ಹೊದ್ದೂರು, ಜೂ. ೨೩: ಕೊಡಗು ಜಿಲ್ಲೆಯ ವಿದ್ಯುತ್ ಗ್ರಾಹಕರು ಅತ್ಯಂತ ಪ್ರಾಮಾಣಿಕವಾಗಿ ಶುಲ್ಕ ಪಾವತಿಸುತ್ತಿರುವರು. ಆದರೆ, ಜಿಲ್ಲೆಯ ಗ್ರಾಹಕರಿಗೆ ಮೈಸೂರಿನ ಸಹಾಯ ವಾಣಿಯಿಂದ ಸಕಾಲಿಕ ಸ್ಪಂದನ ದೊರೆಯದ ಹಿನ್ನೆಲೆಯಲ್ಲಿ ಜಿಲ್ಲೆಗೆ ಪ್ರತ್ಯೇಕ ಸಹಾಯವಾಣಿ ಕೇಂದ್ರ ಸ್ಥಾಪಿಸುವ ಅಗತ್ಯದ ಬಗ್ಗೆ ಒತ್ತಾಯ ಕೇಳಿಬಂತು.

ಮಡಿಕೇರಿ ಉಪ ವಿಭಾಗದ ಕಚೇರಿಯ ಸಭಾಂಗಣದಲ್ಲಿ ಜೂ. ೨೧ ರಂದು ಆಯೋಜಿತವಾದ ಸಭೆಯಲ್ಲಿ ಈ ಬಗ್ಗೆ ಹಿರಿಯಾಧಿಕಾರಿಗಳ ಗಮನ ಸೆಳೆಯಲಾಯಿತು.

ಕೂಡಂಡ ರವಿ ಈ ಬಗ್ಗೆ ಮಾತನಾಡಿದರು. ಚಾಮುಂಡೇಶ್ವರಿ ವಿದ್ಯುತ್ ನಿಗಮದ ಸಹಾಯ ವಾಣಿಯು ಮೈಸೂರು-ಕೊಡಗು ಜಿಲ್ಲೆಗಳ ವ್ಯಾಪ್ತಿ ಹೊಂದಿದೆ. ಅಲ್ಲಿ ಕೇವಲ ನಾಲ್ಕು ದೂರವಾಣಿ ಲೈನ್‌ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಆದುದರಿಂದ ಅಲ್ಲಿನ ಸಿಬ್ಬಂದಿ ವರ್ಗ ಕೊಡಗು ಜಿಲ್ಲೆಯ ಗ್ರಾಹಕರ ಕರೆಗಳಿಗೆ ಸಕರಾತ್ಮಕ ಸ್ಪಂದನ ನೀಡುತ್ತಿಲ್ಲ. ದೂರುಗಳೇ ನೋಂದಣಿಯಾಗುತ್ತಿಲ್ಲ. ಇದರಿಂದ ಜಿಲ್ಲೆಯ ಗ್ರಾಹಕರು ಸಮಸ್ಯೆಗಳನ್ನು ಎದುರಿಸುತ್ತಿರುವರು.

ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ವ್ಯಾಪ್ತಿಗೆ ಸೀಮಿತವಾದ ಪ್ರತ್ಯೇಕ ಸಹಾಯವಾಣಿ ಕೇಂದ್ರ ಸ್ಥಾಪಿಸಬೇಕೆಂದು ರವಿ ಒತ್ತಾಯಿಸಿದರು.

ಜಿಲ್ಲೆಯ ಗ್ರಾಮೀಣ ಭಾಗದವರು ನಿರಂತರ ವಿದ್ಯುತ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅತ್ತ ಸೀಮೆಣ್ಣೆಯು ದೊರಕುತ್ತಿಲ್ಲ. ಇತ್ತ ವಿದ್ಯುತ್ ಇಲ್ಲದೆ, ಜನತೆ ಕತ್ತಲ ಕೂಪದಲ್ಲಿ ದಿನ ದೂಡುವಂತಾಗಿದೆ.

ಗ್ರಾಮೀಣ ಭಾಗದಲ್ಲಿ ಪ್ರತೀ ಮನೆಯಲ್ಲಿ ಮಾಸಕ್ಕೆ ಕೇವಲ ೧೦- ೧೫ ಯೂನಿಟ್ ವಿದ್ಯುತ್ ಬಳಕೆಯಾಗುತ್ತಿದೆ. ಇದರಿಂದಾಗಿ ಸೆಸ್ಕ್ ಕಾರ್ಯ ವೈಖರಿಯ ಬಗ್ಗೆ ಗ್ರಾಹಕರು ಅಸಮಾಧಾನ ಗೊಳ್ಳುತ್ತಿರುವರು ಎಂದು ಗ್ರಾಹಕರೋರ್ವರು ತಮ್ಮ ವಿದ್ಯುತ್ ಬಿಲ್ಲನ್ನು ಸಭೆಯಲ್ಲಿ ದಾಖಲೆಯಾಗಿ ಪ್ರದರ್ಶಿಸಿದರು. ಕಡಗದಾಳು ಶ್ರೀಬೊಟ್ಲಪ್ಪ ಯುವಕ ಸಂಘದ ಶೇಖರ್ ಮಾತನಾಡಿ, ಗ್ರಾಮದಲ್ಲಿ ಸಮಸ್ಯೆಯಾಗಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಬೇಕೆAದರು.

ಮಡಿಕೇರಿ ಉಪ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರ ಅಶೋಕ್ ಮಾತನಾಡಿ, ವಿದ್ಯುತ್ ಅದಾಲತ್ ಸಭೆಗಳಲ್ಲಿ ಅತ್ಯಧಿಕ ಸಂಖ್ಯೆಯ ಗ್ರಾಹಕರು ಭಾಗವಹಿಸಿ, ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಬೇಕು. ಆಗ ಮಾತ್ರ ಸೆಸ್ಕ್ಗೆ ಉತ್ತಮ ಸೇವೆ ನೀಡಲು ಸಾಧ್ಯ. ವಿದ್ಯುತ್ ಸಹಾಯವಾಣಿ ಕೇಂದ್ರ ಸ್ಥಾಪನೆಯ ಬಗ್ಗೆ ಹಿರಿಯಾಧಿ ಕಾರಿಗಳೊಂದಿಗೆ ಚರ್ಚಿಸಲಾಗುವುದು. ಹೊದ್ದೂರು ಗ್ರಾಮದ ವಿದ್ಯುತ್ ಸಮಸ್ಯೆಗಳ ಕ್ಷಿಪ್ರ ಪರಿಹಾರಕ್ಕಾಗಿ ತಾವು ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಸಭೆಯಲ್ಲಿ ನಾಪೋಕ್ಲು ಶಾಖಾಧಿಕಾರಿಗಳಾದ ಹರೀಶ್ ಹೆಚ್. ಆರ್, ಮಡಿಕೇರಿ ನಗರದ ಶಾಖಾಧಿಕಾರಿ ಸಂಪತ್, ಮಡಿಕೇರಿ ಗ್ರಾಮಾಂತರ ವಿಭಾಗದ ಶಾಖಾಧಿಕಾರಿ ಹೇಮಂತ್ ರಾಜ್, ಭಾಗಮಂಡಲ ವಿಭಾಗದ ಶಾಖಾಧಿಕಾರಿ ತೇಜ ಎಂ. ಎಂ. ಸಂಪಾಜೆ ವಿಭಾಗಗಳ ಶಾಖಾಧಿ ಕಾರಿಗಳು ಮತ್ತು ಸಂತೋಷ್ ಕುಮಾರ್ ಇತರರು ಹಾಜರಿದ್ದರು.