ಸೋಮವಾರಪೇಟೆ, ಜೂ. ೨೩: ಇಂದು ನಸುಕಿನ ಜಾವ ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಕುಶಾಲನಗರ ಹಾಗೂ ಮಡಿಕೇರಿ ಬಳಿಯ ದೇವಸ್ತೂರಿನಲ್ಲಿ ಭೂಮಿ ಲಘುವಾಗಿ ಕಂಪಿಸಿದೆ. ಬೆಳಗ್ಗಿನ ಜಾವ ೪.೩೭ ರಿಂದ ೪.೪೪ರವರೆಗೆ ಅಲ್ಲಲ್ಲಿ ಭೂಮಿ ಕಂಪಿಸಿದ ಅನುಭವ ಆಗಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸೋಮವಾರಪೇಟೆ ಪಟ್ಟಣದ ರೇಂಜರ್ ಬ್ಲಾಕ್, ನೇಗಳ್ಳೆ, ಕುಸುಬೂರು, ಹಿರಿಕರ, ಚೌಡ್ಲು ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕೆಲ ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದೆ. ನೇಗಳ್ಳೆ ಗ್ರಾಮಲ್ಲಿ ೪.೪೪ರ ಸುಮಾರಿಗೆ ಭೂಮಿ ಕಂಪಿಸಿದೆ ಎಂದು ಗ್ರಾಮಸ್ಥ ಪವನ್ ತಿಳಿಸಿದ್ದಾರೆ. ನಿದ್ರೆಯಿಂದ ಎಚ್ಚರಿಕೆಯಾದ ಸಂದರ್ಭ ಕೆಲ ಸೆಕೆಂಡ್‌ಗಳ ಕಾಲ ಭೂಮಿ ನಡುಗಿದ ಅನುಭವವಾಗಿದೆ. ಮನೆಯ ಕಿಟಕಿಗಳು ಅಲುಗಾಡಿವೆ ಎಂದು ತಿಳಿಸಿದ್ದಾರೆ.

ಪಟ್ಟಣದ ರೇಂಜರ್ ಬ್ಲಾಕ್‌ನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಶರ್ಮಿಳಾ ಅವರು ಮಾಹಿತಿ ನೀಡಿದ್ದಾರೆ. ಅಂತೆಯೇ ಕುಸುಬೂರು-ಬೇಳೂರು ಗ್ರಾಮದಲ್ಲಿ ಭೂ ಕಂಪನವಾದ ಬಗ್ಗೆ ಹರ್ಷ ನಿರಂಜನ್ ತಿಳಿಸಿದ್ದಾರೆ. ಮಲಗಿದ್ದ ಸಂದರ್ಭ ಒಮ್ಮೆಲೆ ಭೂಮಿಯೊಳಗೆ ಶಬ್ದ ಬಂದು ಕ್ಷಣಕಾಲ ಅಲುಗಾಡಿದ ಅನುಭವವಾಗಿದೆ. ಮನೆಗೆ ಯಾವುದೇ ರೀತಿಯ ಅಪಾಯವಾಗಿಲ್ಲ ಎಂದು ಹರ್ಷ ಹೇಳಿದ್ದಾರೆ.

ಮಾಪಕ ದುರಸ್ತಿ : ಕಳೆದ ಒಂದೂವರೆ ದಶಕಗಳ ಹಿಂದೆ ಜನತಾ ಕಾಲೋನಿ ಹಾಗೂ ರೇಂಜರ್ ಬ್ಲಾಕ್‌ನಲ್ಲಿ ಲಘು ಭೂಕಂಪನ ಉಂಟಾಗಿದ್ದ ಸಂದರ್ಭ ರೇಂಜರ್ ಬ್ಲಾಕ್‌ನಲ್ಲಿ ಕಂಪನದ ತೀವ್ರತೆ ದಾಖಲಾಗುವ ರಿಕ್ಟರ್ ಮಾಪಕವನ್ನು ಅಳವಡಿಸಲಾಗಿತ್ತು. ತದ ನಂತರದ ವರ್ಷಗಳಲ್ಲಿ ಈ ಬಗ್ಗೆ ಉದಾಸೀನ ತೋರಿದ್ದರ ಪರಿಣಾಮ ನಿರ್ವಹಣೆಯ ಕೊರತೆಯಿಂದ ಮಾಪಕ ದುರಸ್ತಿಗೀಡಾಗಿ ಸಂಬAಧಿಸಿದ ಇಲಾಖೆಯವರೇ ವಾಪಸ್ ತೆಗೆದುಕೊಂಡು ಹೋಗಿದ್ದರು. ಇದೀಗ ಭೂ ಕಂಪನಗಳು

(ಮೊದಲ ಪುಟದಿಂದ) ಉಂಟಾದರೆ ಹಾಸನದ ರಿಕ್ಟರ್ ಮಾಪಕದ ಮೊರೆ ಹೋಗುವಂತಾಗಿದೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲೂ ಭೂಮಿ ಕಂಪಿಸಿದ್ದರಿAದ ಮುಖ್ಯಾಧಿಕಾರಿ ನಾಚಪ್ಪ, ಉಪಾಧ್ಯಕ್ಷ ಸಂಜೀವ ಸೇರಿದಂತೆ ಇತರರು ರೇಂಜರ್ ಬ್ಲಾಕ್‌ಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಚರ್ಚೆ ನಡೆಸಿದರು. ಇದರೊಂದಿಗೆ ರಿಕ್ಟರ್ ಮಾಪಕವಿದ್ದ ಸ್ಥಳವನ್ನು ಪರಿಶೀಲಿಸಿದರು.

ವಲಯ ೩ರಲ್ಲಿ ಕೊಡಗು: ನೆರೆಯ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ನಗರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲುಗಾನಹಳ್ಳಿಯಿಂದ ೦.೮ ಕಿ. ಮೀ. ದೂರದಲ್ಲಿ, ೧೦ ಅಡಿ ಆಳದಲ್ಲಿ ಇಂದು ಬೆಳಿಗ್ಗೆ ೪ ಗಂಟೆ ೩೭ ನಿಮಿಷ ೨೧ ಸೆಕೆಂಡ್‌ಗೆ ಭೂಕಂಪನವಾಗಿರುವ ಬಗ್ಗೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಇದರ ತೀವ್ರತೆ ೩.೪ ಎಂದು ತಿಳಿದುಬಂದಿದ್ದು, ಈ ಬಗ್ಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿಯ ಬೆಂಗಳೂರಿನ ಕೇಂದ್ರ ಕಚೇರಿ ಅಧಿಕೃತವಾಗಿ ಮಾಹಿತಿ ನೀಡಿದೆ.

ಹಾಸನಕ್ಕೆ ಒತ್ತಿಕೊಂಡಿರುವ ಕೊಡಗಿನಲ್ಲೂ ಲಘು ಕಂಪನವಾಗಿದ್ದು, ಸೋಮವಾರಪೇಟೆ ಮತ್ತು ಮಡಿಕೇರಿ ತಾಲೂಕಿನ ದೇವಸ್ತೂರು ಗ್ರಾಮದಲ್ಲಿ ಭೂಮಿ ಕಂಪಿಸಿರುವುದು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ.

ಸೋಮವಾರಪೇಟೆಯ ರೇಂಜರ್ ಬ್ಲಾಕ್, ಅಮ್ಮಳ್ಳಿ, ನೇಗಳ್ಳೆ, ಕುಸುಬೂರು, ಹಿರಿಕರ, ಮಡಿಕೇರಿಯ ದೇವಸ್ತೂರು ಸೇರಿದಂತೆ ಹಾಸನ- ಕೊಡಗು ಗಡಿ ಭಾಗದಲ್ಲಿ ಹಲವು ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದ್ದು, ಯಾರಿಗೂ ಯಾವುದೇ ರೀತಿ ತೊಂದರೆಯಾದ ಬಗ್ಗೆ ವರದಿಯಾಗಿಲ್ಲ.

ಹಾಸನ ಜಿಲ್ಲೆ ಭೂ ಕಂಪನದ ವಲಯ ೨ಕ್ಕೆ ಒಳಪಟ್ಟಿದ್ದರೆ, ಕೊಡಗು ಜಿಲ್ಲೆ ವಲಯ ೩ಕ್ಕೆ ಒಳಪಟ್ಟಿದೆ. ಭೂ ಕಂಪನದ ಕೇಂದ್ರ ಬಿಂದುವಿನಿAದ ಸುಮಾರು ೫೦ ರಿಂದ ೬೦ ಕಿ.ಮೀ.ವರೆಗೂ ಇದರ ಅನುಭವ ಇರುತ್ತದೆ. ಅಂತೆಯೇ ಈ ಕೇಂದ್ರ ಬಿಂದುವಿನಿAದ ಸೋಮವಾರಪೇಟೆ ೪೬ (ವಾಯು ದೂರ) ಹಾಗೂ ಮಡಿಕೇರಿಯಿಂದ ೫೬ ಕಿ.ಮೀ. ಅಂತರದಲ್ಲಿರುವುದರಿAದ ವಲಯ ೩ರ ವ್ಯಾಪ್ತಿಯಲ್ಲಿ ಬರುವ ಕೊಡಗಿನಲ್ಲೂ ಭೂ ಕಂಪನ ಆಗಿದೆ. ಈ ಕಂಪನದಿAದ ಭಯ ಪಡುವ ಅಗತ್ಯವಿಲ್ಲ. ಹೆಚ್ಚೆಂದರೆ ಮನೆಯಲ್ಲಿರುವ ವಸ್ತುಗಳು ಅಲುಗಾಡಬಹುದು. ಗಾಬರಿಯಾಗುವ ಅವಶ್ಯಕತೆಯಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಪ್ರಕಟಣೆ ತಿಳಿಸಿದೆ.

ಕುಶಾಲನಗರ : ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಬುಧವಾರ ಮುಂಜಾನೆ ಭೂಮಿ ಕಂಪಿಸಿದ ಅನುಭವ ಆಗಿದ್ದು ಕೆಲವೆಡೆ ಜನರು ಆತಂಕಕ್ಕೆ ಒಳಗಾದ ಪರಿಸ್ಥಿತಿ ಸೃಷ್ಟಿಯಾಗಿತ್ತು.

ಮುಂಜಾನೆ ೪.೩೭ರ ಅವಧಿಯಲ್ಲಿ ಕುಶಾಲನಗರ ತಾಲೂಕು ವ್ಯಾಪ್ತಿಯ ಜನತೆಗೂ ಕಂಪನದ ಅನುಭವ ಉಂಟಾದ ಬಗ್ಗೆ ತಿಳಿದುಬಂದಿದೆ.

ಕುಶಾಲನಗರ ಪಟ್ಟಣದಲ್ಲಿ ಬೆಳಿಗ್ಗೆ ಭೂಕಂಪನ ಅನುಭವ ಆಗಿರುವ ಬಗ್ಗೆ ಬಾಪೂಜಿ ಬಡಾವಣೆಯ ನಿವಾಸಿ ಗಿರೀಶ್ ಶಕ್ತಿಯೊಂದಿಗೆ ತಮ್ಮ ಅನುಭವ ಹಂಚಿಕೊAಡಿದ್ದಾರೆ.

ಬೆಳಿಗ್ಗೆ ತಾವು ಎದ್ದು ಮನೆಯಲ್ಲಿ ಇದ್ದ ಸಂದರ್ಭ ತಮಗೆ ಭೂಮಿ ಕೆಲವೇ ಕ್ಷಣಗಳ ಅಂತರದಲ್ಲಿ ಅಲುಗಾಡಿದ ಅನುಭವ ಆಗಿದೆ ಎಂದು ಹೇಳಿದ್ದಾರೆ. ತಮ್ಮ ಕುಟುಂಬ ಸದಸ್ಯರಿಗೂ ಈ ಅನುಭವ ಉಂಟಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.

ಸಮೀಪದ ಹೆಬ್ಬಾಲೆ, ಕೊಪ್ಪ, ಗ್ರಾಮಗಳ ಜನತೆ ಹಾಗೂ ನೆರೆಯ ಕೆಲವು ಗ್ರಾಮಗಳ ಜನರ ಅನುಭವಕ್ಕೆ ಕೂಡ ಭೂಕಂಪನ ಆದ ಬಗ್ಗೆ ಮಾಹಿತಿ ಲಭಿಸಿದೆ.

ಈ ಬಗ್ಗೆ ಹಿರಿಯ ಭೂ ವಿಜ್ಞಾನಿ ಡಾ. ಹೆಚ್.ಎಸ್.ಎಂ. ಪ್ರಕಾಶ್ ಅವರು ಶಕ್ತಿಯೊಂದಿಗೆ ಪ್ರತಿಕ್ರಿಯಿಸಿದ್ದು, ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕು ತಾತನಹಳ್ಳಿ ಬಳಿ ಭೂಕಂಪದ ಕೇಂದ್ರ ಬಿಂದುವಾಗಿದ್ದು, ರಿಕ್ಟರ್ ಮಾಪಕದಲ್ಲಿ ೩.೪ ಪ್ರಮಾಣದ್ದಾಗಿದೆ ಎಂದು ತಿಳಿಸಿದ್ದಾರೆ.

ಚೆನ್ನರಾಯಪಟ್ಟಣ, ಹಳ್ಳಿಮೈಸೂರು, ಕೊಣನೂರು ಸೇರಿದಂತೆ ಕೊಡಗು ಜಿಲ್ಲೆಯ ಕುಶಾಲನಗರ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಅಲ್ಪ ಪ್ರಮಾಣದ ಭೂಕಂಪನ ಆಗಿರುವುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಇದರಿಂದ ಯಾವುದೇ ಆತಂಕ ಭಯ ಪಡಬೇಕಾದ ಅವಶ್ಯಕತೆ ಇಲ್ಲ ಎಂದಿರುವ ಪ್ರಕಾಶ್ ಮುಂದಿನ ದಿನಗಳಲ್ಲಿ ಇದೇ ರೀತಿಯ ಅಲ್ಪ ಪ್ರಮಾಣದ ಭೂಕಂಪನಗಳು ಬೆಂಗಳೂರು ಮತ್ತಿತರ ವ್ಯಾಪ್ತಿಯಲ್ಲಿ ಆಗುವ ಸಂಭವ ಇದೆ ಎಂದು ತಿಳಿಸಿದ್ದಾರೆ. -ವಿಜಯ್ ಹಾನಗಲ್, ಚಂದ್ರಮೋಹನ್