ನಾಪೋಕ್ಲು, ಜೂ. ೨೨: ವಿವಿಧ ಅಭಿವೃದ್ಧಿ ಕಾರ್ಯಗಳ ಮೂಲಕ ಮಾದರಿ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹೊದ್ದೂರು ಗ್ರಾಮ ಪಂಚಾಯಿತಿಗೆ ಅರುಣಾಚಲ ಪ್ರದೇಶದ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿತು. ಅರುಣಾಚಲ ಪ್ರದೇಶದ ಎಸ್‌ಐಆರ್‌ಡಿಯ ಸಹಾಯಕ ನಿರ್ದೇಶಕ ಸುಂಕ್ವಾಡ ಬಂಗೌನ್ಸ್ ನೇತೃತ್ವದ ೩೨ ಪಂಚಾಯಿತ್ ರಾಜ್ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಹಲವು ಮಾಹಿತಿಗಳನ್ನು ಸಂಗ್ರಹಿಸಿದರು. ಕರ್ನಾಟಕ ಪಂಚಾಯಿತ್ ರಾಜ್ ವ್ಯವಸ್ಥೆ ಕುರಿತು ಅಧ್ಯಯನ ನಡೆಸುವಲ್ಲಿ ಸಕ್ರಿಯವಾಗಿರುವ ತಂಡ ಹೊದ್ದೂರು ಗ್ರಾಮಪಂಚಾಯಿತಿಯ ಪ್ರಗತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿತು.

ಈ ಸಂದರ್ಭ ಹೊದ್ದೂರು ಗ್ರಾಮಪಂಚಾಯಿತಿ ಅಧ್ಯಕ್ಷ ಕುಸುಮಾವತಿ, ಪಿಡಿಓ ಎ.ಎ.ಅಬ್ದುಲ್ಲ, ಉಪಾಧ್ಯಕ್ಷೆ ಸರಸು, ಸದಸ್ಯರಾದ ಚೌರೀರ ನವೀನ್, ಹಂಸ ಕೊಟ್ಟಮುಡಿ, ಅನಿತಾಅಪ್ಪಣ್ಣ, ಹಮೀದ್ ಕಬಡಕೇರಿ, ಜಿಲ್ಲಾ ಸಾಮಾಜಿಕ ಲೆಕ್ಕಪರಿಶೋಧಕ ಪ್ರೀತಂ ಪೊನ್ನಪ್ಪ, ಕಾರ್ಯದರ್ಶಿ ಚಂದ್ರಶೇಖರ್, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಪ್ರತಿನಿಧಿಗಳಾದ ಮಲ್ಲಿಕಾರ್ಜುನ ಸ್ವಾಮಿ ಪ್ರಕಾಶ್ ಹಾಗೂ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.