ಮಡಿಕೇರಿ, ಜೂ. ೨೫: ೨೦೧೭ರಲ್ಲಿ ಸಂಭವಿಸಿದ ಭೂಕಂಪನ., ನಂತರದಲ್ಲಿ ೨೦೧೮, ೧೯, ೨೦ರಲ್ಲಿ ಉಂಟಾದ ಭೂಕುಸಿತದ ಅನುಭವ ಇನ್ನೂ ಕೂಡ ಕಣ್ಣ ಮುಂದೆ ಇರುವಾಗಲೇ ಇದೀಗ ಮತ್ತೆ ಭೂಮಿ ಕಂಪಿಸತೊಡಗಿದೆ. ಕಳೆದ ತಾ.೨೩ರಂದು ಉತ್ತರ ಕೊಡಗಿನ ಗಡಿಭಾಗವಾದ ಸೋಮವಾರಪೇಟೆ ತಾಲೂಕು, ಕುಶಾನಗರದ ಕೆಲವೆಡೆ, ಮಡಿಕೇರಿ, ದೇವಸ್ತೂರು ಮುಂತಾದೆಡೆ ಸೇರಿದಂತೆ ಹಾಸನ ಜಿಲ್ಲೆಯ ಕೆಲವೆಡೆ ಲಘು ಕಂಪನದ ಅನುಭವವಾಗಿತ್ತು. ಇದೀಗ ಎರಡು ದಿನಗಳ ಅಂತರದಲ್ಲಿ ಮತ್ತೆ ಭೂಮಿ ಕಂಪಿಸಿದ್ದು, ಜನತೆಯಲ್ಲಿ ಆತಂಕ ಸೃಷ್ಟಿ ಮಾಡಿದೆ. ಇದೀಗ ಮಳೆಗಾಲ ಕೂಡ ಆರಂಭವಾಗಿದ್ದು, ಈ ಹಿಂದಿನ ಮಳೆಗಾಲದ ಅವಾಂತರ ಮಾಸುವ ಮುನ್ನವೇ ಈ ರೀತಿಯ ಕಂಪನಗಳು ಜನತೆಯಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.

ಇಂದು ಬೆಳಿಗ್ಗೆ ೯.೧೦ರ ವೇಳೆಗೆ ಭಾರೀ ಶಬ್ಧದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಎರಡು ಸೆಕೆಂಡುಗಳ ಕಾಲ ಭೂಮಿ ನಡುಗಿದ್ದು, ಭೂಮಿಯೊಳಗಡೆ ಭಾರೀ ಶಬ್ಧದೊಂದಿಗೆ ಏನೋ ಓಡಾಡಿದ ಹಾಗೆ ಅನುಭವವಾಗಿದೆ. ಮನೆಯೊಳಗಡೆ ಇದ್ದ ಪಾತ್ರೆಗಳು, ಕುರ್ಚಿಗಳು ಅಲುಗಾಡಿ ಕೆಳಗಡೆ ಬಿದ್ದಿದ್ದರೆ, ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿವೆ. ಗೂಡಿನಲ್ಲಿದ್ದ ಸಾಕುಪ್ರಾಣಿಗಳ ಸಹಿತ ಪ್ರಾಣಿ ಪಕ್ಷಿಗಳು ಗಾಬರಿಯಿಂದ ಅರಚಾಡುತ್ತಾ ಅತ್ತಿತ್ತ ಓಡಾಡಿವೆ. ಜಿಲ್ಲೆಯ ಗಡಿಭಾಗವಾದ ಕರಿಕೆ, ಪೆರಾಜೆ, ಚೆಂಬು, ಕೊಯನಾಡು, ಸಂಪಾಜೆ ಸೇರಿದಂತೆ ನೆರೆಯ ಸುಳ್ಯ ತಾಲೂಕಿನ ಪರಿಸರದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.

೨.೩ ತೀವ್ರತೆ

ಕೊಡಗು ಜಿಲ್ಲೆಯ ವಿವಿಧೆಡೆ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ ಕಂಪನದ ಪ್ರಮಾಣ ೨.೩ರಷ್ಟು ದಾಖಲಾಗಿದೆ. ಕರಿಕೆಯೇ ಭೂಕಂಪನದ ಕೇಂದ್ರ ಪ್ರದೇಶವಾಗಿದೆ. ಕರಿಕೆ ಗ್ರಾ.ಪಂ. ವ್ಯಾಪ್ತಿಯಲ್ಲಿ ೪.೭ಕಿ.ಮೀ. ದೂರ, ಪೆರಾಜೆ, ಚೆಂಬುವಿನಲ್ಲಿ ೦೫ ಕಿ.ಮೀ.,

(ಮೊದಲ ಪುಟದಿಂದ) ಸಂಪಾಜೆ ಹೋಬಳಿಯಲ್ಲಿ ೧೨ಕಿ.ಮೀ.ದೂರದವರೆಗೆ ಸುಮಾರು ೧೦ ಅಡಿ ಆಳದಲ್ಲಿ ಕಂಪನವಾಗಿರುವದಾಗಿ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿಯ ಬೆಂಗಳೂರು ಕೇಂದ್ರದ ನಿರ್ದೇಶಕರು ಅಧಿಕೃತ ಮಾಹಿತಿ ನೀಡಿದ್ದಾರೆ. ಸಣ್ಣ ಪ್ರಮಾಣದ ಕಂಪನವಾಗಿದ್ದು, ಇದು ವಲಯ ೩ರಲ್ಲಿ ಬರುತ್ತದೆ. ಹಾಗಾಗಿ ಜನತೆ ಆತಂಕಪಡಬೇಕಾಗಿಲ್ಲ ಎಂದು ಪ್ರಟಣೆಯಲ್ಲಿ ತಿಳಿಸಿದ್ದಾರೆ. ಮುಂದೆ ಇಂತಹ ಸಂದರ್ಭ ಬಂದರೆ ಜಿಲ್ಲೆಯ ಜನತೆ ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ದೂರವಾಣಿ ಸಂಖ್ಯೆ ೦೮೨೭೨-೨೨೧೦೭೭ ಅಥವಾ ೦೮೨೭೨-೨೨೧೦೯೯ ಅನ್ನು ಸಂಪರ್ಕಿಸಲು ಕೋರಲಾಗಿದೆ.

ಗೋಡೆ ಬಿರುಕು

ಪೆರಾಜೆ ಗ್ರಾಮದಲ್ಲಿ ಭಾರೀ ಶಬ್ಧದೊಂದಿಗೆ ಭೂಮಿ ಕಂಪಿಸಿದೆ. ಭೂಮಿ ಅಲುಗಾಡಿದ ರಭಸಕ್ಕೆ ಅಲ್ಲಿನ ಪೆರುಮುಂಡ ಪಾಳ್ಯ ನಿವಾಸಿ ರಾಧಾಕೃಷ್ಣ ಎಂಬವರಿಗೆ ಸೇರಿದ ಕೊಟ್ಟಿಗೆ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಸುತ್ತಮುತ್ತಲಿನ ಗ್ರಾಮದ ಎಲ್ಲರ ಮನೆಯಲ್ಲಿಯೂ ಕಂಪನದೊAದಿಗೆ ಪಾತ್ರೆಗಳು ಅಲುಗಾಡಿದ ಶಬ್ಧ ಕೇಳಿಸಿವೆ. ಅಲ್ಲಿನ ಅಂಗನವಾಡಿಯಲ್ಲಿ ಜೋಡಿಸಿಟ್ಟಿದ್ದ ಪಾತ್ರೆಗಳು ಅಲುಗಾಡಿ ಕೆಳಗೆ ಬಿದ್ದಿವೆ. ಭಾರೀ ಶಬ್ಧ ಕೇಳಿಸಿದೆ ಎಂದು ರಾಧಾಕೃಷ್ಣ ಮಾಹಿತಿ ನೀಡಿದರು. ಸ್ಥಳಕ್ಕೆ ಸಂಪಾಜೆ ಹೋಬಳಿ ಕಂದಾಯ ನಿರೀಕ್ಷಕ ವೆಂಕಟೇಶ್ ಸಿಬ್ಬಂದಿಗಳೊAದಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಪಾತ್ರೆಗಳು ಅಲುಗಾಡಿರುವದು ಹಾಗೂ ಗೋಡೆ ಬಿರುಕು ಬಿಟ್ಟಿರುವದು ಮೇಲ್ನೋಟಕ್ಕೆ ಕಂಡುಬAದಿದೆ. ಯಾವದೇ ಹಾನಿ ಆಗಿರುವದಿಲ್ಲ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಸಂಪಾಜೆ, ಕೊಯನಾಡು ವ್ಯಾಪ್ತಿಯಲ್ಲಿಯೂ ಭೂಮಿ ಕಂಪಿಸಿದ ಅನುಭವ ಆಗಿದ್ದು, ಯಾವದೇ ಹಾನಿ ಸಂಭವಿಸಿಲ್ಲ.

ಪ್ರಾಣಿಗಳು ಗಾಬರಿ

ಭಾರೀ ಶಬ್ಧದೊಂದಿಗೆ ಭೂಮಿ ಅಲುಗಾಡಿದ್ದರಿಂದ ಪ್ರಾಣಿ ಪಕ್ಷಿಗಳೂ ಕೂಡ ಗಾಬರಿಗೊಂಡಿವೆ. ಕೇರಳವನ್ನು ಹೊಂದಿಕೊAಡಿರುವ ಗಡಿ ಗ್ರಾಮ ಕರಿಕೆಯಲ್ಲಿ ಈ ಅನುಭವವಾಗಿದೆ. ಕರಿಕೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಚ್ಚೆಪಿಲಾವ್ ಗ್ರಾಮ ನಿವಾಸಿ ಹೆಚ್.ಎಂ. ಕೇಶವ ಅವರ ಮನೆಯಲ್ಲಿ ಪಾತ್ರೆಗಳು ಅಲುಗಾಡಿ ಕೆಳಕ್ಕೆ ಬಿದ್ದಿವೆ. ಅಲ್ಲದೆ, ಹಂದಿ ಗೂಡಿನಲ್ಲಿ ಹಂದಿಗಳಿಗೆ ಆಹಾರ ನೀಡಲು ಇರಿಸಿದ್ದ ಪಾತ್ರೆ ಅಲುಗಾಡಿ ಶಬ್ಧ ಉಂಟಾಗಿದ್ದು, ಗೂಡಿನಲ್ಲಿದ್ದ ಹಂದಿಗಳು ಗಾಬರಿಗೊಂಡು ಅರಚಾಡುತ್ತಾ ಅತ್ತಿಂದಿತ್ತ ಓಡಾಡಿರುವದಾಗಿ ಕೇಶವ ತಿಳಿಸಿದ್ದಾರೆ.

ಕಾಲುಗಳಲ್ಲಿ ನಡುಕ

ಬೆಳಗ್ಗಿನ ಜಾವ ಜನರು ಕೆಲಸಕ್ಕೆ ತೆರಳುವ ಸಮಯವಾಗಿದ್ದು, ಕೆಲಸಕ್ಕೆ ತೆರಳುತ್ತಿದ್ದವರ ಕಾಲುಗಳು ನಡುಗಿದ ಅನುಭವವಾಗಿದೆ. ಕರಿಕೆ ಬಳಿಯ ಹದಿಮೂರನೇ ಮೈಲು ನಿವಾಸಿ ರಾಜೇಶ್ ಎಂಬವರು ಎಂದಿನAತೆ ಕೆಲಸಕ್ಕೆ ತೆರಳಿದ್ದು, ಆ ಸಂದರ್ಭದಲ್ಲಿ ಶಬ್ಧ ಉಂಟಾಯಿತು. ಕಾಲುಗಳು ನಡುಗಿದಂತಾಗಿ ಭೂಮಿಯೊಳಗೆ ಶಬ್ಧದೊಂದಿಗೆ ಏನೋ ಓಡಾಡಿದ ಅನುಭವವಾಯಿತು ಎಂದು ರಾಜೇಶ್ ತಮಗಾದ ಅನುಭವ ಹಂಚಿಕೊAಡರು.

ಸುಳ್ಯ ಪರಿಸರದಲ್ಲಿ.,

ನೆರೆಯ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹಲವೆಡೆ ಭೂಮಿ ಕಂಪಿಸಿದೆ. ಸಂಪಾಜೆ, ಕಲ್ಲುಗುಂಡಿ, ಗೂನಡ್ಕ, ಅರಂತೋಡು, ಅಡ್ತಲೆ, ಐವರ್ನಾಡು, ಪೇರಾಲು, ಮಂಡೆಕೋಲು, ತೊಡಿಕಾನ, ಆಲೆಟ್ಟಿ ಮುಂತಾದೆಡೆ ಭೂಕಂಪನವಾಗಿದ್ದು, ಹಲವೆಡೆ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಕಲ್ಲುಗುಂಡಿ ಬಳಿಯ ಗೂನಡ್ಕ ನಿವಾಸಿ, ಅಲ್ಲಿನ ಗ್ರಾಮ ಪಂಚಾಯ್ತಿ ಸದಸ್ಯ ಅಬುಶಾಲಿ ಅವರ ಮನೆಯ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಮನೆಯೊಳಗಡೆ ಇದ್ದ ಸಂದರ್ಭ ಭಾರೀ ಸದ್ದು ಕೇಳಿಸಿದೆ. ನಾನು ಹಾಗೂ ಪತ್ನಿ ಮನೆಯಿಂದ ಹೊರಗಡೆ ಓಡಿ ಬಂದೆವು. ಬಂದು ನೋಡುವಾಗ ಗೋಡೆಗಳಲ್ಲಿ ಮೂರು ಕಡೆಗಳಲ್ಲಿ ಬಿರುಕು ಬಿಟ್ಟಿರುವದು ಗೋಚರಿಸಿದೆ ಎಂದು ಅಬುಶಾಲಿ ಹೇಳಿದರು.

ಮಳೆಯಿಂದಾಗುವ ಅವಾಂತರವನ್ನು ಸಹಿಸಿಕೊಳ್ಳುವದೇಗೆ ಎಂಬ ಚಿಂತೆಯಲ್ಲಿ ಇರುವಾಗ ಈ ರೀತಿಯ ಪ್ರಕೃತಿಯ ಲೀಲೆಗಳನ್ನು ನೆನೆದು ಜನತೆ ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ.

ವರದಿ: ಸುಧೀರ್ ಹೊದ್ದೆಟ್ಟಿ, ಕಿರಣ್ ಕುಂಬಳಚೇರಿ, ಶಬರೀಶ್ ಕುದ್ಕುಳಿ