲಿನ ಬಜೆಟ್‌ನಲ್ಲಿ ಘೋಷಣೆ ಹೊರಡಿಸಿರುವುದಾಗಿ ತಿಳಿಸಿದರು.

ಕೊಡಗು ಜಿಲ್ಲೆಯಲ್ಲಿ ೯ ಸಹಕಾರಿ ಸಂಘಗಳು ಶತಮಾನೋತ್ಸವ ಆಚರಿಸುತ್ತಿರುವುದು ಸಂತಸದ ವಿಷಯ ಎಂದ ಅವರು ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಭಿವೃದ್ಧಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಪ್ರಾಮಾಣಿಕ ಕೆಲಸ ಕಾರ್ಯಗಳ ಮೂಲಕ ಮಾತ್ರ ಸಾಧನೆ ಗುರಿತಲುಪಲು ಸಾಧ್ಯ ಎಂದರು. ರಾಜ್ಯದಲ್ಲಿ ಯಶಸ್ವಿನಿ ಯೋಜನೆ ಕಾರಣಾಂತರಗಳಿAದ ನಿಂತು ಹೋಗಿದ್ದು ಹಲವು ಬದಲಾವಣೆ ಗಳೊಂದಿಗೆ ಮತ್ತೆ ಮರುಜಾರಿ ಯಾಗುವುದಾಗಿ

(ಮೊದಲ ಪುಟದಿಂದ) ಸಚಿವ ಸೋಮಶೇಖರ್ ತಿಳಿಸಿದರು. ಕೊಡಗು ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಮೊದಲನೇ ಸ್ಥಾನದಲ್ಲಿ ಇದ್ದು, ಕೆ.ಪಿ. ಬಾಂಡ್ ಗಣಪತಿ ಅವರ ನೇತೃತ್ವದಲ್ಲಿ ಸಹಕಾರ ಕೇಂದ್ರ ಬ್ಯಾಂಕ್ ರೈತ ಬಾಂಧವರ ಏಳಿಗೆಗೆ ಶ್ರಮಿಸುತ್ತಿದೆ ಎಂದು ಹೇಳಿದರು.

ವಿಶ್ವಾಸಾರ್ಹತೆಯ ಸಹಕಾರಿ ತತ್ವ

ಶತಮಾನೋತ್ಸವ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಶಿಕ್ಷಣ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ಮಾತನಾಡಿ ಪುರಾತನ ಕಾಲದಿಂದ ಸಹಕಾರ ತತ್ವದ ಅಡಿಯಲ್ಲಿ ಸಮಾಜ ನಿರ್ಮಾಣಗೊಂಡಿದೆ. ಪೂರ್ವಜರು ಪಂಚಭೂತಗಳ ಸಾಕ್ಷಿ ಮತ್ತು ನಂಬಿಕೆ ಮೇಲೆ ವ್ಯಾಪಾರ ವಹಿವಾಟು ನಡೆಸುತ್ತಿದ್ದರು ಎಂದು ಹೇಳಿದರು. ವ್ಯವಹಾರದ ಹೊರತಾಗಿ ಸಹಕಾರ ತತ್ವದ ಮೂಲಕ ಸಮಾನತೆಯ ಮಾನಸಿಕತೆ ಹೊಂದುವ ಮೂಲಕ ಜೀವನ ನಡೆಸುತ್ತಿದ್ದರು. ಅಂದಿನ ಕಾಲದಲ್ಲಿ ಜಾತ್ರೆಗಳು ಕೂಡ ಸಹಕಾರ ತತ್ವದ ಮೂಲಕ ನಡೆಯುತ್ತಿತ್ತು ಎಂದ ಸಚಿವರು ಸಹಕಾರ ಸಂಘವೇ ಸಮಾಜದ ಆಧಾರ ಸ್ತಂಭವಾಗಿದ್ದು, ಕುಶಾಲನಗರದಲ್ಲಿ ತಾಲೂಕು ಮಟ್ಟದ ಸಹಕಾರಿ ಸಂಘ ತನ್ನದೇ ಆದ ಸ್ವಂತ ಭವನ ನಿರ್ಮಿಸಿರುವುದು ಸಂತಸದ ವಿಷಯ ಎಂದರು. ಕುಶಾಲನಗರ ಸಹಕಾರ ಸಂಘ ಬೆಳೆದು ಬಂದ ಹಾದಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಬಿ.ಸಿ. ನಾಗೇಶ್ ಸಹಕಾರಿಗಳ ಪ್ರಯತ್ನ ತ್ಯಾಗದ ಮೂಲಕ ಗುರಿ ಹೊಂದಲು ಸಾಧ್ಯವಾಗಿದೆ ಎಂದರು.

ಸಹಕಾರ ಧ್ವಜಾರೋಹಣ ನೆರವೇರಿಸಿದ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ ಹಿರಿಯರ ಸ್ಮರಣೆ ಮೂಲಕ ಸಹಕಾರ ಸಂಘಗಳ ಬೆಳವಣಿಗೆ ಸಾಧ್ಯ ಎಂದರು. ಅಂದಿನ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ, ದೇವೇಗೌಡ ಅವರ ಬಡ್ಡಿಮನ್ನಾ, ಸಾಲಮನ್ನಾ ಯೋಜನೆಗಳ ಮೂಲಕ ಸಂಘಗಳ ಉಳಿವು ಆಗಿರುವ ಬಗ್ಗೆ ಸ್ಮರಿಸಿದರು.

ರಾಜಕೀಯ ರಹಿತವಾಗಿ ನಿಸ್ವಾರ್ಥತೆ ಪ್ರಾಮಾಣಿಕತೆ ಇದ್ದಲ್ಲಿ ಸಹಕಾರ ಸಂಘಗಳು ಶೀಘ್ರ ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದ ರಂಜನ್, ಸಂಘದ ಅಧ್ಯಕ್ಷರಾದ ಶರವಣಕುಮಾರ್ ಮತ್ತು ಹಿರಿಯ ಸಹಕಾರಿಗಳಾದ ಎಂ.ಎನ್. ಕೊಮಾರಪ್ಪ ಅವರುಗಳ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು.

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೆ.ಪಿ. ಬಾಂಡ್ ಗಣಪತಿ ಮಾತನಾಡಿ, ಜಿಲ್ಲೆಯ ಸಹಕಾರಿ ಸಂಘಗಳ ಅಭಿವೃದ್ಧಿ ಬಗ್ಗೆ ಮಾಹಿತಿ ನೀಡಿದರು. ಜಿಲ್ಲೆಯ ಸಹಕಾರಿ ಸಂಘಗಳು ದವಸ ಭಂಡಾರಗಳು ರಾಜ್ಯಕ್ಕೆ ಮಾದರಿ ಎಂದರಲ್ಲದೇ ಕುಶಾಲನಗರ ಸಹಕಾರ ಸಂಘಕ್ಕೆ ಶುಭ ಹಾರೈಸಿದರು. ಸಂಘದಲ್ಲಿರುವ ಮುದ್ರಾಂಕ ಶುಲ್ಕ ಸಮಸ್ಯೆ ಬಗ್ಗೆ ತಿಳಿಸಿದ ಅವರು ಈ ಶುಲ್ಕವನ್ನು ಮನ್ನಾ ಮಾಡಬೇಕಿದೆ ಎಂದರು.

ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು, ನಿಸ್ವಾರ್ಥ ಸೇವೆ ಮೂಲಕ ಸಮಾಜಮುಖಿ ಕೆಲಸ ಮಾಡಿದಲ್ಲಿ ಯಶಸ್ಸು ಸಾಧ್ಯ ಎಂದರು. ಐಟಿಬಿಟಿ ಕೆಂದ್ರಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಕುಶಾಲನಗರ ಸಹಕಾರ ಸಂಘ ಬೆಳವಣಿಗೆ ಆಗುತ್ತಿರುವುದು ಶ್ಲಾಘನೀಯ ಎಂದರು.

ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಟಿ.ಆರ್. ಶರವಣಕುಮಾರ್ ಪ್ರಾಸ್ತಾವಿಕ ನುಡಿಗಳನ್ನು ಆಡಿ ಸಂಘದ ೧೦೦ ವರ್ಷಗಳ ಇತಿಹಾಸ, ಅಸ್ತಿತ್ವ ಉಳಿಸುವಲ್ಲಿ ಶ್ರಮಿಸಿದ ಮಹನೀಯರ ಬಗ್ಗೆ ಸ್ಮರಿಸಿ ತಂತ್ರಜ್ಞಾನದ ಮೂಲಕ ಸಂಘದ ಬೆಳವಣಿಗೆ ಬಗ್ಗೆ ಸುದೀರ್ಘ ಮಾಹಿತಿ ಒದಗಿಸಿದರು. ಸ್ವಂತ ಬಂಡವಾಳ ಮೂಲಕ ಲಾಭದತ್ತ ಸಹಕಾರ ಸಂಘಗಳನ್ನು ಬೆಳೆಸಲು ಸಾಧ್ಯ ಎಂದ ಅವರು ಶತಮಾನೋತ್ಸವದ ನೆನಪಿಗಾಗಿ ವಾಣಿಜ್ಯ ಸಮುಚ್ಛಯ ಭವನ ಮತ್ತು ಸಮುದಾಯ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

ಹಿರಿಯ ಸಹಕಾರಿ ಧುರೀಣರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಆರಂಭಗೊAಡಿತು. ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಸಂಘದ ಅಧ್ಯಕ್ಷ ಟಿ.ಅರ್. ಶರವಣಕುಮಾರ್ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸಂವೇದಿತ ಅವರಿಂದ ಪ್ರಾರ್ಥನೆ, ನಂಜುAಡಸ್ವಾಮಿ ಅವರಿಂದ ರೈತಗೀತೆ, ಯೋಗೇಂದ್ರ ನಾಯಕ್ ಮತ್ತು ಮಂಜುಳ ಅವರಿಂದ ನಿರೂಪಣೆ ನಡೆಯಿತು. ವಿ.ಎಸ್. ಆನಂದಕುಮಾರ್ ವಂದಿಸಿದರು.

ಸAಜೆ ಸಮಾರೋಪ ಮತ್ತು ಸಹಕಾರ ಸಂಘದ ಮಾಜಿ ಅಧ್ಯಕ್ಷ, ಉಪಾಧ್ಯಕ್ಷರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.