ಗೋಣಿಕೊಪ್ಪಲು, ಜೂ. ೨೫: ಹಲವು ವರ್ಷಗಳಿಂದ ಸೂರಿಗಾಗಿ ಎದುರು ನೋಡುತ್ತಿದ್ದ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಟ್ಟು ಗ್ರಾಮದ ಬಸವೇಶ್ವರ ನಗರದ ೧೧೬ ಬುಡಕಟ್ಟು ಜನಾಂಗದ ಆದಿವಾಸಿಗಳಿಗೆ ಅಂತಿಮವಾಗಿ ಮನೆ ಭಾಗ್ಯ ದೊರೆತಿದೆ.
ಲೈನ್ ಮನೆಯಲ್ಲಿ ವಾಸವಿದ್ದ ಬಹುತೇಕ ಪರಿಶಿಷ್ಟ ವರ್ಗದ ಯರವ ಸಮುದಾಯದ ಕುಟುಂಬಗಳು ಬಸವೇಶ್ವರ ನಗರದಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದವು. ವರ್ಷ ಕಳೆಯುತ್ತಿದ್ದಂತೆ ಆದಿವಾಸಿಗಳು ವಾಸಿಸುತ್ತಿದ್ದ ಪ್ರದೇಶಕ್ಕೆ ಗಿರಿಜನ ಕಲ್ಯಾಣ ವತಿಯಿಂದ ಆದ್ಯತೆ ಮೇರೆ ಕುಡಿಯುವ ನೀರು, ವಿದ್ಯುತ್ಚ್ಛಕ್ತಿ, ರಸ್ತೆ, ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿತ್ತು.
ಬಹುತೇಕ ಮಂದಿಗೆ ಮೂಲ ದಾಖಲೆಗಳಿಲ್ಲದೆ ಮನೆ ನಿವೇಶನ ಮಂಜೂರು ಮಾಡಲು ಹಾಗೂ ಮನೆ ನಿರ್ಮಿಸಲು ಸಾಧ್ಯವಾಗಿರಲಿಲ್ಲ. ಅನ್ಯ ಮಾರ್ಗವಿಲ್ಲದೆ ಈ ಭಾಗದ ಜನರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಮುಂಭಾಗದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿ ಸರ್ಕಾರದ ಹಾಗೂ ಇಲಾಖೆಯ ಗಮನ ಸೆಳೆದಿದ್ದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಅಧಿಕಾರಿಗಳು ಅಗತ್ಯ ದಾಖಲಾತಿಗಳನ್ನು ಒದಗಿಸುವ ಭರವಸೆ ನೀಡಿದ್ದರು.
ಆದರೆ ತಾಂತ್ರಿಕ ಕಾರಣದಿಂದ ಬುಡಕಟ್ಟು ಜನಾಂಗದ ಹಲವು ಮಂದಿಗೆ ಆಧಾರ್, ಜಾತಿ ದೃಢೀಕರಣ ಮತ್ತಿತರ ದಾಖಲಾತಿಗಳು ಸಕಾಲದಲ್ಲಿ ಇವರ ಕೈಗೆ ಲಭಿಸಿರಲಿಲ್ಲ. ಇದರಿಂದಾಗಿ ದಾಖಲೆಗಳ ಕೊರತೆ ಮನೆ ನಿರ್ಮಾಣಕ್ಕೆ ಅಡ್ಡಿಯಾಗಿತ್ತು.
ಈ ವಿಷಯವು ಹಲವು ಸಭೆಗಳಲ್ಲಿ ಚರ್ಚೆ ಆಗಿತ್ತು. ಕೊಡಗು ಜಿಲ್ಲಾಧಿಕಾರಿಗಳಾದ ಡಾ. ಬಿ.ಸಿ. ಸತೀಶ ಅವರು ಈ ಕುಟುಂಬಗಳಿಗೆ ಅಗತ್ಯ ದಾಖಲಾತಿ ಒದಗಿಸಲು ವಿಶೇಷ ಕ್ಯಾಂಪ್ ತೆರೆಯುವಂತೆ ವೀರಾಜಪೇಟೆ ತಾಲೂಕಿನ ಗಿರಿಜನ ಕಲ್ಯಾಣಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆ ತಾಲೂಕು ಅಧಿಕಾರಿಗಳಾದ ಗುರುಶಾಂತಪ್ಪ, ಹಾತೂರು ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ಆಧಾರ್ ಹಾಗೂ ಇನ್ನಿತರ ದಾಖಲೆಗಳನ್ನು ಪಡೆಯಲು ಹಳ್ಳಿಗಟ್ಟು ಗ್ರಾಮದ ಬಸವೇಶ್ವರ ನಿವಾಸಿಗಳಿಗೆ ಕ್ಯಾಂಪ್ ಆರಂಭಿಸಿದರು. ಇದರಿಂದ ಈ ಭಾಗದಲ್ಲಿ ದಾಖಲೆಗಳಿಂದ ವಂಚಿತರಾಗಿದ್ದ ಪರಿಶಿಷ್ಟ ವರ್ಗದ ಕುಟುಂಬಗಳು ಅಗತ್ಯ ದಾಖಲೆಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಕುಟುಂಬಗಳಿಗೆ ಅವಶ್ಯವಿದ್ದ ಮನೆಗಳು ಇಲಾಖೆ ವತಿಯಿಂದ ಮಂಜೂರಾಗಲು ಅವಕಾಶವಾಗಿದೆ.
ದಕ್ಷಿಣ ಕೊಡಗಿನ ವಿವಿಧ ಭಾಗದ ಲೈನ್ ಮನೆಯಲ್ಲಿ ವಾಸವಿದ್ದ ಯರವ ಸಮುದಾಯದ ಕುಟುಂಬಗಳು ಸ್ವಂತ ಸೂರನ್ನು ಹೊಂದಲು ಕಳೆದ ನಾಲ್ಕು ವರ್ಷದ ಹಿಂದೆ ಹಳ್ಳಿಗಟ್ಟು ಗ್ರಾಮದ ಬಸವೇಶ್ವರ ನಗರದಲ್ಲಿ ಗುಡಿಸಲು ನಿರ್ಮಾಣ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ನಂತರದ ದಿನಗಳಲ್ಲಿ ಇಲ್ಲಿದ್ದ ಕುಟುಂಬಗಳು ಒಟ್ಟಾಗಿ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳ ಗಮನ ಸೆಳೆದಿದ್ದರು. ಈ ವೇಳೆ ಕ್ಷೇತ್ರದ ಶಾಸಕರ ವಿಶೇಷ ಕಾಳಜಿಯಿಂದ ಇಲ್ಲಿ ವಾಸವಿದ್ದ ಕುಟುಂಬಗಳಿಗೆ ಹಕ್ಕು ಪತ್ರ ಲಭ್ಯವಾಗಿತ್ತು. ಶಾಸಕರು ಹಕ್ಕು ಪತ್ರ ವಿತರಿಸಿ ಮನೆ ನಿರ್ಮಾಣದ ಭರವಸೆ ನೀಡಿದ್ದರು.
ಆದರೆ ಇಲ್ಲಿದ್ದ ಹಲವು ಕುಟುಂಬ ಗಳು ಬೇರೆಡೆಗೆ ತೆರಳಿದ್ದರಿಂದ ೫೦ಕ್ಕೂ ಅಧಿಕ ಕುಟುಂಬಗಳಿಗೆ ಮೂಲ ದಾಖಲಾತಿಗಳು ಲಭ್ಯವಾಗದೆ ಮನೆ ಮಂಜೂರು ಸಾಧ್ಯವಾಗಿರಲಿಲ್ಲ. ಇದೀಗ ಇಲ್ಲಿಂದ ತೆರಳಿದ ಕುಟುಂಬಗಳು ಮತ್ತೆ ವಾಪಸ್ಸಾಗಿ ರುವುದರಿಂದ ೧೧೬ ಕುಟುಂಬಗಳಿಗೆ ಇಲಾಖೆ ವತಿಯಿಂದ ಆಧಾರ್ ಸೇರಿದಂತೆ ಇನ್ನಿತರ ದಾಖಲೆಗಳು ಕೈ ಸೇರಿವೆ.
ಸೂಕ್ತ ದಾಖಲೆ ಇಲ್ಲದೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕುಟುಂಬಗಳು ಸ್ಥಳಾಂತರವಾಗುತ್ತಿದ್ದ ಹಿನ್ನೆಲೆಯಲ್ಲಿ ಇವರನ್ನು ಪತ್ತೆ ಹಚ್ಚುವುದು ಇಲಾಖೆಗೆ ದೊಡ್ಡ ಸಮಸ್ಯೆ ಯಾಗಿತ್ತು. ಆದರೂ ಇಲಾಖಾಧಿ ಕಾರಿಗಳು ಹೆಚ್ಚಿನ ಆಸಕ್ತಿ ವಹಿಸಿ ಹೊರಹೋಗಿದ್ದ ಕುಟುಂಬಗಳನ್ನು ಪತ್ತೆ ಹಚ್ಚಿ ಇವರುಗಳಿಗೆ ಬೇಕಾದ ಮೂಲ ದಾಖಲಾತಿಗಳನ್ನು ರೆವೆನ್ಯೂ ಇಲಾಖೆಯ ಮೂಲಕ ಕೊಡಿಸುವಲ್ಲಿ ಗಿರಿಜನ ಕಲ್ಯಾಣ ಇಲಾಖೆಯು ಯಶಸ್ವಿಯಾಗಿದೆ.
ಪ್ಲಾಸ್ಟಿಕ್ ಹೊದಿಕೆಗಳನ್ನೇ ಜೋಪಡಿಮಾಡಿ ಕೊಂಡು ಹಲವು ವರ್ಷಗಳ ಮಳೆಗಾಲವನ್ನು ಇದೇ ಜೋಪಡಿಯಲ್ಲಿ ಕಳೆದಿರುವ ನೂರಾರು ಕುಟುಂಬಗಳು ಮಳೆಗಾಲದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿದ್ದರು. ದಾಖಲಾತಿಗಳು ಲಭ್ಯವಾಗುತ್ತಿದ್ದಂತೆ ಅಧಿಕಾರಿಗಳು ಇವರ ದಾಖಲೆಗಳನ್ನು ಆನ್ಲೈನ್ ಮೂಲಕ ಅಪ್ಲೋಡ್ ಮಾಡಿ ಮನೆ ನಿರ್ಮಾಣಕ್ಕೆ ರಾಜೀವ್ಗಾಂಧಿ ವಸತಿ ನಿಗಮಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಮೂರುವರೆ ಲಕ್ಷ ವೆಚ್ಚದಲ್ಲಿ ಮನೆ
ಜಿಲ್ಲಾಧಿಕಾರಿಗಳ ಸೂಚನೆಯಂತೆ ಇಲ್ಲಿದ್ದ ಕುಟುಂಬ ಗಳಿಗೆ ಆಧಾರ್ ಸೇರಿದಂತೆ ಇನ್ನಿತರ ದಾಖಲಾತಿ ಗಳನ್ನು ಒದಗಿಸಲು ವಿಶೇಷ ಕ್ಯಾಂಪ್ ತೆರೆಯಲಾಗಿತ್ತು. ಈ ಭಾಗದ ೫೦ಕ್ಕೂ ಅಧಿಕ ಮಂದಿ ಕ್ಯಾಂಪ್ಗೆ ಆಗಮಿಸಿ ದಾಖಲಾತಿ ಗಳನ್ನು ಪಡೆದಿದ್ದಾರೆ. ಬಸವೇಶ್ವರ ನಗರದಲ್ಲಿ ಗಿರಿಜನ ಕಲ್ಯಾಣ ಇಲಾಖೆಯ ಮೂಲಕ ತಲಾ ಮೂರುವರೆ ಲಕ್ಷ ವೆಚ್ಚದಲ್ಲಿ ೧೧೬ ಕುಟುಂಬಗಳಿಗೆ ಮನೆ ಮಂಜೂರಾತಿ ಆಗಿದೆ. ದಾಖಲಾತಿಗಳ ಕೊರತೆ ಯಿಂದಾಗಿ ಇವರಿಗೆ ಮನೆ ಮಂಜೂರು ಮಾಡಲು ಸಾಧ್ಯವಾಗಿರ ಲಿಲ್ಲ. ಇದೀಗ ದಾಖಲೆಯ ಕೊರತೆಯ ಸಮಸ್ಯೆ ನೀಗಿದಂತಾಗಿದೆ. ಈ ಹಿಂದೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮನೆ ಮಂಜೂರಾತಿಗೆ ಮನೆ ಮಾಡಲಾಗಿತ್ತು. ಸರ್ಕಾರ ಇದೀಗ ಮನೆ ಮಂಜೂರಾತಿ ನೀಡಿದ್ದು ಮುಂದಿನ ಸಾಲಿನಲ್ಲಿ ಈ ಭಾಗದ ೧೧೬ ಕುಟುಂಬಗಳಿಗೆ ಸುಸಜ್ಜಿತ ಮನೆ ನಿರ್ಮಾಣವಾಗಲಿದೆ ಎಂದು ತಾಲೂಕು ಗಿರಿಜನ ಕಲ್ಯಾಣಾಧಿಕಾರಿ ಡಿ.ಜಿ. ಗುರು ಶಾಂತಪ್ಪ ತಿಳಿಸಿದ್ದಾರೆ.
ಹೋರಾಟದ ಫಲ
ಕಳೆದ ನಾಲ್ಕು ವರ್ಷಗಳಿಂದ ಮನೆ ನಿರ್ಮಾಣ ಕ್ಕಾಗಿ ಹಲವು ಹೋರಾಟಗಳನ್ನು ಕೈಗೆತ್ತಿಕೊಳ್ಳ ಲಾಗಿತ್ತು. ಈ ವೇಳೆ ಜಿಲ್ಲಾಧಿ ಕಾರಿಗಳು, ತಾಲೂಕು ಗಿರಿಜನ ಕಲ್ಯಾಣಾಧಿಕಾರಿಗಳು ಹಾಗೂ ತಹಶೀಲ್ದಾರ್ ಭರವಸೆ ನೀಡಿದ್ದರು. ನೀಡಿದ ಭರವಸೆಯಂತೆ ಇದೀಗ ಬಸವೇಶ್ವರ ನಗರದಲ್ಲಿರುವ ಕುಟುಂಬಗಳಿಗೆ ಮನೆ ಮಂಜೂರಾತಿ ಯಾಗಿದೆ. ಹಲವು ದಾಖಲೆಗಳ ಕೊರತೆಯನ್ನು ಅಧಿಕಾರಿಗಳು ನೀಗಿಸಿದ್ದಾರೆ. ಮುಂದೆ ಆದಷ್ಟು ಬೇಗನೇ ಮನೆ ನಿರ್ಮಾಣದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು.
ಹೋರಾಟಕ್ಕೆ ಫಲ ಲಭಿಸಿದೆ ಎಂದು ಬುಡಕಟ್ಟು ಕಾರ್ಮಿಕರ ಸಂಘದ ಅಧ್ಯಕ್ಷ ವೈ.ಬಿ. ಗಪ್ಪು ವ್ಯಕ್ತಪಡಿಸಿದ್ದಾರೆ.
ವರದಿ:- ಹೆಚ್.ಕೆ. ಜಗದೀಶ್