ಚೆಟ್ಟಳ್ಳಿ, ಜೂ. ೨೬: ಇತ್ತೀಚಿನ ದಿನಗಳಲ್ಲಿ ಯುವಜನತೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಯುವಜನತೆಯನ್ನು ದುಶ್ಚಟಗಳಿಂದ ದೂರವಿಡಲು ಗ್ರಾಮೀಣ ಕ್ರೀಡಾಕೂಟಗಳ ಆಯೋಜನೆ, ಸಹಕಾರಿಯಾಗಲಿದೆ ಎಂದು ಹೈಕೋರ್ಟ್ ಹಿರಿಯ ವಕೀಲ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೊನ್ನಣ್ಣ ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯಿತಿ, ನೆಹರು ಯುವ ಕೇಂದ್ರ, ಯೋಜನಾ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಿಲ್ಲಾ, ತಾಲೂಕು ಯುವ ಒಕ್ಕೂಟ, ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಗೋಣಿಕೊಪ್ಪಲಿನ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ನಡೆದ ರಾಷ್ಟçಮಟ್ಟದ ಸೆವೆನ್ಸ್ ಫುಟ್ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯುವಜನಾಂಗ ಕೆಟ್ಟ ಹವ್ಯಾಸಗಳಿಗೆ ಬಲಿಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.
ಗೋಣಿಕೊಪ್ಪ ಸಬ್ ಇನ್ಸ್ಪೆಕ್ಟರ್ ಎಸ್. ಸುಬ್ಬಯ್ಯ ಮಾತನಾಡಿ, ಕ್ರೀಡಾಪಟುಗಳು ಜಾತ್ಯತೀತವಾಗಿ ನಡೆಯಬೇಕು. ಕ್ರೀಡೆಗಳು ಎಲ್ಲಾ ಜಾತಿ, ಧರ್ಮವನ್ನು ಒಂದುಗೂಡಿಸಿ ಒಗ್ಗಟ್ಟು ಪ್ರದರ್ಶಿಸುವ ವೇದಿಕೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಆಲ್ ಸ್ಟಾರ್ ಯೂತ್ ಕ್ಲಬ್ ಅಧ್ಯಕ್ಷ ಬಿ.ಎನ್ ಸುಧಾಕರ್ ರೈ (ಚುಮ್ಮಿ ರೈ) ಆಲ್ ಸ್ಟಾರ್ ಯೂತ್ ಕ್ಲಬ್ ಸದಸ್ಯರ ಹಗಲಿರುಳು ದುಡಿಮೆಯ ಫಲವಾಗಿ, ರಾಷ್ಟçಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲು ಸಾಧ್ಯವಾಗಿದೆ ಎಂದರು.
ಹಿರಿಯ ದೈಹಿಕ ಶಿಕ್ಷಕ ಗಾಡ್ಫ್ರೆಡ್, ಕ್ಯಾಪ್ಟನ್ಸ್ ೧೧ ಪಾಲಿಬೆಟ್ಟ ಇದರ ಗೌರವಾಧ್ಯಕ್ಷ ಟಿ.ಜೆ. ವಿಜೇಶ್, ಗೋಣಿಕೊಪ್ಪಲಿನ ಸಮಾಜ ಸೇವಕ ಮಂಜು ರೈ, ಕ್ರೀಡಾಭಿಮಾನಿ ಅಶ್ರಫ್ ಪಿ. ಗೋಣಿಕೊಪ್ಪ ಹಾಗೂ ಪಿ.ಕೆ. ಸುಧಾಕರ್ ಅಮ್ಮತ್ತಿ ಒಂಟಿಯAಗಡಿ ಇವರನ್ನು ಆಲ್ ಸ್ಟಾರ್ ಯೂತ್ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ, ಗೋಣಿಕೊಪ್ಪ ನಗರ ಕಾಂಗ್ರೆಸ್ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಪಿ.ಎಂ. ಸ್ಟೋರ್ ಮಾಲೀಕ ಸಲೀಮ್, ಗ್ರಾಮ ಪಂಚಾಯಿತಿ ಸದಸ್ಯ ಎ. ಶರತ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೇಶವ ಕಾಮತ್, ಕಡೇಮಡ ಕುಸುಮಾ ಜೋಯಪ್ಪ, ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ ಎಂ. ಹಾಗೂ ಶೀಲಾ ಬೋಪಣ್ಣ ಇದ್ದರು.