ಮಡಿಕೇರಿ, ಜೂ. ೨೮: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಒಂದು ವಾರದ ಅವಧಿಯಲ್ಲಿ ಮೂರನೇ ಬಾರಿಗೆ ಮತ್ತೆ ಭೂ ಕಂಪನದ ಅನುಭವವಾಗಿದ್ದು, ಜಿಲ್ಲೆಯಲ್ಲಿ ಅವ್ಯಕ್ತ ರೀತಿಯ ಆತಂಕವನ್ನು ಜನತೆ ಎದುರಿಸುವಂತಾಗಿದೆ.
ತಾ. ೨೩ ಹಾಗೂ ೨೫ ರಂದು ಕೊಡಗು - ದಕ್ಷಿಣಕನ್ನಡ, ಕೊಡಗು - ಹಾಸನ ಗಡಿ ಭಾಗದಲ್ಲಿ ಸಣ್ಣ ರೀತಿಯ ಕಂಪನ ಉಂಟಾಗಿದ್ದು, ಈ ಭಯದಿಂದ ಜನರು ದೂರಾಗುವ ಮುನ್ನವೇ ಇಂದು ಬೆಳಿಗ್ಗೆ ೭.೪೫ರ ಸುಮಾರಿಗೆ ಹಲವೆಡೆ ಮತ್ತೊಮ್ಮೆ ಕಂಪನದ ಅನುಭವವಾಗಿದೆ.ಬೆಳಿಗ್ಗೆ ೭.೪೫ರ ಸಮಯದಲ್ಲಿ ಮಡಿಕೇರಿ ತಾಲೂಕಿನ ಸುತ್ತಮುತ್ತಲ ಬಹುತೇಕ ಕಡೆಗಳಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದ ಮಾಹಿತಿಯ ಪ್ರಕಾರ ಕಂಪನದ ತೀವ್ರತೆ ೩ ಮ್ಯಾಗ್ನಿಟ್ಯೂಡ್ ಎಂದು ತಿಳಿದು ಬಂದಿದೆ. ಇದು ಕಳೆದ ಎರಡು ಬಾರಿಯ ಕಂಪನದ ಪ್ರಮಾಣಕ್ಕಿಂತ ತುಸು ಹೆಚ್ಚಾಗಿದೆ. ಮಲೆಗಾಲ ತುಸು ಬಿರುಸುಕಾಣುತ್ತಿರುವ ಸಂದರ್ಭದಲ್ಲಿಯೇ ಮರುಕಳಿಸುತ್ತಿರುವ ಈ ಘಟನೆ ಗಂಭೀರವೆನಿಸುತ್ತಿದೆ. ಇಂದು ಸಂಭವಿಸಿದ ಕಂಪನದ ಕೇಂದ್ರ ಬಿಂದು ಚೆಂಬು ಗ್ರಾಮದಿಂದ ೫.೫ ಕಿ.ಮೀ. ವಾಯುವ್ಯ ದಿಕ್ಕಿನಲ್ಲಿ ಎಂದು ಗುರುತಿಸಲಾಗಿದೆ.
೩ ಮ್ಯಾಗ್ನಿಟ್ಯೂಡ್ ತೀವ್ರತೆ
ತಾ. ೨೩ ರಂದು ೧೦ ಅಡಿ ಆಳ, ೩.೪ ಮ್ಯಾಗ್ನಿಟ್ಯೂಡ್ ತೀವ್ರತೆಯ ಭೂಕಂಪನ, ಹಾಸನದ ನಗರಹಳ್ಳಿ ಗ್ರಾಮದಲ್ಲಿ ಕೇಂದ್ರ ಬಿಂದು ಹೊಂದಿತ್ತು. ತಾ. ೨೫ ರಂದು ೧೦ ಅಡಿ ಆಳ ಹಾಗೂ ೨.೩ ಮ್ಯಾಗ್ನಿಟ್ಯೂಡ್ ತೀವ್ರತೆಯಲ್ಲಿ ಭೂಕಂಪನ ಕರಿಕೆ ಗ್ರಾಮದಲ್ಲಿ ಕೇಂದ್ರ ಬಿಂದು ಹೊಂದಿತ್ತು.
ಇAದು ಬೆಳಿಗ್ಗೆ ೭:೪೫ಕ್ಕೆ ಕೊಡಗು ಜಿಲ್ಲೆಯ ವಿವಿಧೆಡೆ ಸಂಭವಿಸಿದ ಭೂಕಂಪನದ ಕೇಂದ್ರ ಬಿಂದು ಕೊಡಗಿನ ಗಡಿ ಭಾಗವಾದ ಪೆರಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಂಬು ಗ್ರಾಮದಿಂದ ೫.೫ ಕಿ.ಮಿ ವಾಯುವ್ಯ ದಿಕ್ಕಿನತ್ತ ಎಂದು ಗುರುತಿಸಲಾಗಿದೆ. ರಿಕ್ಟರ್ ಮಾಪನದಲ್ಲಿ ೩ ಮ್ಯಾಗ್ನಿಟ್ಯೂಡ್ ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ ಎಂದು ಬೆಂಗಳೂರಿನ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಅಧಿಕೃತ ಮಾಹಿತಿ ನೀಡಿದೆ.
೧೫ ಕಿ.ಮೀ ಆಳ
ಚೆಂಬುವಿನಿAದ ೫.೫ ಕಿ.ಮೀ ವಾಯುವ್ಯ ದಿಕ್ಕಿನಲ್ಲಿ ಲ್ಯಾಟಿಟ್ಯೂಡ್ - ೧೨.೪೯೨೮ ಡಿಗ್ರಿ ಉತ್ತರ, ಲಾಂಗಿಟ್ಯೂಡ್ - ೭೫.೪೬೧೦ ಡಿಗ್ರಿ ಪೂರ್ವದಲ್ಲಿ ಭೂಮಿಯ ೧೫ ಕಿ.ಮೀ ಆಳದಲ್ಲಿ ಬೆಳಿಗ್ಗೆ ೭:೪೫ ಗಂಟೆಗೆ ಸರಿಯಾಗಿ ಭೂಮಿ ಕಂಪಿಸಿದೆ. ಈ ಕೇಂದ್ರಬಿAದುವಿನಿAದ ಸುಮಾರು ೪೦ ರಿಂದ ೫೦ ಕಿ.ಮೀ ನಷ್ಟು ಸುತ್ತಳತೆಯಲ್ಲಿ ಭೂಕಂಪನದ ಅನುಭವವಾಗಿದೆ. ಚೆಂಬು ಗ್ರಾಮದಲ್ಲಿನ ಕೇಂದ್ರ ಬಿಂದು ‘ಸೀಸ್ಮಿಕ್ ಝೋನ್’-೩ ನಲ್ಲಿದ್ದು ತೀವ್ರ ತರಹದ ಹಾನಿ ರಹಿತ ಪ್ರದೇಶವಾಗಿದೆ ಎಂದು ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.
(ಮೊದಲ ಪುಟದಿಂದ)
ಅಧಿಕಾರಿಗಳ ಭೇಟಿ
ಅಧಿಕಾರಿಗಳ ತಂಡ ಚೆಂಬು ಹಾಗೂ ಕರಿಕೆ ಗ್ರಾಮಗಳಿಗೆ ಭೇಟಿ ನೀಡಿ ಜನರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಭೂಕಂಪನದ ಅನುಭವದ ಬಗ್ಗೆ ಜನರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಉಪವಿಭಾಗಾಧಿಕಾರಿ ನಂಜುAಡೇಗೌಡ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ವಿಜ್ಞಾನಿ ಶ್ರೀನಿವಾಸ್, ವಿಪತ್ತು ನಿರ್ವಹಣಾ ಅಧಿಕಾರಿ ಅನನ್ಯ ವಾಸುದೇವ್, ಭೂವಿಜ್ಞಾನಿ ಲಾಯಲ್, ಉಪತಹಶೀಲ್ದಾರ್ ದೊರೆ ಸೇರಿದಂತೆ ಇನ್ನಿತರರು ಹಾಜರಿದ್ದರು.
ಮೂಡಿದೆ ಆತಂಕ
ಲಘು ಭೂಕಂಪನ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಜಿಲ್ಲಾಡಳಿತ, ಜನಪ್ರತಿನಿಧಿಗಳು ಆತಂಕ ಬೇಡ ಎಂದು ಹೇಳುತ್ತಾರೆ. ಆದರೆ, ಪದೇ ಪದೇ ಈ ರೀತಿಯ ಸನ್ನಿವೇಶ ಸಂಭವಿಸುತ್ತಿರುವುದು ವಿಕೋಪದ ಮುನ್ಸೂಚನೆಯೇ ಎಂಬ ಪ್ರಶ್ನೆ ಜನರಲ್ಲಿ ಉದ್ಭವಿಸಿದೆ.
೨೦೧೮ ಜುಲೈ ೧೦ ರಂದು ಇದೇ ರೀತಿಯ ಘಟನಾವಳಿ ನಡೆದು ಆಗಸ್ಟ್ನಲ್ಲಿ ಯಾರೂ ಊಹಿಸಲಾಗದಂತಹ ನೈಸರ್ಗಿಕ ವಿಕೋಪ ಸೃಷ್ಟಿಯಾಗಿ ಸಾವು-ನೋವು ಸಂಭವಿಸಿತ್ತು. ಈ ಬಾರಿಯೂ ಕಂಪನದ ಅನುಭವವಾಗಿರುವುದು ಲಘುವಾಗಿ ತೆಗೆದುಕೊಳ್ಳುವಂತಿಲ್ಲ. ಈ ಬಗ್ಗೆ ಸೂಕ್ತ ಅಧ್ಯಯನ ನಡೆಸಬೇಕು ಎಂದು ಜನರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಮಳೆಗಾಲದ ನಡುವೆ ಜಿಲ್ಲೆಯಲ್ಲಿ ಈ ರೀತಿ ಘಟನೆ ಸಂಭವಿಸಿದರು ಸರಕಾರ ಗಂಭೀರವಾಗಿ ಪರಿಗಣಿಸದಿರುವುದರ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ. ವಿಜ್ಞಾನಿಗಳ ತಂಡ ಕೂಡ ಆಗಮಿಸದಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಭೂಮಿ ನಡುಗಲು ನಿಖರ ಕಾರಣ ತಿಳಿದು ಬರಲು ವಿಜ್ಞಾನಿಗಳು ಆಗಮಿಸಬೇಕಾಗಿದೆ. ದುರಂತ ನಡೆದ ಮೇಲೆ ವಿಜ್ಞಾನಿಗಳು ಆಗಮಿಸಿ ಅಧ್ಯಯನ ನಡೆಸುವುದರಲ್ಲಿ ಅರ್ಥವಿಲ್ಲ. ವಿಕೋಪವನ್ನು ತಡೆಯಲು ಯಾರಿಂದಲು ಸಾಧ್ಯವಿಲ್ಲ. ಆದರೆ, ಸಾವು-ನೋವು ತಡೆಯಲು ಅಧ್ಯಯನ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯಗಳು ಜನರಿಂದ ಕೇಳಿ ಬಂದಿವೆ.
ವಿಕೋಪದ ಜಾಗದಲ್ಲಿ ಭೂಕಂಪನ
ಈ ಹಿಂದೆ ವಿಕೋಪ ಸಂಭವಿಸಿದ ಮಕ್ಕಂದೂರು, ಮುಕ್ಕೋಡ್ಲು, ಆವಂಡಿ, ಮದೆ, ಜೋಡುಪಾಲ, ೨ನೇ ಮೊಣ್ಣಂಗೇರಿ, ತೋರ, ಭಾಗಮಂಡಲ ವ್ಯಾಪ್ತಿ, ದೇವಸ್ತೂರು, ಸಂಪಾಜೆ, ವಣಚಲು ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ. ೨೦೧೮-೧೯ರಲ್ಲಿ ಈ ಭಾಗದಲ್ಲಿ ದೊಡ್ಡ ಮಟ್ಟದ ನೈಸರ್ಗಿಕ ವಿಕೋಪ ಸಂಭವಿಸಿತ್ತು. ಇದೀಗ ಮತ್ತೇ ಈ ಭಾಗಗಳಲ್ಲಿ ಭೂಮಿ ಅಲುಗಾಡಿರುವುದು ಜನರಲ್ಲಿ ನಡುಕ ಹುಟ್ಟಿಸಿದೆ.
೨೦೧೭ ಹಾಗೂ ೨೦೧೮ರಲ್ಲೂ ಭೂಕಂಪನ
೨೦೧೭ ಹಾಗೂ ೨೦೧೮ ರಂದು ಜಿಲ್ಲೆಯ ವಿವಿಧೆಡೆ ಭೂಕಂಪನ ಸಂಭವಿಸಿತ್ತು. ೨೦೧೮ ಜುಲೈ ೯ ರಂದು ಕೂಡ ೩.೪ ಮ್ಯಾಗ್ನಿಟ್ಯೂಡ್ ತೀವ್ರತೆಯಲ್ಲಿ ಕೆಲ ಕ್ಷಣ ಭೂ ಕಂಪಿಸಿದ ಅನುಭವವಾಗಿತ್ತು. ಬಳಿಕ ಆಗಸ್ಟ್ನಲ್ಲಿ ಹಿಂದೆAದೂ ಕಾಣದ ಮಹಾಮಳೆ, ಪ್ರಾಕೃತಿಕ ವಿಕೋಪ ನಡೆದು ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿತ್ತು.
೨೦೧೮ರಲ್ಲಿ ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ, ಸುಂಟಿಕೊಪ್ಪ, ಕುಶಾಲನಗರ, ಕೂಡಿಗೆ, ಮಕ್ಕಂದೂರು, ಕುಂಬೂರು, ಕರ್ಕಳ್ಳಿ, ಮದೆನಾಡು, ಹರದೂರು, ಗರಗಂದೂರು, ಕೊಡಗರಹಳ್ಳಿ, ಗದ್ದೆಹಳ್ಳ, ಮಾದಾಪುರ, ಐಗೂರು, ಹೊಸತೋಟ, ರಂಗಸಮುದ್ರ, ಕೆದಕಲ್ ಮಲ್ಲೇನಹಳ್ಳಿ, ಮುಕ್ಕೋಡ್ಲು ಹಾಗೂ ಸುಬ್ರಹ್ಮಣ್ಯ-ಕೊಡಗು ಗಡಿ ಪ್ರದೇಶವಾದ ಕಡಮಕಾರ್, ಸುಟ್ಟತ್ಮಲೆ, ಬಾಳುಗೋಡು ಹಾಗೂ ಕಡಮಕಲ್ ಪ್ರದೇಶಗಳಲ್ಲಿ ಸುಮಾರು ೩ ಸೆಕೆಂಡ್ಗಳ ಕಾಲ ಭೂಮಿ ಕಂಪಿಸಿದ ಅನುಭವ ಆಗಿತ್ತು. ಪರಿಣಾಮ ಪಾತ್ರೆ-ಪಗಡೆ ಸೇರಿದಂತೆ ವಸ್ತುಗಳು ಬಿದ್ದ ಹಾಗೂ ಅಲುಗಾಡಿದ ಘಟನೆಯೂ ವರದಿಯಾಗಿತ್ತು.
ಅಧ್ಯಯನದ ನಂತರ ನಿಖರ ಕಾರಣ - ವಿಜ್ಞಾನಿ
ಅಧ್ಯಯನದ ನಂತರವಷ್ಟೆ ಭೂಕಂಪನಕ್ಕೆ ನಿಖರ ಕಾರಣವನ್ನು ಹೇಳಬಹುದಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿಯೊಬ್ಬರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.
೨೦೧೮ರಲ್ಲಿಯೂ ಜಿಲ್ಲೆಯಲ್ಲಿ ಭೂಕಂಪನ ಸಂಭವಿಸಿತ್ತು. ಇದೀಗ ವಾರದ ಅಂತರದಲ್ಲಿ ಮೂರು ಬಾರಿ ಭೂಕಂಪಿಸಿರುವುದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪ್ರಾಥಮಿಕವಾಗಿ ‘ರಾಕ್ ಸ್ಲಿಪ್’ ಅಥವಾ ಮಣ್ಣಿನ ಜಾರುವಿಕೆಯಿಂದ ಭೂಕಂಪನ ಸಂಭವಿಸಿರುವ ಸಾಧ್ಯತೆ ಇದೆ. ಕಳೆದ ಕೆಲವು ವರ್ಷಗಳ ಭಾರೀ ಮಳೆಯಿಂದ ಮಣ್ಣಿನ ಸತ್ವ (ಬಾಂಡಿAಗ್ ಕೆಪಾಸಿಟಿ) ಕಡಿಮೆಯಾಗಿರಬಹುದು ಎಂದು ಅಂದಾಜಿಸಿದ್ದು, ಭೂಕಂಪನ ತೀವ್ರತೆ ಈ ಬಾರಿ ಹೆಚ್ಚಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
-ವರದಿ : ಹೆಚ್.ಜೆ. ರಾಕೇಶ್, ದುಗ್ಗಳ ಸದಾನಂದ, ಸುಧೀರ್, ಸುನಿಲ್, ಉಷಾ, ಅಶ್ರಫ್, ಕಿರಣ್, ಇಬ್ರಾಹಿಂ