ಕೋವರ್‌ಕೊಲ್ಲಿ ಇಂದ್ರೇಶ್

ನವದೆಹಲಿ, ಜೂ. ೨೩: ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಬ್ಯಾಂಕ್‌ಗಳಿಗೆ ವಂಚಿಸುವ ಪ್ರಕರಣಗಳು ಬ್ಯಾಂಕ್‌ಗಳನ್ನೇ ಅನುಮಾನಿಸುವಂತೆ ಮಾಡುತ್ತಿವೆ.

ಕಾರ್ಪೊರೇಟ್ ವಲಯವು, ಉದ್ಯಮಿಗಳು ಬ್ಯಾಂಕ್‌ಗಳಿAದ ನೂರಾರು ಕೋಟಿ ರೂಪಾಯಿಗಳ ಸಾಲ ಪಡೆದು ನಂತರ ಕೈ ಎತ್ತುವ ಪ್ರಕರಣಗಳಿಗೆ ದೇಶದಲ್ಲಿ ನೂರಾರು ಉದಾಹರಣೆ ಇದ್ದರೆ ಮತ್ತೊಂದೆಡೆ ಜನಸಾಮಾನ್ಯರು ಪಡೆದ ಸಾಲಗಳನ್ನು ಬ್ಯಾಂಕಿನವರು ಮುಲಾಜಿಲ್ಲದೆ ವಸೂಲಿ ಮಾಡುತ್ತಿದ್ದಾರೆ. ಈ ಕೆಟ್ಟ ಸಾಲಗಳಿಗೆ ಹೊಸತೊಂದು ಸೇರ್ಪಡೆ ದಿ ಗ್ರೇಟ್ ಇಂಡಿಯನ್ ತಮಾಷಾ ಕಂಪೆನಿ ಮತ್ತು ದಿ ಗ್ರೇಟ್ ಇಂಡಿಯನ್ ನೌಟಂಕಿ ಕಂಪೆನಿಗಳಾಗಿವೆ.

ಈ ಎರಡೂ ಕಂಪೆನಿಗಳು ಐಡಿಬಿಐ, ಹೆಚ್ಡಿಎಫ್ಸಿ ಮತ್ತು ಬ್ಯಾಂಕ್ ಆಫ್ ಬರೋಡ ಬ್ಯಾಂಕ್‌ಗಳ ದೆಹಲಿ ಶಾಖೆಯಿಂದ ಪಡೆದಿರುವ ಸಾಲವು ಸುಸ್ತಿ ಆಗಿದ್ದು ಈ ಅನುತ್ಪಾದಕ ಸಾಲಗಳ ಒಟ್ಟು ಮೊತ್ತ ೧೪೮ ಕೋಟಿ ರೂಪಾಯಿಗಳಾಗಿವೆ. ಐಡಿಬಿಐ ಬ್ಯಾಂಕ್ ಈ ಕಂಪೆನಿಗೆ ಸೇರಿದ ಆಸ್ತಿಯನ್ನು ಹರಾಜು ಹಾಕಲು ಮುಂದಾಗಿದ್ದು ಈಗಾಗಲೇ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ಈ ಹರಾಜು ಪ್ರಕಟಣೆಯು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು ಈ ಕಂಪೆನಿಗಳ ಹೆಸರುಗಳು (ಮೊದಲ ಪುಟದಿಂದ) ನೆಟ್ಟಿಗರ ಗೇಲಿಗೆ ಕಾರಣವಾಗಿವೆ. ಅತ್ಯಂತ ಜವಾಬ್ದಾರಿಯಿಂದ ಸಾಲ ನೀಡಬೇಕಾದ ಬ್ಯಾಂಕುಗಳು ಸಾಲ ನೀಡುವಲ್ಲಿ ಎಡವಿದವೇ ಎಂಬ ಪ್ರಶ್ನೆ ಎದ್ದಿದೆ.

ದಿ ಗ್ರೇಟ್ ಇಂಡಿಯನ್ ನೌಟಂಕಿ ಎಂಬ ಕಂಪೆನಿಯು ಮೇಲಿನ ಮೂರು ಬ್ಯಾಂಕ್ ಗಳಿಂದ ಸಾಲ ಪಡೆದಿದ್ದು ಇದಕ್ಕೆ ಜಾಮೀನುದಾರರಾಗಿ ದಿ ಗ್ರೇಟ್ ಇಂಡಿಯನ್ ತಮಾಷಾ ಕಂಪೆನಿಯ ಆಸ್ತಿಗಳನ್ನು ನೀಡಿದೆ. ದಿ ಗ್ರೇಟ್ ಇಂಡಿಯನ್ ತಮಾಷಾ ಕಂಪೆನಿಗೆ ಅನುಮೋದ್ ಶರ್ಮಾ, ಡಾ. ಅನು ಅಪ್ಪಯ್ಯ, ಸಂಜಯ್ ಚೌಧರಿ, ವಿರಾಫ್ ಸರ್ಕಾರಿ ಎಂಬವರು ನಿರ್ದೇಶಕರಾಗಿದ್ದು ಇವರು ಸಾಲಕ್ಕೆ ಜಾಮೀನುದಾರರೂ ಆಗಿದ್ದಾರೆ. ಈ ಕಂಪೆನಿ ಕೊಡಗಿನ ಬಲ್ಲಮಾವಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪೇರೂರು ಗ್ರಾಮದ ಸರ್ವೆ ನಂಬರ್ ೭/೫, ೭/೧, ೭/೩, ೭/೫ ಹಾಗೂ ಸರ್ವೆ ನಂಬರ್ ೬ ಮತ್ತು ೪ ರಲ್ಲಿ ಒಟ್ಟು ೧೦೭.೨೪ ಎಕರೆ ಕಾಫಿ ತೋಟ ಹೊಂದಿದೆ. ಈಗ ಐಡಿಬಿಐ ಬ್ಯಾಂಕ್ ಈ ಆಸ್ತಿಗಳನ್ನು ೨೭-೭-೨೦೨೨ ರಂದು ಆನ್‌ಲೈನ್ ಹರಾಜಿಗೆ ಇಟ್ಟಿದೆ. ಈ ಆಸ್ತಿಗಳನ್ನು ೧೬-೭-೨೦೨೨ ರಂದು ಬಿಡ್‌ದಾರರಿಗೆ ಪರಿಶೀಲಿಸುವ ಅವಕಾಶ ನೀಡಲಾಗಿದೆ.

ದಿ ಗ್ರೇಟ್ ಇಂಡಿಯನ್ ನೌಟಂಕಿ ಕಂಪನಿಯು ಐಡಿಬಿಐ ಬ್ಯಾಂಕ್‌ಗೆ ೮೬.೪೮ ಕೋಟಿ ರೂ., ಎಚ್ಡಿಎಫ್‌ಸಿ ಬ್ಯಾಂಕ್‌ಗೆ ೬.೨೬ ಕೋಟಿ ರೂ. ಮತ್ತು ಬ್ಯಾಂಕ್ ಆಫ್ ಬರೋಡಾಕ್ಕೆ ೪೯.೨೩ ಕೋಟಿ ರೂ. ಸಾಲ ಮತ್ತು ಬಡ್ಡಿಯನ್ನು

ಬಾಕಿ ಉಳಿಸಿಕೊಂಡಿದ್ದು, ಈಗ ಕಾಫಿ ತೋಟಗಳನ್ನು ಹರಾಜು ಹಾಕುವ ಮೂಲಕ ಸಾಲ ವಸೂಲಾತಿಗೆ ಮುಂದಾಗಿದೆ. ಈ ಆಸ್ತಿಗಳಿಗೆ ೧೧.೫೩ ಕೋಟಿ ರೂಪಾಯಿಗಳ ಮೀಸಲು ಬೆಲೆಯನ್ನೂ ನಿಗದಿಪಡಿಸಿದೆ. ಆಸ್ತಿಗಳ ಆರ್ಟಿಸಿಯನ್ನು ಪರಿಶೀಲಿಸಿದಾಗ ಅವೆಲ್ಲವೂ ದಿ ಗ್ರೇಟ್ ಇಂಡಿಯನ್ ತಮಾಷಾ ಕಂಪೆನಿಯ ಹೆಸರಿನಲ್ಲಿವೆ.

ದಿ ಗ್ರೇಟ್ ಇಂಡಿಯನ್ ನೌಟಂಕಿ ಕಂಪನಿಯನ್ನು ಸೆಪ್ಟೆಂಬರ್ ೨೦೦೭ ರಲ್ಲಿ ದೆಹಲಿಯಲ್ಲಿ ನೋಂದಾಯಿತ ಕಚೇರಿಯೊಂದಿಗೆ ಸ್ಥಾಪಿಸಲಾಗಿದೆ. ಇದು ಭಾರತೀಯ ಸಂಸ್ಕೃತಿ ಮತ್ತು ಪ್ರದರ್ಶನ ಕಲೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಮನರಂಜನಾ ಸ್ಥಳಗಳು ಮತ್ತು ಪ್ರದರ್ಶನಗಳನ್ನು ಆಯೋಜನೆ ಮಾಡುವ ಚಟುವಟಿಕೆ ನಡೆಸುವುದಾಗಿ ಕಂಪೆನಿ ಸಚಿವಾಲಯಕ್ಕೆ ಮಾಹಿತಿ ನೀಡಿದೆ. ಕಂಪೆನಿಯು ಕಿಂಗ್ಡಮ್ ಆಫ್ ಡ್ರೀಮ್ಸ್, ನೌಟಂಕಿ ಮಹಲ್ ಮತ್ತು ಕಲ್ಚರ್‌ಗಲ್ಲಿ ಎಂಬ ಪ್ರದರ್ಶನ ನೀಡುವುದಾಗಿ ಹೇಳಿಕೊಂಡಿದೆ. ಜನವರಿ ೨೦೦೮ ರಲ್ಲಿ ಸ್ಥಾಪಿಸಲಾದ ದಿ ಗ್ರೇಟ್ ಇಂಡಿಯನ್ ತಮಾಷಾ ಕಂಪನಿಯು ರೂ. ೨ ಕೋಟಿ ರೂಪಾಯಿಗಳ ಅಧಿಕೃತ ಷೇರು ಬಂಡವಾಳದೊAದಿಗೆ ಸರ್ಕಾರೇತರ ಕಂಪನಿ ಎಂದು ವರ್ಗೀಕರಿಸಲ್ಪಟ್ಟಿದೆ ಮತ್ತು ಅದರ ಪಾವತಿಸಿದ ಬಂಡವಾಳವು ರೂ. ೨ ಲಕ್ಷವಾಗಿದೆ.

ಈ ಕಂಪೆನಿಗಳ ಹೆಸರುಗಳೇ ಗೇಲಿಗೆ ಕಾರಣವಾಗಿದ್ದು ಬ್ಯಾಂಕ್‌ಗಳ ವಿಶ್ವಾಸಾರ್ಹತೆ ಬಗ್ಗೆ ಸಾರ್ವಜನಿಕರು ಸಂದೇಹ ಪಡುವಂತಾಗಿದೆ.