ಮಡಿಕೇರಿ, ಜೂ. ೨೬: ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಅವರು ಅರ್ಹ ವಿಶೇಷಚೇತನರಿಗೆ ವಾಹನವನ್ನು ತಮ್ಮ ಕಚೇರಿ ಆವರಣದಲ್ಲಿ ವಾಹನದ ಕೀ ನೀಡುವ ಮೂಲಕ ವಿತರಿಸಿದರು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದ ಬಳಿಯಿರುವ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ ಅವರ ಕಚೇರಿಯಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅರ್ಹ ಇಬ್ಬರು ವಿಶೇಷಚೇತನರಿಗೆ ವಾಹನ ಕೀ ನೀಡುವ ಮೂಲಕ ವಿತರಿಸಿದರು. ಎಂ.ಪಿ. ಅಪ್ಪಚ್ಚು ರಂಜನ್ ಅವರು ಜಿ.ಪಂ.ಕಚೇರಿ ಆವರಣದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅರ್ಹ ೧೦ ಮಂದಿ ಫಲಾನುಭವಿಗಳಿಗೆ ವಾಹನದ ಕೀ ನೀಡುವ ಮೂಲಕ ವಿತರಿಸಿದರು. ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಪ್ರತಿಯೊಬ್ಬರೂ ಸ್ವಾವಲಂಬಿ ಹಾಗೂ ಸ್ವಾಭಿಮಾನಿಯಾಗಿ ಬದುಕಬೇಕು. ಆ ನಿಟ್ಟಿನಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಕೆಲವರು ಹುಟ್ಟಿನಿಂದ ಅಥವಾ ಅಪಘಾತದಿಂದ ವೈಫಲ್ಯ ಹೊಂದುತ್ತಾರೆ. ಇಂತಹ ವ್ಯಕ್ತಿಗೆ ಸ್ಫೂರ್ತಿ ತುಂಬುವ ನಿಟ್ಟಿನಲ್ಲಿ ಸರ್ಕಾರ ವಾಹನ ನೀಡುವುದರ ಜೊತೆಗೆ ಮಾಸಿಕ ವೇತನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಕಲ್ಪಿಸುತ್ತಿದೆ. ಆ ನಿಟ್ಟಿನಲ್ಲಿ ವಿಶೇಷಚೇತನರು ಆರ್ಥಿಕ ಪರಿಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳುವತ್ತ ಗಮನಹರಿಸಬೇಕು ಎಂದರು.
ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖಾಧಿಕಾರಿ ವಿಮಲ ಮಾಹಿತಿ ನೀಡಿ ವಿಶೇಷಚೇತನರಿಗೆ ಗುರುತಿನ ಚೀಟಿ, ವಿಶೇಷ ಶಾಲೆಗಳು, ಶಿಷ್ಯವೇತನ, ಉನ್ನತ ಹಾಗೂ ತಾಂತ್ರಿಕ ಶಿಕ್ಷಣಕ್ಕೆ ಶುಲ್ಕ ಮರುಪಾವತಿ, ಸಾಧನ ಸಲಕರಣೆಗಳ ವಿತರಣೆ, ವೈದ್ಯಕೀಯ ಪರಿಹಾರ ನಿಧಿ, ಆರೋಗ್ಯ ವಿಮೆ, ಪುನರ್ ವಸತಿ ಕಲ್ಪಿಸಲಾಗುತ್ತದೆ ಎಂದರು. ಹಾಗೆಯೇ ಬಸ್ ಮತ್ತು ರೈಲ್ವೆ ಪಾಸ್, ಮಾಸಾಶನ, ಹಾಗೂ ಪೋಷಣಾ ಭತ್ಯೆ, ಶಿಶು ಪಾಲನಾ ಭತ್ಯೆ, ವಿಶೇಷಚೇತನರನ್ನು ಮದುವೆ ಯಾಗುವ ಸಾಮಾನ್ಯ ವ್ಯಕ್ತಿಗಳಿಗೆ ಪ್ರೋತ್ಸಾಹಧನ, ವಿಮೆ, ಕೌಶಲ್ಯ ತರಬೇತಿ ಮತ್ತು ಉದ್ಯೋಗ, ಸಾಧನೆ ಮತ್ತು ಪ್ರತಿಭೆಗೆ ಪ್ರೋತ್ಸಾಹ, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ಟಾಪ್, ದೈಹಿಕ ವಿಶೇಷಚೇತನರಿಗೆ ದ್ವಿಚಕ್ರ ವಾಹನ ವಿತರಣೆ, ನಿರುದ್ಯೋಗ ಭತ್ಯೆ, ಹೀಗೆ ಹಲವು ಕಾರ್ಯಕ್ರಮಗಳು ಇವೆ. ಕೊಡಗು ಜಿಲ್ಲೆಯಲ್ಲಿ ೪೩೨೫ ವಿಶೇಷಚೇತನರಿಗೆ ಗುರುತಿನ ಚೀಟಿ ನೀಡಲಾಗಿದೆ ಎಂದು ತಿಳಿಸಿದರು. ಇಲಾಖೆಯ ವ್ಯವಸ್ಥಾಪಕ ರಾಜ್ಕುಮಾರ್ ಇತರರು ಇದ್ದರು.