ವೀರಾಜಪೇಟೆ, ಜೂ. ೨೬: ನಗರದ ನಿವಾಸಿಗಳಿಗೆ ಕುಡಿಯುವ ನೀರಿಗಾಗಿ ಎಪ್ಪತ್ತು ವರ್ಷಗಳ ಹಿಂದೆಯೇ ಪಟ್ಟಣ ಪಂಚಾಯಿತಿ ವತಿಯಿಂದ ಕಾರು ನಿಲ್ದಾಣ, ಖಾಸಗಿ ಬಸ್ ನಿಲ್ದಾಣ. ಗೌರಿಕೆರೆ ಮದರಸ, ಬಸವೇಶ್ವರ ದೇವಾಲಯ ಮುಂಭಾಗ, ಸುಂಕದ ಕಟ್ಟೆ, ಶಾಂತ ಚಿತ್ರ ಮಂದಿರ, ಅಪ್ಪಯ್ಯ ಸ್ವಾಮಿ ರಸ್ತೆ, ಚಿಕ್ಕಪೇಟೆ ಸೇರಿದಂತೆ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಬಾವಿಗಳನ್ನು ನಿರ್ಮಿಸಲಾಗಿದೆ. ಪಟ್ಟಣ ಪಂಚಾಯಿತಿಯ ಎರಡನೇ ವಾರ್ಡಿನಲ್ಲಿದ್ದ ಸುಮಾರು ಐವತ್ತು ವರ್ಷಗಳ ಕಾಲ ಸಾರ್ವಜನಿಕ ಬಳಕೆಗೆ ನೀರು ಉಪಯೋಗಿಸಿದ ಬಾವಿಯನ್ನು ಇತ್ತೀಚೆಗೆ ಖಾಸಗಿ ವ್ಯಕ್ತಿಯೊಬ್ಬರು ಮನೆ ಕಟ್ಟುವ ನೆಪದಲ್ಲಿ ಕಬ್ಬಿಣದ ಮೆಶ್ನಿಂದ ಬಂಧಿಸಿ, ಸಾರ್ವಜನಿಕ ಉಪಯೋಗಕ್ಕೆ ಸಿಗದ ಹಾಗೆ ಮಾಡಿದ್ದಾರೆ. ವೀರಾಜಪೇಟೆಯ ದೇವಾಂಗರ ಬೀದಿಯ ಜೇನು ಸೊಸೈಟಿ ಬಳಿ ನೂತನವಾಗಿ ಮನೆ ನಿರ್ಮಿಸಿರುವ ಕಟ್ಟಡದ ಮಾಲೀಕರು ಸಾರ್ವಜನಿಕರ ಉಪಯೋಗಕ್ಕೆ ಬಾವಿ ಸಿಗದಂತೆ ಬಾವಿಯ ಕಟ್ಟೆಯನ್ನು ಒಡೆದು ಹಾಕಿ, ಅದರ ಸುತ್ತ ಕಬ್ಬಿಣದ ಮೆಶ್ನಿಂದ ಬಾವಿಯನ್ನು ಮುಚ್ಚಿಹಾಕಿದ್ದಾರೆ.
ಆದರೆ ಈ ಸಮಸ್ಯೆಯನ್ನು ವಾರ್ಡ್ನ ಜನತೆ ತಮ್ಮ ವಾರ್ಡ್ನ ಸದಸ್ಯ ರಂಜಿ ಪೂಣಚ್ಚ ಅವರ ಗಮನಕ್ಕೆ ತಂದಿದ್ದಾರೆ. ಅವರು ಈ ವಿಚಾರವನ್ನು ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಮುಖ್ಯ ಅಧಿಕಾರಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ಕಟ್ಟಡದ ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಿದ್ದಾರೆ. ಇಷ್ಟೆಲ್ಲಾ ಆದರೂ ಆ ಕಟ್ಟಡದ ಮಾಲೀಕರು ಹಾಗೂ ಕಟ್ಟಡದ ಗುತ್ತಿಗೆದಾರ ಬಾವಿಯನ್ನು ಸರಿಪಡಿಸಲಿಲ್ಲ. ಬದಲಾಗಿ ಮುಂದೆ ಮೂರು ಕಬ್ಬಿಣದ ಕಂಬಗಳನ್ನು ಹಾಕಿ ಗೇಟ್ನ ವ್ಯವಸ್ಥೆ ಮಾಡಿದ್ದಾರೆ.
ಅಧಿಕಾರಿ ವರ್ಗದವರು ಈ ಪಟ್ಟಣ ಪಂಚಾಯಿತಿಗೆ ಸೇರಿದ ಸಾರ್ವಜನಿಕ ಬಾವಿಯನ್ನು ಸಾರ್ವಜನಿಕರ ಉಪಯೋಗಕ್ಕೆ ಮರಳಿಕೊಡಿಸಿ ಸಾರ್ವಜನಿಕರಿಗೆ ಉಪಯೋಗಕ್ಕೆ ಬರುವಂತೆ ಮಾಡಬೇಕು ಎನ್ನುವುದು ಈ ನೀರನ್ನು ಬಳಕೆ ಮಾಡುವ ಎರಡನೇ ವಾರ್ಡ್ನ ಜನರ ಆಗ್ರಹ. - ಉಷಾಪ್ರೀತಮ್