ಶನಿವಾರಸಂತೆ, ಜೂ. ೨೧: ಪಟ್ಟಣದ ಸಮೀಪ ಕಾಜೂರು ಗ್ರಾಮಕ್ಕೆ ಕಟ್ಟಡದ ಗಾರೆ ಕೆಲಸಕ್ಕಾಗಿ ವಲಸೆ ಬಂದಿರುವ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ೩ ಕಾರ್ಮಿಕ ಕುಟುಂಬಗಳ ೮ ವಿದ್ಯಾರ್ಥಿಗಳನ್ನು ಸ್ಥಳೀಯ ತ್ಯಾಗರಾಜ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಾಖಲಿಸಲಾಯಿತು.
೮ ಜನ ಮಕ್ಕಳು ಯಾವುದೇ ಶಾಲೆಗೆ ದಾಖಲಾಗದೇ ಅಲ್ಲಿನ ವೆಂಕಟೇಶ್ವರ ಕಲ್ಯಾಣ ಮಂಟಪದ ಸುತ್ತ ತಿರುಗಾಡುತ್ತಿದ್ದುದನ್ನು ಗಮನಿಸಿದ ಗ್ರಾಮಸ್ಥರು ಮಕ್ಕಳ ಸಹಾಯವಾಣಿ (೧೦೯೮)ಗೆ ಮಾಹಿತಿ ನೀಡಿದ್ದರು. ಮಾಹಿತಿ ಅನ್ವಯ ಮಕ್ಕಳ ಸಹಾಯವಾಣಿ ಅಧಿಕಾರಿ ಕುಸುಮಾ ಹಾಗೂ ಸಿಬ್ಬಂದಿ ಶನಿವಾರಸಂತೆಗೆ ಆಗಮಿಸಿ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್ ಹಾಗೂ ಮುಖ್ಯ ಶಿಕ್ಷಕ ಪುಟ್ಟಸ್ವಾಮಿ ಅವರೊಂದಿಗೆ ವಲಸೆ ಕಾರ್ಮಿಕರ ಕುಟುಂಬವಿರುವ ಸ್ಥಳಕ್ಕೆ ತೆರಳಿದರು. ಪೋಷಕರ ಮನವೊಲಿಸಿ ಅವರೊಂದಿಗೆ ಮಕ್ಕಳನ್ನು ಶಾಲೆಗೆ ಕರೆತಂದು ದಾಖಲಿಸಲಾಯಿತು.
ಮಕ್ಕಳು ಕಲಿಯುತ್ತಿದ್ದ ಹಿಂದಿನ ಶಾಲೆಯ ಮುಖ್ಯಸ್ಥರನ್ನು ಸಂಪರ್ಕಿಸಿ ಮಕ್ಕಳ ದಾಖಲಾತಿ ಪತ್ರ, ದೃಢೀಕರಣ ಪತ್ರ ಅಂಚೆ ಮೂಲಕ ಕಳುಹಿಸುವಂತೆ ಕೋರಲಾಗಿದೆ. ಅವರಿಗೆ ಪತ್ರ ರವಾನಿಸಲಾಯಿತು ಎಂದು ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್ ತಿಳಿಸಿದ್ದಾರೆ.