ಕಡಂಗ, ಜೂ. ೨೬: ಸಮೀಪದ ಎಡಪಾಲ ಗ್ರಾಮದ ಸರ್ಕಾರಿ ಶಾಲೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು

ಕಟ್ಟಡ ಉದ್ಘಾಟನೆಯನ್ನು ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಅಚ್ಚಯ್ಯ ನೆರವೇರಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕಿ ವೀಣಾ ಅಚ್ಚಯ್ಯ ಅವರು ವಿದ್ಯಾರ್ಥಿಗಳು ತಮ್ಮ ಶಿಕ್ಷಣದಿಂದ ಮಾತ್ರ ಸಮಾಜದ ಎಲ್ಲಾ ಘಟಕದಲ್ಲೂ ಯಶಸ್ವಿಯಾಗಲು ಸಹಾಯವಾಗುತ್ತದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಇ. ಮಹಮ್ಮದ್ ಕುಪ್ಪೋಡಂಡ, ಎಡಪಾಲ ಜಮಾಅತ್ ಅಧ್ಯಕ್ಷ ಕೆ.ಯು. ಶಾಫಿ, ಶಾಲಾಭಿವೃದ್ಧಿ ಅಧ್ಯಕ್ಷ ಎ.ಎಂ. ಅಬ್ದುಲ್ಲಾ, ರಾಜ್ಯ ಪ್ರಶಸ್ತಿ ವಿಜೇತ ಮುಖ್ಯ ಶಿಕ್ಷಕ ಉಮ್ಮರ್ ಮಾಸ್ಟರ್, ಉಮಾ ಪ್ರಭು, ಉಮ್ಮರ್ ಸಿಆರ್‌ಪಿ ಇನ್ನು ಹಲವು ಹಾಲಿ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.