ಸೋಮವಾರಪೇಟೆ, ಜೂ. ೨೧: ಸಣ್ಣದೊಂದು ಸಭಾಂಗಣ., ಬಣ್ಣದ ದೀಪಗಳಿಲ್ಲ., ವೇದಿಕೆಗೆ ಅಲಂಕಾರವಿಲ್ಲ., ಸರಿಯಾದ ಧ್ವನಿವರ್ಧಕದ ವ್ಯವಸ್ಥೆ ಇಲ್ಲ., ರಾತ್ರಿ ೧೦ ಗಂಟೆಯಾದರೂ ಕಾರ್ಯಕ್ರಮ ಆರಂಭವಾಗುವ ಸೂಚನೆಗಳೂ ಇರಲಿಲ್ಲ., ಅಷ್ಟೇ ಏಕೇ..? ಸ್ಥಳದಲ್ಲಿ ಕಾರ್ಯಕ್ರಮದ ಆಯೋಜಕರ ಸುಳಿವು ಕೂಡ ಇರಲಿಲ್ಲ..!
ಇದು ಸೋಮವಾರಪೇಟೆಯಲ್ಲಿ ಆಯೋಜಿತವಾಗಿದ್ದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯ ಅವಸ್ಥೆ..! ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ, ದಾನಿ ಹರಪಳ್ಳಿ ರವೀಂದ್ರ ಅವರ ಹುಟ್ಟು ಹಬ್ಬದ ಅಂಗವಾಗಿ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘ ಹಾಗೂ ಕೆವಿಬಿ ಫ್ರೆಂಡ್ಸ್ ಆಶ್ರಯದಲ್ಲಿ ರಾಜ್ಯಮಟ್ಟದ ಕಬಡ್ಡಿ ಹಾಗೂ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು. ರಾತ್ರಿ ಅಲ್ಲಿನ ಅಟಲ್‌ಜಿ ಕನ್ನಡ ಭವನದಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ನಡೆಯಿತು. ಇದನ್ನು ರಾಜ್ಯ ಮಟ್ಟದ ಅನ್ನುವದಕ್ಕಿಂತ ‘ರಾಜ್ಯಮುಟ್ಟದ’ ಸ್ಪರ್ಧೆ ಎಂದು ಕಾರ್ಯಕ್ರಮಕ್ಕೆ ಬಂದಿದ್ದವರು ಆಡಿಕೊಳ್ಳುತ್ತಿದ್ದರು. ಏಕೆಂದರೆ ಸ್ಪರ್ಧೆಗೆ ಬಂದಿದ್ದು ಕೇವಲ ನಾಲ್ಕು ತಂಡಗಳು ಮಾತ್ರ. ಅದೂ ಕೂಡ ಮಡಿಕೇರಿ, ಸೋಮವಾರಪೇಟೆ, ಸುಂಟಿಕೊಪ್ಪ, ಕುಶಾಲನಗರದ ತಂಡಗಳು..!
ವ್ಯವಸ್ಥೆ ಇಲ್ಲ..!
ಪತ್ರಿಕಾಗೋಷ್ಠಿ ನಡೆಸಿದ್ದ ಆಯೋಜಕರು ಸಂಜೆ ೬ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ೮.೩೦ಕ್ಕೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಘೋಷಿಸಿದ್ದರು. ಹಾಗಾಗಿ ತಂಡಗಳು ೫ಗಂಟೆಗೆ ಆಗಮಿಸಿ ತಯಾರಿ ಮಾಡಿಕೊಂಡಿದ್ದರು. ಬಟ್ಟೆ ಬದಲಾಯಿಸಲು ಒಂದು ಕೋಣೆ ಕೂಡ ಇಲ್ಲದೆ ಹೆಣ್ಣು ಮಕ್ಕಳಿಂದ ಹಿಡಿದು ನೃತ್ಯ ಪಟುಗಳು ತಾವು ಬಂದಿದ್ದ ವಾಹನದಲ್ಲಿಯೇ ಬಟ್ಟೆ ಬದಲಾಯಿಸಿಕೊಳ್ಳುವಂತಾಯಿತು..!
ರಾತ್ರಿ ಹತ್ತಾದರೂ ಸುಳಿವಿಲ್ಲ..!
ಇತ್ತ ಎಲ್ಲ ತಯಾರಿ ಮಾಡಿ ಕೊಂಡ ತಂಡಗಳು ಕಾರ್ಯಕ್ರಮಕ್ಕಾಗಿ ಕಾಯುತ್ತಲಿದ್ದರೆ, ರಾತ್ರಿ ಒಂಭತ್ತು ಗಂಟೆಯಾದರೂ ಯಾರದೂ ಸುಳಿವಿಲ್ಲ. ಹುಟ್ಟು ಹಬ್ಬದ ಶುಭಾಶಯ ಕೋರುವ ಫ್ಲೆಕ್ಸ್ ಅಳವಡಿಸಿದ್ದ ವೇದಿಕೆ ಬಳಿ ಒಂದೆರಡು ಮಂದಿ ಅತ್ತಿಂದಿತ್ತ ಒಡಾಡುತ್ತಿದ್ದರು. ಪ್ರಕಟಣೆಯಲ್ಲಿ ನೀಡಲಾಗಿದ್ದ ಮೊಬೈಲ್‌ಗೆ ಕರೆ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ. ಒಂಭತ್ತು ಗಂಟೆ ವೇಳೆಗೆ ಕಬಡ್ಡಿ ಪಂದ್ಯಾಟ ಮುಗಿಸಿ ಕ್ರೀಡಾಪಟುಗಳೊಂದಿಗೆ ಅಭಿಮಾನಿ ಸಂಘದವರು ಆಗಮಿಸಿ ಸಭಾ ಕಾರ್ಯಕ್ರಮದೊಂದಿಗೆ ರವಿಂದ್ರ ಅವರ ಹುಟ್ಟು ಹಬ್ಬ ಆಚರಿಸಿ, ಬಹುಮಾನ ವಿತರಿಸಿ ಸಭಾಂಗಣ ದಿಂದ ಕೆಳಗಿಳಿದರು. ಅಷ್ಟರಲ್ಲಾಗಲೇ ಬಣ್ಣ ಬಳಿದುಕೊಂಡು ತಯಾರಿಯಲ್ಲಿದ್ದ, ಹಸಿವಿನಿಂದ ಬಳಲಿದ್ದ ಮಕ್ಕಳು ಅದಾಗ ತಾನೇ ಬಂದ ಪಲಾವ್ ತಿನ್ನಲು ಮುಂದಾದರು. ‘ಇನ್ನು ಕಾರ್ಯಕ್ರಮ ಇಲ್ಲ, ಮೇಕಪ್ ಹೋದರೂ ಪರವಾಗಿಲ್ಲ’ ಎಂದು ಊಟ ಮಾಡಿದರು.
ಹೊರಬಿದ್ದ ಅಸಮಾಧಾನ..!
ಅಷ್ಟರಲ್ಲಿ ಕಾರ್ಯಕ್ರಮ ಮುಗಿಸಿ ಕೆಳಗಿಳಿದ ರವೀಂದ್ರ ಹಾಗೂ ಅಭಿಮಾನಿ ಸಂಘದವರನ್ನು ಕಂಡ ನೃತ್ಯ ಸಂಯೋಜಕರು, ಪೋಷಕರು ಹಾಗೂ ಸಾರ್ವಜನಿಕರು ತಮ್ಮ ಅಸಮಾಧಾನ ಹೊರಹಾಕಿದರು. ‘ನಿಮ್ಮ ಹೆಸರಿಗೆ ಕಳಂಕ ತರಲು ಇಂತಹ ಕಾರ್ಯಕ್ರಮ ಹಾಕಿ ಕೊಂಡಿದ್ದಾರೆ, ಐದು ಗಂಟೆಯಿAದ ಕಾಯುತ್ತಿದ್ದೇವೆ, ಆಯೋಜಕರು ಪತ್ರಿಕಾಗೋಷ್ಠಿಯಲ್ಲಿ ನೀಡಿರುವ ಮೊಬೈಲ್‌ಗೆ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ, ಸೋಮವಾರಪೇಟೆ ಯಲ್ಲಿ ಇದುವರೆಗೆ ಇಂತಹ ಕಳಪೆ ಕಾರ್ಯಕ್ರಮ ಆಗಿಲ್ಲ, ಇನ್ನು ಮುಂದಕ್ಕೆ ಹೀಗೆಲ್ಲ ಮಾಡಬೇಡಿ’ ಎಂದು ರವೀಂದ್ರ ಅವರ ಸಮ್ಮುಖದಲ್ಲೇ ಆಕ್ರೋಶ ವ್ಯಕ್ತಪಡಿಸಿದರು. ‘ಡ್ಯಾನ್ಸ್ ಕಾರ್ಯಕ್ರಮ ನಾವು ಆಯೋಜನೆ ಮಾಡಿಲ್ಲ, ಅದು ಕೆವಿಬಿ ಸಂಘದವರು ಮಾಡಿದ್ದು’ ಎಂದು ಅಭಿಮಾನಿ ಸಂಘದವರು ಸಮಜಾಯಿಷಿಕೆ ನೀಡಿದರು. ಅಸಮಾಧಾನಿತರಾದ ರವೀಂದ್ರ, ‘ಅಂತವರನ್ನೆಲ್ಲ ಯಾಕೆ ಸೇರಿಸುತ್ತೀರಾ, ಅವಮಾನ ಮಾಡಿಸಲಿಕ್ಕಾ, ಪಾಪ ಮಕ್ಕಳನ್ನ ಎಷ್ಟೂಂತ ಕಾಯಿಸ್ತೀರಾ..? ಎಂದು ಆಯೋಜಕರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಕೂಡಲೇ ಕಾರ್ಯಕ್ರಮ ಆರಂಭಿಸುವAತೆ ಸೂಚಿಸಿದರು.ಕಾಟಾಚಾರದ ಕಾರ್ಯಕ್ರಮ..!
ಅಂತೂ ಹತ್ತೂವರೆಗೆ ಕಾರ್ಯಕ್ರಮ ಆರಂಭಗೊAಡಿತು. ಹತ್ತಿಪ್ಪತ್ತು ಮಂದಿ ಪ್ರೇಕ್ಷಕರನ್ನು ಬಿಟ್ಟರೆ ನೃತ್ಯ ಪಟುಗಳೇ ಪ್ರೇಕ್ಷಕರಾಗಿದ್ದರು. ನೃತ್ಯ ಸ್ಪರ್ಧೆಗೆ ಬೇಕಾಗುವ ಯಾವದೇ ಬೆಳಕಿನ ವ್ಯವಸ್ಥೆ ಇಲ್ಲದೆ, ಸಭಾಂಗಣದಲ್ಲಿ ಅಳವಡಿಸಲಾಗಿರುವ ಟ್ಯೂಬ್‌ಲೈಟ್ ಬೆಳಕಿನಲ್ಲಿಯೇ ಮಕ್ಕಳು ನೃತ್ಯ ಮಾಡಿದರು. ತೀರ್ಪುಗಾರರ ಸ್ಥಾನದಲ್ಲಿ ಕುಳಿತಿದ್ದವರು ‘ನೃತ್ಯ ಪಟುಗಳ ಮುಖದಲ್ಲಿ ಮಂದಹಾಸ ಕಡಿಮೆ ಇತ್ತು, ಅದು ಸರಿಲ್ಲ, ಇದು ಸರಿ ಇಲ್ಲ..’ ಎಂದು ತಮ್ಮ ಅಭಿಪ್ರಾಯ ತಿಳಿಸುತ್ತಿರುವಂತೆ, ‘ಡ್ಯಾನ್ಸ್ಗೆ ಬೇಕಾದ ಒಂದು ಸಣ್ಣ ವ್ಯವಸ್ಥೆ ಕೂಡ ಇಲ್ಲಿ ಇಲ್ಲ, ಐದು ಗಂಟೆಗೆ ತಯಾರಾದ ಮಕ್ಕಳನ್ನ ಹನ್ನೊಂದು ಗಂಟೆಗೆ ಡ್ಯಾನ್ಸ್ ಮಾಡಿಸಿದರೆ ಮಂದಹಾಸ ಎಲ್ಲಿಂದ ಬರಬೇಕು..?’ ಎಂದು ನೃತ್ಯ ಸಂಯೋಜಕರು ತಮ್ಮ ಅಸಮಾಧಾನ ವನ್ನು ಹೊರಹಾಕಿದರು. ತೀರ್ಪು ಗಾರಿಕೆಯಲ್ಲೂ ಅನ್ಯಾಯವಾಗಿದೆ ಎಂದು ಮೂರನೇ ಸ್ಥಾನಕ್ಕೆ ಭಾಜನರಾದ ಎರಡು ತಂಡಗಳು ಬಹುಮಾನವನ್ನು ತಿರಸ್ಕರಿಸಿ ಸಭಾಂಗಣದಿAದ ಹೊರನಡೆದ ಪ್ರಸಂಗವೂ ಎದುರಾಯಿತು. ಸೋಮವಾರಪೇಟೆಯಲ್ಲಿ ಈವರೆಗಿನ ಎಲ್ಲ ಕಾರ್ಯಕ್ರಮಗಳ ಪೈಕಿ ಇದೊಂದು ಅತ್ಯಂತ ಕಳಪೆ ಮಟ್ಟದ ಕಾರ್ಯಕ್ರಮ ಎಂದು ಜನರೇ ಆಡಿಕೊಳ್ಳುತ್ತಿದ್ದರು..! -ಎಕ್ಸ್