*ಗೋಣಿಕೊಪ್ಪ, ಜೂ. ೨೩: ಜಿಲ್ಲಾ ಪಂಚಾಯಿತಿ ವತಿಯಿಂದ ನೀಡುವ ೨೦೨೨ನೇ ಸಾಲಿನ ಅತ್ಯುತ್ತಮ ಮೂರು ಪ್ರಶಸ್ತಿಗಳನ್ನು ಗೋಣಿಕೊಪ್ಪ ಗ್ರಾಮ ಪಂಚಾಯಿತಿ ತನ್ನದಾಗಿಸಿಕೊಂಡಿದೆ.
ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ಪಂಚಾಯಿತಿ ಪಂಚಾಯತ್ ರತ್ನ ಪ್ರಶಸಿ, ಉತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿ, ಉತ್ತಮ ಡೇಟಾ ಎಂಟ್ರಿ ಆಪರೇಟರ್ ನಿರ್ವಹಣೆ ಎಂಬ ಮೂರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಎಂದು ಪಂಚಾಯಿತಿ ಅಧ್ಯಕ್ಷೆ ಚೈತ್ರ ಬಿ. ಚೇತನ್ ಅವರು ಮಾಹಿತಿ ನೀಡಿದ್ದಾರೆ. ಸ್ವಂತ ಸಂಪನ್ಮೂಲ ಬಳಸಿ ಗ್ರಾಮೀಣ ಗ್ರಂಥಾಲಯವನ್ನು ಅತ್ಯುತ್ತಮವಾಗಿ ಉನ್ನತೀಕರಿಸಿ ಡಿಜಿಟಲ್ ಗ್ರಂಥಾಲಯವನ್ನಾಗಿ ಪರಿವರ್ತಿಸಿರುವುದರಿಂದ ಪಂಚಾಯತ್ ರತ್ನ ಪ್ರಶಸ್ತಿ, ಎಂ.ಜಿ.ಎನ್.ಆರ್.ಇ.ಜಿ.ಎ. ಯೋಜನೆಯಡಿಯಲ್ಲಿ ಸಮಗ್ರ ಪ್ರಗತಿ ಸಾಧಿಸಿರುವುದರಿಂದ ಉತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿ ಪಡೆದುಕೊಳ್ಳಲಾಗಿದೆ. ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಹೆಚ್ ದಿವ್ಯ ಅವರಿಗೆ, ಉತ್ತಮ ಡೇಟಾ ಎಂಟ್ರಿ ಆಪರೇಟರ್ ಎಂಬ ಪ್ರಶಸ್ತಿಯನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರುಗಳು, ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.