ಸೋಮವಾರಪೇಟೆ, ಜೂ.೨೭: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಚನ್ನಬಸಪ್ಪ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಎಚ್.ಕೆ. ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘ ಯಶಸ್ವಿಯಾಗಿ ೧೦೩ ವರ್ಷ ಪೂರೈಸಿದ್ದು, ಸದಸ್ಯರ ಅನುಕೂಲಕ್ಕಾಗಿ ಶ್ರಮಿಸುತ್ತಿದೆ. ಸದಸ್ಯರ ಅನುಕೂಲಕ್ಕಾಗಿ ಕೃಷಿ ಸಾಲದೊಂದಿಗೆ, ಮನೆ ನಿರ್ಮಾಣ, ವಾಹನ ಖರೀದಿ, ವಿದ್ಯಾರ್ಥಿಗಳು ಲ್ಯಾಪ್‌ಟಾಪ್ ಖರೀದಿ, ಚಿನ್ನ ಖರೀದಿ ಸೇರಿದಂತೆ ಹಲವು ರೀತಿಯ ಸಾಲಗಳನ್ನು ನೀಡಲಾಗುತ್ತಿದೆ. ಸಂಘದ ವತಿಯಿಂದ ಸೋಮವಾರಪೇಟೆ ಮತ್ತು ಬಳಗುಂದದಲ್ಲಿ ೯೦೦ ಮೆಟ್ರಿಕ್ ಸಾಮರ್ಥ್ಯದ ಗೋದಾಮುಗಳನ್ನು ನಿರ್ಮಿಸಿ ರಸಗೊಬ್ಬರ ಸಕಾಲದಲ್ಲಿ ನೀಡಲಾಗುತ್ತಿದೆ ಎಂದರು.

ಸಂಘದ ಒಟ್ಟು ದುಡಿಯುವ ಬಂಡವಾಳ ೬೬.೪೪ ಕೋಟಿಯಾಗಿದ್ದು, ೨೦೨೨ರ ಮಾರ್ಚ್ ೩೧ಕ್ಕೆ ಸಂಘದ ಒಟ್ಟು ವ್ಯವಹಾರ ೩೪೧.೮೨ ಕೋಟಿಯಾಗಿರುತ್ತದೆ. ೨೦೨೧-೨೨ನೇ ಸಾಲಿಗೆ ಸಂಘವು ೧೨೧ ಲಕ್ಷ ಲಾಭ ಗಳಿಸಿದೆ ಎಂದು ತಿಳಿಸಿದರು.

ಸಂಘದಲ್ಲಿ ರೂ. ೨೫೦೦೦ ಮರಣನಿಧಿ ಯೋಜನೆಯು ಜಾರಿಯಲ್ಲಿದ್ದು, ೨೦೨೧-೨೨ನೇ ಸಾಲಿನಲ್ಲಿ ರೂ. ೮,೭೧,೪೧೮ ಮರಣ ನಿಧಿ ವಿತರಿಸಲಾಗಿದೆ. ಜಾಮೀನು ಸಾಲ ಮತ್ತು ಪಿಗ್ಮಿ ಓವರ್‌ಡ್ರಾಫ್ಟ್ಟ್ ಸಾಲಗಳಿಗೆ ವಿಮಾ ಸೌಲಭ್ಯ ಇದ್ದು, ಒಬ್ಬ ಸದಸ್ಯರ ಎಲ್ಲಾ ಸಾಲದ ಗರಿಷ್ಠ ಮಿತಿಯನ್ನು ರೂ. ೪೦ ಲಕ್ಷಗಳಿಂದ ೬೦ ಲಕ್ಷಗಳಿಗೆ ಹೆಚ್ಚಳ ಮಾಡಲಾಗಿದೆ ಎಂದರು.

೨೦೨೧-೨೨ನೇ ಸಾಲಿಗೆ ಸದಸ್ಯರುಗಳಿಗೆ ಶೇಕಡ ೨೨% ಡಿವಿಡೆಂಟ್ ನೀಡಲಾಗುವುದು ಎಂದು ಹೇಳಿದರು. ಇದೇ ಸಂದರ್ಭ ೭, ೧೦ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಎಂ. ಈಶ್ವರ್, ನಿರ್ದೇಶಕರುಗಳಾದ ಜಿ.ಬಿ. ಸೋಮಯ್ಯ, ಪಿ.ಡಿ. ಮೋಹನ್ ದಾಸ್, ಬಿ.ಎಂ. ಸುರೇಶ್, ಹೆಚ್.ಕೆ. ಚಂದ್ರಶೇಖರ್, ಬಿ.ಡಿ. ಮಂಜುನಾಥ್, ರೂಪಾ ಸತೀಶ್, ಪಿ.ಎ. ಅನಿತ ಆನಂದ್, ಬಿ. ಶಿವಪ್ಪ, ಕೆ.ಕೆ. ಚಂದ್ರಿಕಾ, ಎಂ.ವಿ. ದೇವರಾಜ್, ಬಿ.ಪಿ. ದಿವಾನ್, ಕಾರ್ಯನಿರ್ವಹಣಾಧಿಕಾರಿ ಹೆಚ್.ಪಿ. ರವೀಂದ್ರ ಉಪಸ್ಥಿತರಿದ್ದರು.