ಕುಶಾಲನಗರ, ಜೂ. ೨೭: ಕುಶಾಲನಗರ ಪಟ್ಟಣ ಪಂಚಾಯಿತಿ ವಾಣಿಜ್ಯ ಸಂಕೀರ್ಣದ ಪ್ರಥಮ ಹಂತದ ಕಚೇರಿ ಕಟ್ಟಡದ ಕಾಮಗಾರಿ ಆರು ತಿಂಗಳ ಒಳಗಾಗಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಹೇಳಿದರು.
ಕಟ್ಟಡದ ಮುಂದುವರೆದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಥಮ ಹಂತದ ಕಾಮಗಾರಿ ಮುಗಿದಿದ್ದು, ಇದೀಗ ರೂ. ೨.೮೭ ಕೋಟಿ ವೆಚ್ಚದಲ್ಲಿ ಉಳಿದ ಕಾಮಗಾರಿ ಮತ್ತೆ ಪ್ರಾರಂಭವಾಗುತ್ತದೆ. ಪಟ್ಟಣ ಪಂಚಾಯಿತಿ ಅನುದಾನದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಒಟ್ಟು ರೂ. ೪.೭೫ ಕೋಟಿ ವೆಚ್ಚದ ಪಂಚಾಯಿತಿ ವಾಣಿಜ್ಯ ಸಂಕೀರ್ಣದ ಕಾಮಗಾರಿ ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿದ್ದು ಅನುದಾನದ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಮುಂದುವರಿದ ಕಾಮಗಾರಿ ಪ್ರಾರಂಭದ ಸಂದರ್ಭ ವಿಶೇಷ ಪೂಜೆ ಹೋಮ ನಡೆಸಲಾಯಿತು. ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಉಪಾಧ್ಯಕ್ಷೆ ಸುರಯ್ಯ ಬಾನು, ಸದಸ್ಯರು ಅಧಿಕಾರಿಗಳು ಇದ್ದರು.