ಮಡಿಕೇರಿ ಜೂ.೨೪ : ಕ್ರೀಡೆಯಲ್ಲಿ ತೊಡಗಿಸಿಕೊಂಡವರಲ್ಲಿ ಶ್ರದ್ಧೆ ಮತ್ತು ಕಠಿಣ ಶ್ರಮ ಇದ್ದರೆ ಯಶಸ್ಸು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ ಹೇಳಿದರು.

ಕೊಡಗು ಟೇಬಲ್ ಟೆನ್ನಿಸ್ ಅಸೋಸಿಯೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ೬ನೇ ವರ್ಷದ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಕೊಡಗು ಜಿಲ್ಲಾ ಟೇಬಲ್ ಟೆನ್ನಿಸ್ ಅಸೋಸಿಯೇಷನ್‌ನ ಕೆಲಸವನ್ನು ಶ್ಲಾಘಿಸಿದ ಅವರು, ಕೆಲವು ತಿಂಗಳುಗಳ ಹಿಂದೆ ಭೇಟಿ ನೀಡಿದಾಗ ಮೂಲಭೂತ ಸೌಕರ್ಯಗಳ ಕೊರತೆಯಿದ್ದ ಒಳಾಂಗಣ ಕ್ರೀಡಾಂಗಣ ಈಗ ಕ್ರೀಡಾಪಟುಗಳ ಬಳಕೆಗೆ ಯೋಗ್ಯವಾಗಿದೆ ಎಂದು ಸಂತಸಪಟ್ಟರು. ಶಾಶ್ವತ ಬೆಳಕಿನ ವ್ಯವಸ್ಥೆ ಮತ್ತು ಇನ್ನಷ್ಟು ಕ್ರೀಡಾ ಸಾಮಗ್ರಿಗಳನ್ನು ಹೆಚ್ಚಿಸುವಂತೆ ಸಲಹೆ ನೀಡಿದರು.

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ಗುರುಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಕ್ರೀಡೆಗೆ ಉತ್ತಮ ರೀತಿಯ ಬೆಂಬಲ ಸಿಗುತ್ತಿದೆ. ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ಎಲ್ಲ ತರಹದ ಸವಲತ್ತುಗಳನ್ನು ಒದಗಿಸಿ ಕೊಡಲಾಗುತ್ತಿದೆ ಎಂದರು.

ಜನನಿ ಹೆಲ್ತ್ಕೇರ್ ಸೆಂಟರ್‌ನ ಡಾ. ನವೀನ್ ಹಾಗೂ ಡಾ.ರಾಜೇಶ್ವರಿ ಮಾತನಾಡಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಕೊಡಗು ಟೇಬಲ್ ಟೆನ್ನಿಸ್ ಅಸೋಸಿಯೇಷನ್‌ನ ಗೌರವಾಧ್ಯಕ್ಷ ಮೊಹಮ್ಮದ್ ಆಸಿಫ್ ಮಾತನಾಡಿ, ಅಸೋಸಿಯೇಷನ್ ನ ಮೂಲ ಉದ್ಧೇಶದ ಬಗ್ಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸೋಸಿಯೇಷನ್‌ನ ಅಧ್ಯಕ್ಷ ಪ್ರವೀಣ್ ಶೇಟ್ ವಹಿಸಿದ್ದರು. ಕಾರ್ಯದರ್ಶಿ ಹಾಗೂ ಕ್ರೀಡಾಕೂಟದ ಮುಖ್ಯ ಆಯೋಜಕರಾದ ರಚನ್ ಪೊನ್ನಪ್ಪ ಪ್ರಾಸ್ಥಾವಿಕ ನುಡಿಗಳನ್ನಾಡಿ ಜಿಲ್ಲೆಯಲ್ಲಿ ಟೇಬಲ್ ಟೆನ್ನಿಸ್ ಆಟ ಹೇಗೆ ಆರಂಭಗೊAಡಿತು ಮತ್ತು ಅಸೋಸಿಯೇಷನ್ ವತಿಯಿಂದ ನಡೆಸಿದ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು.

ಅಸೋಸಿಯೇಷನ್‌ನ ಪದಾಧಿಕಾರಿಗಳಾದ ಜಿ.ವಿ. ರವಿಕುಮಾರ್, ಕುಮಾರೇಶ್, ಅಝರ್, ಪೊನ್ನಣ್ಣ ಮತ್ತಿತರರು ಹಾಜರಿದ್ದರು. ಮೂಡಗದ್ದೆ ವಿನೋದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾಕೂಟ ತಾ.೨೬ ರವರೆಗೆ ನಡೆಯಲಿದ್ದು ಸಬ್ ಜೂನಿಯರ್, ಜೂನಿಯರ್, ಮುಕ್ತ, ವೆಟರನ್ ವಿಭಾಗದಲ್ಲಿ ಪಂದ್ಯಾಟಗಳು ನಡೆಯಲಿದೆ.