ನಾಪೋಕ್ಲು, ಜೂ. ೨೪: ಸ್ಥಳೀಯ ಸೇಕ್ರೆಡ್ ಹಾರ್ಟ್ ಶಾಲೆಯ ವಿದ್ಯಾರ್ಥಿ ಭವಿಷ್ಯದ ಮೇಲೆ ಆಡಳಿತ ಮಂಡಳಿ ಕಡೆಗಣನೆ ಮಾಡುತ್ತಿದೆ ಎಂದು ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಅಧ್ಯಕ್ಷ ಬಿದ್ದಾಟಂಡ ರೋಜಿ ಚಿಣ್ಣಪ್ಪ ಆರೋಪಿಸಿದ್ದಾರೆ. ಕಳೆದ ೧೦ ದಿನÀಗಳಿಂದ ಇಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಬದ್ದಂಜಟ್ಟೀರ ಗಪ್ಪಣ ಮತ್ತು ಶಾಲೆಯ ಪ್ರಾಂಶುಪಾಲರು ಶಿಕ್ಷಕರ ನಡುವೆ ಹೊಂದಾಣಿಕೆ ಕಳೆದುಕೊಂಡಿದ್ದು, ಇದರಿಂದ ಮನನೊಂದ ಶಿಕ್ಷಕರು ಶಾಲೆಗೆ ಬಂದಿಲ್ಲ. ಆದರೆ ಬಾರದ ಶಿಕ್ಷಕರನ್ನು ಆಡಳಿತ ಮಂಡಳಿ ಸೌಜನ್ಯಕ್ಕಾದರೂ ಕರೆಯದೆ ಅವರನ್ನು ಅವಮಾನಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಕೂಡಲೇ ಶಾಲಾ ಸಮಸ್ಯೆಯನ್ನು ಪರಿಹರಿಸಲು ಉಪನಿರ್ದೇಶಕರು ಕ್ರಮಕೈಗೊಳ್ಳಬೇಕು; ಶಾಲೆಯ ಮುಖ್ಯಸ್ಥರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಶಾಲೆ ನಡೆಸಲು ಅನುಮತಿ ನೀಡಿದಲ್ಲಿ ತೀವ್ರ ತರದ ಹೋರಾಟ ನಡೆಸಲಾಗುತ್ತದೆ ಎಂದು ಅವರು ಆರೋಪಿಸಿದರು.

ಇದು ಹೀಗೆ ಮುಂದುವರೆದರೆ ತಾರೀಕು ೨೫ ರಿಂದ ಶಾಲೆಯ ಗೇಟಿಗೆ ಬೀಗ ಜಡಿದು ಹೋರಾಟ ಮಾಡಲಾಗುವುದು ಎಂದು ಮಕ್ಕಳು, ಪೋಷಕರು ಎಚ್ಚರಿಸಿದ್ದಾರೆ ಎಂದು ರೋಜಿ ಚಿಣ್ಣಪ್ಪ ಅವರು ಹೇಳಿದರು.

ಪ್ರಾಂಶುಪಾಲೆ ಮಮತ ಮಾತನಾಡಿ ಕೇವಲ ೫ ನಿಮಿಷ ತಡವಾಗಿ ಶಾಲೆಗೆ ಆಗಮಿಸಿರುವುದರಿಂದ ಗಪ್ಪಣ್ಣ ತನ್ನ ಮೇಲೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ನಾನು ಕಳೆದ ೨೨ ವರ್ಷದಿಂದ ಶಾಲೆಯಲ್ಲಿ ದುಡಿಯುತ್ತಿದ್ದು ಬೇಸರವಾಗಿದೆ ಎಂದರು. ಗೋಷ್ಠಿಯಲ್ಲಿ ಶಿಕ್ಷಕ ಕೊಂಡೀರ ಶಶಿ ಪೂವಮ್ಮ ಇದ್ದರು.