ಕರಿಕೆ, ಜೂ.೨೩: ತಲಕಾವೇರಿ ವನ್ಯಧಾಮದ ಪಾಕತ್‌ಕೊಲ್ಲಿಯ ಜಲಪಾತದ ಆಸುಪಾಸಿನಲ್ಲಿ ಪ್ರವಾಸಿಗರು ಎಸೆದ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಗಾಜಿನ ಬಾಟಲಿಗಳನ್ನು ತಲಕಾವೇರಿ ವನ್ಯಜೀವಿ ವಲಯದ ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ. ಈ ಬಗ್ಗೆ ‘ಶಕ್ತಿ'ಗೆ ಪ್ರತಿಕ್ರಿಯೆ ನೀಡಿದ ತಲಕಾವೇರಿ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಕೊಟ್ರೆಶ್ ಅವರು ಈಗಾಗಲೇ ತ್ಯಾಜ್ಯಗಳನ್ನು ಸಂಗ್ರಹಿಸಿ ಸ್ವಚ್ಛತಾ ಕಾರ್ಯ ನಡೆಸಿದ್ದು, ದಿನ ನಿತ್ಯ ರಸ್ತೆ ಬದಿ ಪ್ರವಾಸಿಗರು ಕಸ ತ್ಯಾಜ್ಯ ಎಸೆಯುತ್ತಿರುವುದರಿಂದ ನಿರ್ವಹಣೆ ಕಷ್ಟವಾಗಿದೆ. ತಮ್ಮ ಸಿಬ್ಬಂದಿಗಳು ನಿತ್ಯ ಗಸ್ತು ತಿರುಗುತ್ತಿದ್ದರೂ, ಸಿಬ್ಬಂದಿಗಳ ಕಣ್ಣು ತಪ್ಪಿಸಿ ಕಸ ಎಸೆಯುತ್ತಿದ್ದಾರೆ. ರಸ್ತೆ ಬದಿ ವಿನಾಕಾರಣ ವಾಹನ ನಿಲ್ಲಿಸುವ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗುತ್ತಿದೆ ಎಂದರು. ಈ ಬಗ್ಗೆ ‘ಶಕ್ತಿ’ ೨೨ರಂದು ‘ವನ್ಯ ಧಾಮ ಪಾಕತ್‌ಕೊಲ್ಲಿಯಲ್ಲಿ ಕಸದ ರಾಶಿ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿದನ್ನು ಇಲ್ಲಿ ಸ್ಮರಿಸಬಹುದು.

-ಸುಧೀರ್ ಹೊದ್ದೆಟ್ಟಿ