ಸೋಮವಾರಪೇಟೆ, ಜೂ. ೨೬: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಗೌಡಳ್ಳಿ ಪ್ರೌಢಶಾಲೆಯಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ ನಡೆಯಿತು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಇಂದೂಧರ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ, ಮಳೆಯಿಂದ ಸೊಳ್ಳೆಗಳು ಹೆಚ್ಚುತ್ತಿವೆ. ಅವುಗಳನ್ನು ನಿಯಂತ್ರಿಸುವ ಮೂಲಕ ಮಲೇರಿಯಾ ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಧೂಮೀಕರಣ, ಔಷಧ ಸಿಂಪಡಣೆ ಮುಂತಾದ ಪ್ರಯೋಗಗಳಿಂದ ಸೊಳ್ಳೆಗಳ ಪರಿಣಾಮಕಾರಿ ನಿಯಂತ್ರಣ ಸಾಧ್ಯವಿಲ್ಲ. ಚರಂಡಿಗಳಲ್ಲಿ ಹಾಗೂ ಮನೆಯ ಸುತ್ತ ಎಲ್ಲೆಂದರಲ್ಲಿ ನೀರು ನಿಲ್ಲುವುದನ್ನು ತಪ್ಪಿಸುವ ಮೂಲಕ ಅವುಗಳಿಗೆ ವಾಸಸ್ಥಾನಗಳಿಲ್ಲದಂತೆ ಮಾಡಬೇಕು. ಗಪ್ಪಿ ಮತ್ತು ಗಾಂಬೂಸಿಯಾ ಮೀನುಗಳನ್ನು ಕೆರೆ, ಕಟ್ಟೆಗಳಲ್ಲಿ ಬಿಡುವ ಮೂಲಕ ನೀರಿನಲ್ಲಿ ಮೊಟ್ಟೆ ಇಡುವ ಸೊಳ್ಳೆಗಳನ್ನು ನಿಯಂತ್ರಿಸಬಹುದು ಎಂದರು.

೧೯ ಸರ್ಕಾರಿ ಶಾಲೆಯ ಶಿಕ್ಷಕ ಮತ್ತು ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಲೇರಿಯ ರೋಗದ ಬಗ್ಗೆ ಮಾಹಿತಿ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ನಾಗೇಂದ್ರ ಉಪಸ್ಥಿತರಿದ್ದರು.